Sunday, October 5, 2025

Latest Posts

ಕಾಂತಾರ ದಸರಾ ಧಗಧಗ : ದಾಖಲೆ ಬರೆದ ಅಡ್ವಾನ್ಸ್‌ ಬುಕಿಂಗ್‌

- Advertisement -

ರಿಷಬ್‌ ಶೆಟ್ಟಿ ಅಭಿನಯ ಹಾಗೂ ನಿರ್ದೇಶನದ ಹೊಂಬಾಳೆ ಫಿಲಂಸ್‌ ನಿರ್ಮಿಸಿರುವ ಬಹುನೀರಿಕ್ಷಿತ ಕಾಂತಾರ ಚಾಪ್ಟರ್ 1 ಗುರುವಾರ ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. ಬಿಡುಗಡೆಗೂ ಮುನ್ನವೇ ಚಿತ್ರ ಎಲ್ಲೆಡೆ ಭಾರಿ ಕ್ರೇಜ್‌ ಸೃಷ್ಟಿಸಿದೆ. ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಮೊದಲ ದಿನದ ಟಿಕೆಟ್‌ ದರ ₹1200 ವರೆಗೂ ಏರಿಕೆ ಕಂಡಿದ್ದು, ಇಷ್ಟೊಂದು ದುಬಾರಿ ದರದಲ್ಲಿಯೂ ಎಲ್ಲ ಟಿಕೆಟ್‌ಗಳು ಸೋಲ್ಡೌಟ್‌ ಆಗಿವೆ. ದೇಶದಾದ್ಯಂತ ಸುಮಾರು 6500–7000 ಪರದೆಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದ್ದು, ಕನ್ನಡ ಚಿತ್ರೋದ್ಯಮದ ಇತಿಹಾಸದಲ್ಲೇ ಇದು ಮೊದಲ ಬಾರಿಗೆ ದಾಖಲಾಗುತ್ತಿದೆ.

7 ಕ್ಕೂ ಅಧಿಕ ಭಾಷೆಗಳಲ್ಲಿರುವ ಈ ಸಿನಿಮಾ 30 ದೇಶಗಳಲ್ಲಿ ಏಕಕಾಲಕ್ಕೆ ತೆರೆಕಾಣುತ್ತಿದೆ. ಇದು ಕೂಡ ಕನ್ನಡ ಚಿತ್ರೋದ್ಯಮದ ಇತಿಹಾಸದಲ್ಲೇ ಮೊದಲು. 34 ನಿಮಿಷದಲ್ಲೇ 10 ಸಾವಿರ ಟಿಕೆಟ್‌ಗಳು ಬುಕ್‌ ಆಗಿವೆ. ಇಷ್ಟೊಂದು ವೇಗದಲ್ಲಿ ಟಿಕೆಟ್‌ ಖರೀದಿಸಲ್ಪಟ್ಟ ಮೊದಲ ಕನ್ನಡ ಸಿನಿಮಾ ಎಂಬ ಹಿರಿಮೆಗೂ ಕಾಂತಾರ ಭಾಜನವಾಗಿದೆ. ಅಲ್ಲದೆ, ಅಮೆರಿಕದಲ್ಲಿ ಅಡ್ವಾನ್ಸ್‌ ಬುಕಿಂಗ್‌ನಿಂದಲೇ 3 ಕೋಟಿ ರು.ಗಳನ್ನು ಚಿತ್ರಗಳಿಸಿದ್ದು, ಈ ಸಾಧನೆ ಮಾಡಿದ ಮೊದಲ ಕನ್ನಡ ಸಿನಿಮಾ ಎನಿಸಿಕೊಂಡಿದೆ. ದೇಶಾದ್ಯಂತ ಟಿಕೆಟ್‌ಗಳ ಅಡ್ವಾನ್ಸ್‌ ಬುಕಿಂಗ್‌ನಿಂದಲೇ 11 ಕೋಟಿ ರು. ಗಳಿಕೆಯಾಗಿದೆ ಎನ್ನಲಾಗಿದೆ. ರಾಜ್ಯದ ಹಲವೆಡೆ ಬೆಳಗ್ಗೆ 6.30ರಿಂದಲೇ ಪ್ರದರ್ಶನ ನಿಗದಿಯಾಗಿದ್ದು, ಮೊದಲ ದಿನವೇ 2000ಕ್ಕೂ ಅಧಿಕ ಶೋಗಳು ನಡೆಯಲಿವೆ.

ಪಿವಿಆರ್‌ ಐನಾಕ್ಸ್‌ಗಳಲ್ಲಿ ಮೊದಲ 4 ದಿನಗಳಿವೆ ದೇಶಾದ್ಯಂತ ಒಟ್ಟು 3 ಲಕ್ಷಕ್ಕೂ ಅಧಿಕ ಟಿಕೆಟ್ ಗಳು ಬುಕಿಂಗ್‌ ಆಗಿವೆ ಎನ್ನಲಾಗಿದೆ. ಆಂಧ್ರದಲ್ಲಿ ಬಾಯ್ಕಾಟ್‌ ಚಳುವಳಿ ಮೂಡಿದ್ದರೂ, ಪವನ್‌ ಕಲ್ಯಾಣ್‌ ಚಿತ್ರ ಪರವಾಗಿ ಧ್ವನಿ ಎತ್ತಿದ್ದಾರೆ. ಕನ್ನಡ ಸಿನಿಮಾಗಳನ್ನು ನಾವು ಎಂದಿಗೂ ತಡೆಗಟ್ಟಬಾರದು. ಡಾ. ರಾಜ್‌ಕುಮಾರ್‌ನಿಂದ ಹಿಡಿದು ಸುದೀಪ್‌, ಉಪೇಂದ್ರ, ಶಿವರಾಜ್‌ಕುಮಾರ್‌, ರಿಷಬ್‌ ಶೆಟ್ಟಿವರೆಗೆ ಎಲ್ಲರಿಗೂ ತೆಲುಗು ಅಭಿಮಾನಿಗಳು ಸದಾ ಬೆಂಬಲ ನೀಡಿದ್ದಾರೆ. ನಾವು ಸಹೋದರತ್ವದಿಂದ ನಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ. ಅಲ್ಲದೆ, ಆಂಧ್ರದಲ್ಲಿ ಟಿಕೆಟ್ ದರ ಹೆಚ್ಚಳಕ್ಕೂ ಅನುಮತಿ ದೊರಕಿದೆ.

ಕರ್ನಾಟಕದಲ್ಲಿ ಅತೀ ಕಡಿಮೆ ಅವಧಿಯಲ್ಲಿ ಅತ್ಯಧಿಕ ಟಿಕೆಟ್‌ ಮಾರಾಟದ ದಾಖಲೆ ಬರೆದಿರುವ ಈ ಸಿನಿಮಾದ ಬಗ್ಗೆ ಅಮೆರಿಕ ಸೇರಿದಂತೆ ಹೊರದೇಶಗಳಲ್ಲೂ ಕ್ರೇಜ್‌ ಹೆಚ್ಚಿದೆ. ಅಮೆರಿಕದಲ್ಲಿ ಅಡ್ವಾನ್ಸ್‌ ಬುಕಿಂಗ್‌ಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದು, 3 ಕೋಟಿ ರು.ಗಳಷ್ಟು ಕಲೆಕ್ಷನ್‌ ಆಗಿದೆ ಎನ್ನಲಾಗಿದೆ. ಇಲ್ಲಿ ಕಾಂತಾರ 1 ಸಿನಿಮಾ ಒಟ್ಟು 80 ಕೋಟಿ ರು.ಗೂ ಅಧಿಕ ಗಳಿಕೆ ಮಾಡುವ ನಿರೀಕ್ಷೆ ಇದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss