ಸೆ.25 ರಂದು ಧಾರವಾಡದ ಜ್ಯುಬಿಲಿ ವೃತ್ತದಲ್ಲಿ ನಡೆದಿದ್ದ ಉದ್ಯೋಗಾಕಾಂಕ್ಷಿಗಳ ಬೃಹತ್ ಹೋರಾಟದ ನೇತೃತ್ವ ವಹಿಸಿದ್ದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಕಾಂತಕುಮಾರ್ ಇದೀಗ ಧಾರವಾಡದಲ್ಲೇ ಡಿ.8 ರಂದು ಮತ್ತೆ ಪ್ರತ್ಯೇಕವಾಗಿ ಹೋರಾಟಕ್ಕೆ ಕರೆ ನೀಡಿದ್ದಾರೆ. ಪೊಲೀಸ್ ಪೇದೆ ಹುದ್ದೆಗೆ ಬೇಕಾಗಿರುವ ವಯೋಮಿತಿ ಹೆಚ್ಚಳ ಮಾಡುವುದು, ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದ್ದಾರೆ.
ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕಾಂತಕುಮಾರ್, ಕಳೆದ ಸೆ. 25 ಕ್ಕೆ ನಾವು ಧಾರವಾಡದಲ್ಲಿ ವಯೋಮಿತಿ ಹೆಚ್ಚಳ ಮತ್ತು ಉದ್ಯೋಗ ಕರೆಯುವಂತೆ ಹೋರಾಟ ಮಾಡಿದ್ದೆವು. ಹೋರಾಟ ಮಾಡಿದ ಮೇಲೆ ಸ್ವಲ್ಪ ಸಡಿಲಿಕೆ ನೀಡಿ ವಯೋಮಿತಿ ಹೆಚ್ಚಳ ಮಾಡಲಾಗಿದೆ. ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ ಹೆಚ್ಚಳ ಮಾಡುವುದಾಗಿ ಸಿಎಂ ಸಿದ್ದರಾಮಯ್ಯನವರು ವಿರೋಧ ಪಕ್ಷದಲ್ಲಿ ಇದ್ದಾಗ ಹೇಳಿದ್ದರು.
OBCಗೆ 33 ವರ್ಷ ಮತ್ತು ಜನರಲ್ ಕೆಟಗರಿಗೆ 30 ವರ್ಷ ಮಾಡುವ ಮಾತು ಹೇಳಿದ್ದರು. ಅದು ಆಗಲಿಲ್ಲ, ವಿರೋಧ ಪಕ್ಷದಲ್ಲಿ ಇವರು ಇದ್ದಾಗ ಹೇಳಿದ ಒಂದೇ ಮಾತಿಗೆ ವಿದ್ಯಾರ್ಥಿಗಳು ಧಾರವಾಡಕ್ಕೆ ಬಂದು ಅಭ್ಯಾಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ತಮ್ಮ ಪ್ರಣಾಳಿಕೆಯಲ್ಲಿ ಒಂದೇ ವರ್ಷದಲ್ಲಿ 1 ಲಕ್ಷ ಉದ್ಯೋಗ ಕೊಡುವ ಮಾತು ಹೇಳಿತ್ತು. ಈಗ ಸರ್ಕಾರ ಬಂದು ಎರಡೂವರೆ ವರ್ಷ ಆದರೂ ಕೇವಲ 5 ಸಾವಿರ ಉದ್ಯೋಗ ಕರೆ ಮಾಡಲಾಗಿದೆ. ಅವು ಸದ್ಯ ಕೋರ್ಟ್ನಲ್ಲಿವೆ ಎಂದರು.
ಕೋರ್ಟ್ ಆದೇಶ ಬರುವವರೆಗೆ ಅವು ಯಾವುದೇ ಜಾಬ್ ಸಿಗೋದಿಲ್ಲ. ನಾವು ಧಾರವಾಡ, ವಿಜಯಪುರ, ಮೈಸೂರು ಸೇರಿ ಹಲವು ಕಡೆ ಹೋರಾಟ ಮಾಡಿದ್ದೇವೆ. ಆದರೆ ಇವತ್ತು ನಾವು ಉದ್ಯೋಗಕ್ಕಾಗಿ ಬೆಳಗಾವಿ ಅಧಿವೇಶನದಲ್ಲಿ ಡಿಸೆಂಬರ್ 11 ಕ್ಕೆ ಹೋರಾಟ ಮಾಡಲು ನಿರ್ಧಾರ ಮಾಡಿದ್ದೇವೆ. ಒಂದು ವರ್ಷದಿಂದ ಯಾವುದೇ ಉದ್ಯೋಗ ಕರೆ ಮಾಡಿಲ್ಲ. PSI ಕಾಲ್ ಆಗಿ ಐದು ವರ್ಷ ಆಗಿದೆ.
ಗೃಹ ಸಚಿವರು ಎರಡು ದಿನದಲ್ಲಿ ಕರೆ ಮಾಡುತ್ತೇವೆ ಎನ್ನುತ್ತಾರೆ. ಒಂದು ವಾರದಲ್ಲಿ ಮಾಡುತ್ತೇವೆ ಎಂದು ಹೇಳುತ್ತಾರೆ. ಈ ಸಂಬಂಧ ಧಾರವಾಡದಲ್ಲಿ ಇದೇ ಡಿಸೆಂಬರ್ 8 ಕ್ಕೆ ಮತ್ತೇ ಹೋರಾಟ ಮಾಡುತ್ತೇವೆ. ಉದ್ಯೋಗಾಕಾಂಕ್ಷಿಗಳು ಒಂದು ಹೊತ್ತಿನ ಊಟಕ್ಕೆ ಕೂಡ ಪರದಾಟ ನಡೆಸಿದ್ದಾರೆ. ಡಿಸೆಂಬರ್ 1 ಕ್ಕೆ ನಾವು ಪೊಲೀಸ್ ಅನುಮತಿ ಇಲ್ಲದ ಕಾರಣ ಹೋರಾಟ ಮಾಡಲಿಲ್ಲ. ಈಗ ಮತ್ತೇ ಹೋರಾಟಕ್ಕೆ ಇಳಿಯಲಿದ್ದೇವೆ ಎಂದರು.
ವರದಿ : ಲಾವಣ್ಯ ಅನಿಗೋಳ




