ಮಹಾರಾಷ್ಟ್ರ ಟಾಪ್, ಕರ್ನಾಟಕ ನೆಕ್ಸ್ಟ್. ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ವಿದೇಶಿ ನೇರ ಹೂಡಿಕೆ ಆಕರ್ಷಿಸಿದ ರಾಜ್ಯಗಳ ಪೈಕಿ ಕರ್ನಾಟಕ 2ನೇ ಸ್ಥಾನ ದಾಖಲಿಸಿದೆ. ಈ ಅವಧಿಯಲ್ಲಿ ರಾಜ್ಯವು ₹81,000 ಕೋಟಿ ಹೂಡಿಕೆಗೆ ಸಾಕ್ಷಿಯಾಗಿದೆ. ವಿದೇಶಿ ಹೂಡಿಕೆಯಲ್ಲಿ ₹91,000 ಕೋಟಿ ರೂ. ಆಕರ್ಷಿಸಿಕೊಂಡಿರುವ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ ಎಂದು ಕೇಂದ್ರ ವಲಯ ಮೂಲಗಳು ತಿಳಿಸಿವೆ.
ತಂತ್ರಜ್ಞಾನ, ಸಂಶೋಧನೆ, ನವೋದ್ಯಮ, ಜಾಗತಿಕ ಸಾಮರ್ಥ್ಯದ ಕಂಪನಿಗಳಿಗೆ ಕರ್ನಾಟಕ ನೀಡುತ್ತಿರುವ ಅವಕಾಶಗಳೇ ಹೂಡಿಕೆ ಪ್ರಮಾಣ ಹೆಚ್ಚಲು ಪ್ರಮುಖ ಕಾರಣವಾಗಿದೆ ಎಂದು ವರದಿಗಳು ಹೇಳುತ್ತವೆ. ಬೆಂಗಳೂರು ಐಟಿ/ಬಿಟಿ ಹಬ್ ಆಗಿರುವುದೂ ಹೂಡಿಕೆಗೆ ಅನುಕೂಲಕರವಾಗಿದೆ.
ಮಹಾರಾಷ್ಟ್ರ ಮತ್ತು ಕರ್ನಾಟಕದ ಬಳಿಕ ತಮಿಳುನಾಡು, ಗುಜರಾತ್ ಮತ್ತು ಹರಿಯಾಣ ರಾಜ್ಯಗಳಿವೆ. ತಮಿಳುನಾಡು 31000 ಕೋಟಿ ರೂ. ಹರಿಯಾಣ 28000 ಕೋಟಿ ರೂ. ಗುಜರಾತ್ 19000 ಕೋಟಿ ರೂ. ಏಪ್ರಿಲ್ ನಿಂದ ಸೆಪ್ಟೆಂಬರ್ ತಿಂಗಳಿನಲ್ಲಿ ದೇಶದಲ್ಲಿನ ವಿದೇಶಿ ನೇರ ಹೂಡಿಕೆಯಲ್ಲೂ ಶೇ.18ರಷ್ಟು ಏರಿಕೆಯಾಗಿದ್ದು, 3.15 ಲಕ್ಷ ಕೋಟಿ ರೂ.ನಷ್ಟಾಗಿದೆ.
ಭಾರತದ ಮೇಲೆ ಸುಂಕ ವಿಧಿಸಿದ್ದರೂ ಈ ಅವಧಿಯಲ್ಲಿ ಅಮೆರಿಕದಿಂದ ಹೂಡಿಕೆ ಪ್ರಮಾಣ ದುಪ್ಪಟ್ಟಾಗಿದ್ದು, 59,283 ಕೋಟಿ ರೂ.ಗೆ ತಲುಪಿದೆ. ಕಳೆದ ಆರ್ಥಿಕ ವರ್ಷದಲ್ಲಿ ಇದೇ ಅವಧಿಯಲ್ಲಿ 2.66 ಲಕ್ಷ ಕೋಟಿ ರೂ. ಹೂಡಿಕೆಯಾಗಿತ್ತು. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.21ರಷ್ಟು ಹೆಚ್ಚಳವಾಗಿದೆ.
ವರದಿ : ಲಾವಣ್ಯ ಅನಿಗೋಳ




