ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಬಹುನಿರೀಕ್ಷಿತ ಚಿತ್ರ ‘ಕಾಂತಾರ ಚಾಪ್ಟರ್ 1’ ಇದೀಗ ದೇಶದ ಗಡಿ ಮೀರಿ ಜಾಗತಿಕತೆಗೆ ಪಾತ್ರವಾಗಿದೆ. ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಈ ಚಿತ್ರದ ಹವಾ ಜೋರಾಗಿದೆ. ಈಗಾಗಲೇ ಅಮೆರಿಕದ ಪ್ರೀಮಿಯರ್ ಶೋ ದಿನಾಂಕ ನಿಗದಿಯಾಗಿದ್ದು, ಅಡ್ವಾನ್ಸ್ ಟಿಕೆಟ್ ಬುಕಿಂಗ್ ಆರಂಭವಾಗಿದೆ.
ಅಕ್ಟೋಬರ್ 1, 2025 ರಂದು ‘ಕಾಂತಾರ ಚಾಪ್ಟರ್ 1’ ಚಿತ್ರದ ಪ್ರೀಮಿಯರ್ ಶೋ ನಾರ್ತ್ ಅಮೆರಿಕದ ವಿವಿಧ ನಗರಗಳಲ್ಲಿ ಏಕಕಾಲದಲ್ಲಿ ನಡೆಯಲಿದೆ. ಚಿತ್ರ ವಿತರಣೆ ಹಕ್ಕುಗಳನ್ನು ಅಮೇರಿಕದ ಪ್ರತ್ಯಂಗಿರ ಯುಎಸ್ ಸಂಸ್ಥೆಗೆ ಹಸ್ತಾಂತರಿಸಲಾಗಿದ್ದು, ದೊಡ್ಡ ಮಟ್ಟದಲ್ಲಿ ಬಿಡುಗಡೆಯ ಭರವಸೆ ಮೂಡಿಸಿದೆ.
ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಾತ್ರವಲ್ಲದೆ, ಪ್ಯಾನ್ ವರ್ಲ್ಡ್ ಲೆವೆಲ್‌ನಲ್ಲಿ ಬಿಡುಗಡೆ ಮಾಡಲು ನಿರ್ಮಾಪನಾ ಸಂಸ್ಥೆ ಹೊಂಬಾಳೆ ಫಿಲಂಸ್ ತಯಾರಿ ಮಾಡಿಕೊಂಡಿದೆ. ಹಿಂದಿನ ಯಾವುದೇ ಕನ್ನಡ ಸಿನಿಮಾಗಳು ಬಿಡುಗಡೆಯಾಗದ ಕೆಲವು ದೇಶಗಳಲ್ಲಿಯೂ ಈ ಸಿನಿಮಾವನ್ನು ಬಿಡುಗಡೆಯ ಮಾಡುವ ಮೂಲಕ ಹೊಸ ದಾಖಲೆ ಬರೆಯುವ ಸಾಧ್ಯತೆ ಇದೆ.
ಉತ್ತರ ಅಮೆರಿಕದಲ್ಲಿ ದಕ್ಷಿಣ ಭಾರತೀಯ ಸಿನಿಮಾಗಳಿಗೆ ಇರುವ ಪ್ರಭಾವ ಹೆಚ್ಚು. ಸಾವಿರಾರು ಭಾರತೀಯ ಕುಟುಂಬಗಳು ವಾಸಿಸುವ ನಾರ್ತ್ ಅಮೇರಿಕದಲ್ಲಿ ದಕ್ಷಿಣ ಭಾರತದ ಸಿನಿಮಾಗಳ ಕಲೆಕ್ಷನ್ ಸಾಮಾನ್ಯವಾಗಿ ಮೂರು ಪಟ್ಟು ಹೆಚ್ಚು ಇರುತ್ತದೆ. ಈ ಹಿನ್ನೆಲೆಯಲ್ಲಿ, ‘ಕಾಂತಾರ’ಗೂ ಅದೇ ರೀತಿಯ ಭಾರಿ ಸ್ಪಂದನೆ ಸಿಗಲಿದೆ ಎನ್ನುವ ನಿರೀಕ್ಷೆ ವ್ಯಕ್ತವಾಗಿದೆ.
ಕೇವಲ ಕೆಲವು ದಿನಗಳಷ್ಟೇ ಬಾಕಿ ಇರುವ ಈ ಸಿನಿಮಾ ಬಿಡುಗಡೆಗೆ ಗ್ಲೋಬಲ್ ಲೆವೆಲ್‌ನಲ್ಲಿ ತಯಾರಿ ನಡೆಯುತ್ತಿದ್ದು, ಟ್ರೈಲರ್ ಮೂಲಕವೇ ಸಿನಿಮಾ ಬಗ್ಗೆ ಭಾರಿ ಕುತೂಹಲ ಉಂಟಾಗಿದೆ. ಈಗ ಪ್ರೀಮಿಯರ್ ಶೋಗಳ ಬಿಕ್ಕಟ್ಟಿನಲ್ಲಿ ಅಡ್ವಾನ್ಸ್ ಟಿಕೆಟ್‌ಗಳಿಗಾಗಿ ಅಭಿಮಾನಿಗಳು ಮುಗಿಬಿದ್ದಿದ್ದಾರೆ.
ವರದಿ : ಲಾವಣ್ಯ ಅನಿಗೋಳ