Tuesday, April 15, 2025

Latest Posts

‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨’ ಜಾರಿಗೆ ತರುವ ಕುರಿತು ಚರ್ಚಿಸಲು “ಚಿಂತನಾ ಗೋಷ್ಠಿ”

- Advertisement -

Banglore News:

ಬೆಂಗಳೂರು: ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದ ಇವುಗಳ ರಕ್ಷಣೆ, ಪ್ರಸಾರ ಮತ್ತು ಅಭಿವೃದ್ಧಿಯ ಮೂಲ ಧ್ಯೇಯೋದ್ದೇಶಗಳೊಂದಿಗೆ ಕನ್ನಡ-ಕನ್ನಡಿಗ-ಕರ್ನಾಟಕದ ಹಿತರಕ್ಷಣೆ ಕಾಪಾಡುವ ಜವಾಬ್ದಾರಿಯನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ ಕುರಿತು ಚರ್ಚಿಸಲು ವಿಶೇಷ ಚಿಂತನಾಗೋಷ್ಠಿಯನ್ನು ಅಕ್ಟೋಬರ್ ೧೨ರಂದು ಬೆಳಿಗ್ಗೆ ೧೧ ಗಂಟೆಗೆ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಆಯೋಜಿಸಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ಅವರು ತಿಳಿಸಿದ್ದಾರೆ.

ನ್ಯಾಯಮೂರ್ತಿ ಶ್ರೀ ಎಸ್.ಆರ್. ಬನ್ನೂರಮಠ ನೇತೃತ್ವದ ಕರ್ನಾಟಕ ಕಾನೂನು ಆಯೋಗವು ತನ್ನ ಐವತ್ತೇಳನೇ ವರದಿಯಲ್ಲಿ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨” ಅನ್ನು ಸಿದ್ಧಪಡಿಸಿ, ವರದಿಯ ಅನುಷ್ಠಾನಕ್ಕಾಗಿ ಅಗತ್ಯ ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಈ ವರದಿಯಲ್ಲಿ ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗಾಗಿ ಮತ್ತು ಕನ್ನಡಿಗರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಉತ್ತಮ ಅವಕಾಶಗಳನ್ನು ಒದಗಿಸುವುದಕ್ಕಾಗಿ ಉಪಬಂಧ ಕಲ್ಪಿಸುವ ಒಂದು ವಿಧೇಯಕ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ. ಈ ವಿಧೇಯಕವನ್ನು ಕಾನೂನು ಆಗುವ ಸಂಬAಧ ದಿನಾಂಕ ೨೨-೦೯-೨೦೨೨ ರಂದು ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶ್ರೀ ವಿ ಸುನಿಲ್ ಕುಮಾರ್ ಅವರು ವಿಧಾನಸಭೆಯ ಅಧಿವೇಶನದಲ್ಲಿ ವಿಧೇಯಕ ಮಂಡಿಸಿದ್ದಾರೆ. ಈ ವಿಧೇಯಕವು ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ಜರುಗಲಿರುವ ಅಧಿವೇಶನದಲ್ಲಿ ಚರ್ಚೆಯಾಗುವ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಗಣ್ಯರನ್ನು ಒಳಗೊಂಡ ವಿಶೇಷ ಚಿಂತನಾಗೋಷ್ಠಿಯನ್ನು ಆಯೋಜಿಸಿದೆ.

ಈ ವಿಚಾರಗೋಷ್ಠಿಯಲ್ಲಿ ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರಾದ ಶ್ರೀ ಜೆ.ಸಿ. ಮಾಧುಸ್ವಾಮಿ, ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ಶ್ರೀ ವಿ ಸುನೀಲ್ ಕುಮಾರ್, ಮಾಜಿ ಕಾನೂನು ಸಚಿವ ಶ್ರೀ ಎಚ್.ಕೆ. ಪಾಟೀಲ, ಜ್ಞಾನಪೀಠ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ, ಹಿರಿಯ ಸಾಹಿತಿ ಡಾ. ಎಸ್.ಎಲ್. ಭೈರಪ್ಪ,  ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ, ಕರ್ನಾಟಕ ಉಚ್ಚನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಶ್ರೀ ಅರಳಿ ನಾಗರಾಜ , ಶ್ರೀ ಎಚ್.ಎಸ್. ನಾಗಮೋಹನ್ದಾಸ್ ಸೇರಿದಂತೆ ವಿವಿಧ ಗಣ್ಯರು, ವಿಷಯ ತಜ್ಞರು ಭಾಗವಹಿಸಿ ವಿಚಾರ ಮಂಡಿಸಲಿದ್ದಾರೆ.

ಕನ್ನಡ ಭಾಷೆಯ ಅಭಿವೃದ್ಧಿ ಕುರಿತು ಸಿದ್ಧಪಡಿಸಲಾದ ಈ ವಿಧೇಯಕವನ್ನು ಜಾರಿ ಮಾಡಲೇಬೇಕಾದ ಅನಿವಾರ್ಯತೆ ಸರ್ಕಾರಕ್ಕೆ ಇದ್ದು, ವಿಧೇಯಕ ಸಿದ್ಧಗೊಳಿಸಿರುವುದು ಆಗಲೇಬೇಕಾದ ಮತ್ತು ಶ್ರೇಷ್ಠ ಕಾರ್ಯವೆಂದು ತಿಳಿಸಿ, ಈ ವಿಧೇಯಕವನ್ನು ಜಾರಿಗೆ ಆಗ್ರಹಿಸಿ ಸರ್ಕಾರಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮುಖ್ಯಮಂತ್ರಿ ಅವರಿಗೆ ಪತ್ರ ಬರೆಯಲಾಗಿತ್ತು. ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ, ತಾಲ್ಲೂಕು ಹಾಗೂ ಅಸ್ತಿತ್ವದಲ್ಲಿರುವ ಹೋಬಳಿ ಘಟಕಗಳ ಮೂಲಕ ಆಯಾ ಜಿಲ್ಲೆಯ ಎಲ್ಲಾ ಶಾಸಕರುಗಳನ್ನು ಮತ್ತು ವಿಧಾನ ಪರಿಷತ್ತಿನ ಸದಸ್ಯರನ್ನು ಸಂಪರ್ಕಿಸಿ, ವಿಧೇಯಕದ ಮಹತ್ವ ಮತ್ತು ಅನಿವಾರ್ಯತೆ ಕುರಿತು ಮನವರಿಕೆ ಮಾಡಿಕೊಡಲಾಯಿತು. ವಿಧಾನಸಭೆಯ ಅಧಿವೇಶನದಲ್ಲಿ ವಿಧೇಯಕ ಜಾರಿಗೆ ತರಲು ಒಮ್ಮತದಿಂದ ಅನುಮೋದಿಸಬೇಕೆಂದು ಶಾಸಕರುಗಳಲ್ಲಿ ವಿಶೇಷ ಮನವಿ ಮಾಡಿಕೊಳ್ಳಲಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನ ಮನವಿಯನ್ನು ಪುರಸ್ಕರಿಸಿದ ಶಾಸಕರು, ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨’ ಅನ್ನು ಜಾರಿಗೆ ತರಲು ಸದನದಲ್ಲಿ ಪಕ್ಷಭೇದ ಮರೆತು, “ನಾವೆಲ್ಲರೂ ಕನ್ನಡಿಗರು” ಎಂಬ ಭಾವದಲ್ಲಿ ಒಕ್ಕೊರಲ ಧ್ವನಿಯಿಂದ ಅನುಮೋದಿಸುವುದಾಗಿ ಈ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತು ಪತ್ರದ ಮೂಲಕ, ಮಾಧ್ಯಮಗಳ ಮೂಲಕ ಮನವಿ ಮಾಡಿಕೊಂಡಿದ್ದನ್ನು ನಾಡೋಜ ಡಾ. ಮಹೇಶ ಜೋಶಿ ಸ್ಮರಿಸಿದ್ದಾರೆ.

ಪ್ರಸ್ತುತ ಚಿಂತನಾಗೋಷ್ಠಿಯಲ್ಲಿ ನಾಡಿನ ವಿವಿಧ ಕ್ಷೇತ್ರದ ತಜ್ಞರು, ಸಾಧಕರು, ಸಾಹಿತಿಗಳು, ಚಿಂತಕರು, ಕನ್ನಡಪರ ಹೋರಾಟಗಾರರು ಸೇರಿದಂತೆ ಎಲ್ಲಾ ಕ್ಷೇತ್ರದ ಗಣ್ಯರು ಭಾಗವಹಿಸಿ, “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨”ರ ಕುರಿತು ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ. ಈಗಾಗಲೇ ಸಿದ್ಧಪಡಿಸಿ, ವಿಧಾನಸಭೆಯಲ್ಲಿ ಮಂಡಿಸಿರುವ ವಿಧೇಯಕದಲ್ಲಿರುವ ಸಾಧಕ-ಬಾಧಕಗಳು, ಕನ್ನಡ ಭಾಷೆಯ ಸಂಪೂರ್ಣ ಅಭಿವೃದ್ಧಿಗಾಗಿ, ನ್ಯಾಯಾಂಗದಲ್ಲಿ ಕನ್ನಡಕ್ಕಾಗಿ, ಕೈಗಾರಿಕೆಯಲ್ಲಿ ಕನ್ನಡ, ಶಿಕ್ಷಣದಲ್ಲಿ ಕನ್ನಡ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸಮಗ್ರವಾಗಿ ಕನ್ನಡವನ್ನು ಬೆಳೆಸುವ ಹಿನ್ನೆಲೆಯಲ್ಲಿ ಚಿಂತನಗೋಷ್ಠಿಯಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.

“ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨” ರ ಕಲಂ-೭ರಲ್ಲಿ ‘ಅಧಿಕೃತ ಭಾಷೆಯ ಅನುಷ್ಠಾನಕ್ಕಾಗಿ ಕಾರ್ಯವ್ಯವಸ್ಥೆ’ ಶೀರ್ಷಿಕೆಯಲ್ಲಿ ಒಂದು ರಾಜ್ಯಮಟ್ಟದ ಸಮಿತಿ ಇರತಕ್ಕದ್ದು ಎಂದು ಉಲ್ಲೇಖಿಸಲಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನು   ‘ರಾಜ್ಯಮಟ್ಟದ ಸಮಿತಿಯ ಸದಸ್ಯರನ್ನಾಗಿಯೂ ಮತ್ತು ಜಿಲ್ಲಾ ಮಟ್ಟದ ಸಮಿತಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುಗಳನ್ನು ‘ಜಿಲ್ಲಾ ಮಟ್ಟದ ಸದಸ್ಯರುಗಳನ್ನಾಗಿಯೂ ಸೇರಿಸಲಾಗಿತ್ತು. ಆದರೆ ಅಧಿವೇಶನದಲ್ಲಿ ವಿಧೇಯಕ ಮಂಡಿಸಿದಾಗ, ಪ್ರಸ್ತಾಪಿತ ವಿಧೇಯಕದ ಕಲಂ-೭ರಲ್ಲಿ ಇದನ್ನು ಕೈಬಿಡಲಾಗಿದೆ. ಮಂಡನೆಯಾಗಿರುವ ವಿಧೇಯಕದ ಸಮಿತಿಯಲ್ಲಿ ಎಲ್ಲರೂ ಸರ್ಕಾರದ ಅಧಿಕಾರಿಗಳೇ ಇದ್ದು, ಸ್ವತ್ರಂತ್ತ್ಯವಾಗಿರುವ, ಸ್ವಾಯತ್ತತೆಯಿಂದ ಸರ್ಕಾರಕ್ಕೆ ಎಚ್ಚರದ ಗಂಟೆ ಕೊಡುವ ಯಾವುದೇ ಸಂಸ್ಥೆ ಇರುವುದಿಲ್ಲ. ಈಗಿರುವ ವಿಧೇಯಕ ಸರ್ಕಾರದ ಧ್ವನಿಯಾಗುವುದೇ ಹೊರತು, ಕನ್ನಡದ ಧ್ವನಿಯಾಗುವುದಿಲ್ಲ ಎಂಬ ಆತಂಕವು ಸಾರ್ವಜನಿಕವಾಗಿ ವ್ಯಕ್ತವಾಗಿದ್ದು, ಈ ಬಗ್ಗೆಯೂ ಸಹ ಚರ್ಚೆ ನಡೆಯಲಿದೆ.

ಈ ಚಿಂತನಾಗೋಷ್ಠಿಯಲ್ಲಿ ಭಾಗವಹಿಸಿದ ಗಣ್ಯರಿಂದ ಬಂದಿರುವ ಸಲಹೆ-ಸೂಚನೆಗಳನ್ನು ಸೂಕ್ತವಾಗಿ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨”ದಲ್ಲಿ ಅಳವಡಿಸುವಂತೆ ಕನ್ನಡ ಸಾಹಿತ್ಯ ಪರಿಷತ್ತು ಸರ್ಕಾರಕ್ಕೆ ಒತ್ತಾಯಿಸಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

ದಕ್ಷಿಣ ಭಾರತದ ಮಹಾ ಕುಂಭಮೇಳಕ್ಕೆ ಸಕಲ ಸಿದ್ದತೆ- 6 ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ- ಸಚಿವ ಡಾ.ನಾರಾಯಣಗೌಡ

ಒಕ್ಕಲಿಗರ 3 ಎ ಮೀಸಲಾತಿ 10 ಪರ್ಸೆಂಟ್ ಹೆಚ್ಚಳಕ್ಕೆ ಆಗ್ರಹ

ಮಹಾಕುಂಭಮೇಳಕ್ಕೆ ಸಿಎಂ ಬೊಮ್ಮಾಯಿಗೆ ಆಹ್ವಾನ

- Advertisement -

Latest Posts

Don't Miss