ರಾಜ್ಯದ ಸಣ್ಣ ಹಾಗೂ ಅತಿ ಸಣ್ಣ ರೈತರ ಆರ್ಥಿಕ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆಯು ‘ಮುಖ್ಯಮಂತ್ರಿ ನೇಗಿಲ ಯೋಗಿ’ ಯೋಜನೆಯನ್ನು ಯಾವುದೇ ಲೋಪಗಳಿಲ್ಲದೆ ಅನುಷ್ಠಾನಗೊಳಿಸಬೇಕು ಎಂದು ಕೃಷಿ ಸಚಿವರಾದ ಪಿ.ಎಂ. ನರೇಂದ್ರ ಸ್ವಾಮಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಮಹತ್ವದ ಸಭೆಯಲ್ಲಿ ಅವರು ಈ ನಿರ್ದೇಶನ ನೀಡಿದ್ದಾರೆ.
ಈ ಯೋಜನೆಯಡಿ 3 ಎಕರೆ ಹಾಗೂ ಅದಕ್ಕಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ವರ್ಷಕ್ಕೆ ಗರಿಷ್ಠ 3 ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತದೆ. ಆರಂಭದಲ್ಲಿ ಪ್ರತಿ ಜಿಲ್ಲೆಗೆ ಒಂದು ತಾಲೂಕನ್ನು ಆಯ್ಕೆ ಮಾಡಲು ಸೂಚಿಸಲಾಗಿದ್ದರೂ, ಮುಖ್ಯಮಂತ್ರಿಗಳ ನಿರ್ದೇಶನದಂತೆ ಈಗ ಪ್ರತಿ ಜಿಲ್ಲೆಗೆರಡು ತಾಲೂಕುಗಳನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಲಾಗಿದೆ. ಇದಕ್ಕೆ ಅಗತ್ಯವಿರುವ ಹೆಚ್ಚುವರಿ ಅನುದಾನವನ್ನು ಹಣಕಾಸು ಇಲಾಖೆಯು ಒದಗಿಸುವುದಾಗಿ ಭರವಸೆ ನೀಡಿದೆ.
ಭೂಮಿ ಸಿದ್ಧತೆ, ಬಿತ್ತನೆ ಅಥವಾ ನಾಟಿ, ಯಾಂತ್ರೀಕೃತ ಅಂತರ ಬೇಸಾಯ, ಯಾಂತ್ರೀಕೃತ ಕಟಾವು ಹಾಗೂ ಬೆಳೆ ತ್ಯಾಜ್ಯ ನಿರ್ವಹಣೆ ಮುಂತಾದ ಚಟುವಟಿಕೆಗಳು ಈ ಯೋಜನೆಯ ವ್ಯಾಪ್ತಿಗೆ ಬರಲಿವೆ. ಒಂದು ಚಟುವಟಿಕೆಗೆ 500 ರೂಪಾಯಿಯಂತೆ ಮೂರು ಎಕರೆಗೆ ಒಟ್ಟು 1,500 ರೂಪಾಯಿ ಪ್ರೋತ್ಸಾಹಧನ ಸಿಗಲಿದ್ದು, ರಾಜ್ಯದಲ್ಲಿ ಇದಕ್ಕೆ ಒಟ್ಟು 287 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಸೀಸನ್ ಸಮಯದಲ್ಲಿ ಟ್ರ್ಯಾಕ್ಟರ್ಗಳ ಕೊರತೆ ಎದುರಾದರೆ ‘ಟಫೆ’ ಕಂಪನಿಯೊಂದಿಗೆ ಮಾತುಕತೆ ನಡೆಸಿ ಸೇವೆ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ತಿಳಿಸಿದ್ದಾರೆ. ಅಲ್ಲದೆ, ಪ್ರತಿಯೊಂದು ಪ್ರಕ್ರಿಯೆಯೂ ವಿಳಂಬವಿಲ್ಲದೆ ಪಾರದರ್ಶಕವಾಗಿರಬೇಕು ಮತ್ತು ದಸರಾ ಹಬ್ಬದ ಬಳಿಕ ಈ ಯೋಜನೆ ಕುರಿತು ವ್ಯಾಪಕ ಪ್ರಚಾರ ಆರಂಭಿಸಬೇಕು ಎಂದು ಅವರು ಅಧಿಕಾರಿಗಳಿಗೆ ಕಿವಿಮಾತು ಹೇಳಿದ್ದಾರೆ.
ಇದೇ ವೇಳೆ ರೈತರಿಗೆ ಬೆಳೆವಾರು ಮಾಹಿತಿ ಹಾಗೂ ಡಿಜಿಟಲ್ ಸೇವೆಗಳನ್ನು ಒದಗಿಸಲು ‘ಮುಖ್ಯಮಂತ್ರಿ ರೈತ ಚೈತನ್ಯ’ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಮೆಟಾ ಸಂಸ್ಥೆಯ ಸಹಯೋಗದಲ್ಲಿ ವಾಟ್ಸ್ಆ್ಯಪ್ ಹಾಗೂ ಎಐ ಟೂಲ್ಗಳನ್ನು ಬಳಸಿ ಮುಂದಿನ ದಿನಗಳಲ್ಲಿ ರೈತರ ಮೊಬೈಲ್ಗೆ ವಿಡಿಯೋ ಸಂದೇಶ ಹಾಗೂ ಚಾಟ್ಬಾಟ್ ಮೂಲಕ ಮಾಹಿತಿ ತಲುಪಿಸಲು ಸಿದ್ಧತೆ ನಡೆಸಲಾಗಿದೆ.
ಜೊತೆಗೆ ಕೃಷಿ ಉತ್ಪನ್ನಗಳ ರಫ್ತು ಉತ್ತೇಜನ, ಕೋಲ್ಡ್ ಸ್ಟೋರೇಜ್ ನಿರ್ಮಾಣ ಮತ್ತು ರೈತರ ಜಮೀನುಗಳಿಗೆ ಸುಸ್ಥಿರ ದಾರಿ ಕಲ್ಪಿಸುವ ನಿಟ್ಟಿನಲ್ಲಿ ಕಾನೂನುಬದ್ಧ ಚಿಂತನೆ ನಡೆಸುವಂತೆಯೂ ಸಚಿವರು ಸೂಚಿಸಿದ್ದಾರೆ. ಸಭೆಯಲ್ಲಿ ಕೃಷಿ ಇಲಾಖೆಯ ಕಾರ್ಯದರ್ಶಿ ಕೆ.ವಿ. ತ್ರಿಲೋಕಚಂದ್ರ ಹಾಗೂ ಆಯುಕ್ತ ಬಿ.ಸಿ. ಸತೀಶ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.




