ಹುಬ್ಬಳ್ಳಿ : ಬಿಜೆಪಿಯಲ್ಲಿ 75 ವರ್ಷ ತುಂಬಿದ ನಾಯಕರನ್ನು ಅಧಿಕಾರದಿಂದ ಕೆಳಗಿಳಿಸಲಾಗುತ್ತದೆ. ವಯಸ್ಸಿನ ಕಾರಣಕ್ಕೆ ಪಕ್ಷ ಹಲವು ನಾಯಕರು ನಿವೃತ್ತಿಯಾಗುವಂತೆ ಮಾಡಿದೆ. ಈ ನಡುವೆಯೇ ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಕಾಂಗ್ರೆಸ್ ಹಿರಿಯ ಶಾಸಕರೊಬ್ಬರು ನೀಡಿರುವ ಹೇಳಿಕೆ ಭಾರೀ ಸಂಚಲನಕ್ಕೆ ಕಾರಣವಾಗಿದೆ.
ಮುಂಬರುವ ನವಂಬರ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ 75 ವರ್ಷ ಆಗುತ್ತದೆ. ಆರ್ ಎಸ್ ಎಸ್ ಹೇಳಿದಂತೆ ಮೋದಿ ಅಧಿಕಾರದಿಂದ ಕೆಳಗಿಳಿದ್ರೆ. ಬಿಜೆಪಿಗೆ ಲೋಕಸಭೆಯಲ್ಲಿ ಬಹುಮತ ಇಲ್ಲ, ಹೀಗಾಗಿ ಚಂದ್ರಬಾಬುನಾಯ್ಡು, ನಿತೀಶ್ ಕುಮಾರ್ ಬೆಂಬಲ ಹಿಂಪಡೆದ್ರೆ ಕೇಂದ್ರ ಸರ್ಕಾರ ಬೀಳಬಹುದು ಎಂದು ಸಿಎಂ ಆರ್ಥಿಕ ಸಲಹೆಗಾರ ಹಾಗೂ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಮೋದಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿದರೆ, ಆಗ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋ ಅವಕಾಶ ಇದೆ. ಅದರಲ್ಲಿ ರಾಹುಲ್ ಗಾಂಧಿ ಅವರಿಗೆ ಮೊದಲ ಚಾನ್ಸ್ ಇದೆ. ಅದರಲ್ಲೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯಾದರೂ ಅಚ್ಚರಿಯಲ್ಲ ಅಂತ ನನ್ನ ಮನಸು ಹೇಳುತ್ತಿದೆ. ಖರ್ಗೆ ಪ್ರಧಾನಿ ಆಗುತ್ತಾರೆ ಎನ್ನುವ ಬಿಜೆಪಿಯವರ ವ್ಯಂಗ್ಯ ನಿಜವಾಗುತ್ತದೆ. ಅವರು ಪವರಪುಲ್ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ ಎಂದು ಖರ್ಗೆ ಪರ ಬ್ಯಾಟ್ ಬೀಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ವಿಜಯೇಂದ್ರ ಸೇರಿ ಬಿಜೆಪಿ ನಾಯಕರು ವ್ಯಂಗ್ಯವಾಗಿ ಮಾತನಾಡುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಓರ್ವ ಹಿರಿಯ ನಾಯಕರಿದ್ದಾರೆ. ಯಾರು ಅವರನ್ನು ಮ್ಯಾಚ್ ಮಾಡಲು ಆಗಲ್ಲಾ, ಕೆಲವೇ ತಿಂಗಳಲ್ಲಿ ಅವರು ಪ್ರಧಾನಮಂತ್ರಿ ಆಗಬಹುದು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಇನ್ನೂ ರಾಜ್ಯದಲ್ಲಿ ಸೆಪ್ಟೆಂಬರ್ ವೇಳೆ ಯಾವುದೇ ಕ್ರಾಂತಿ ಆಗಲ್ಲಾ, ಯಾವುದೇ ಬದಲಾವಣೆಯೂ ನಡೆಯುವುದಿಲ್ಲ. ಸಿದ್ದರಾಮಯ್ಯ ಅವರೇ ಎರಡು ವರ್ಷ 10 ತಿಂಗಳ ಸಿಎಂ ಆಗಿ ಮುಂದುವರೆಯುತ್ತಾರೆ ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ರಾಯರೆಡ್ಡಿ ಸಿದ್ದು ಮಂತ್ರ ಜಪಿಸಿದ್ದಾರೆ.