ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲರು ಪ್ಯಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಬೆನ್ನಿಗೆ ಹೈಕಮಾಂಡ್ ನಿಂತಿದೆ.
ಎಐಸಿಸಿ ನಾಯಕರು ಸಿಎಂಗೆ ಕರೆ ಮಾಡಿದ್ದು, ಏನೇ ಆದರೂ ಕಾನೂನು ಹೋರಾಟ ಮಾಡೋಣ. ನಿಮ್ಮ ಜೊತೆ ನಾವಿದ್ದೇವೆ, ಧೈರ್ಯವಾಗಿರಿ ಎಂದು ತಿಳಿಸಿದೆ. ಇಂದು ಸಂಜೆಯೇ ರಣದೀಪ್ ಸುರ್ಜೇವಾಲ ಹಾಗೂ ಕೆ.ಸಿ. ವೇಣುಗೋಪಾಲ್ ಬೆಂಗಳೂರಿಗೆ ಆಗಮಿಸಲಿದ್ದು, ಸಿದ್ದರಾಮಯ್ಯ ಜೊತೆ ಚರ್ಚಿಸಲಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಕೂಡ ಬೆಂಗಳೂರಿನಲ್ಲೇ ಇದ್ದು, ಕೆಲವೇ ಕ್ಷಣಗಳಲ್ಲಿ ಸಿದ್ದರಾಮಯ್ಯ ಭೇಟಿ ಮಾಡಲಿದ್ದಾರೆ. ಇನ್ನೂ, ಕ್ಯಾಬಿನೆಟ್ ಕೂಡ ಸಿಎಂ ಬೆಂಬಲಕ್ಕೆ ನಿಂತಿದೆ. ಮಧ್ಯಾಹ್ನ ಕಾಂಗ್ರೆಸ್ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಲಿದ್ದು, ಪ್ರಾಸಿಕ್ಯೂಷನ್ಗೆ ಕೊಟ್ಟಿರುವ ಅನುಮತಿಯನ್ನು ವಾಪಸ್ ಪಡೆಯುವಂತೆ ಮನವಿ ಸಲ್ಲಿಸುವ ಸಾಧ್ಯತೆಯಿದೆ.
ಸಿದ್ದರಾಮಯ್ಯ ಅವರು ರಾಜ್ಯಪಾಲರ ನಿರ್ಧಾರದ ವಿರುದ್ಧ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಸಿಎಂ ಪರ ವಕೀಲರು ಇಂದೇ ಹೈಕೋರ್ಟ್ ಸಲ್ಲಿಕೆ ಮಾಡಲಿದ್ದಾರೆ. ಇನ್ನೂ, ಸಿದ್ದರಾಮಯ್ಯ ನಿವಾಸಕ್ಕೆ ಡಿಸಿಎಂ ಡಿಕೆಶಿ ಶಿವಕುಮಾರ್, ಸಚಿವ ದಿನೇಶ್ ಗುಂಡೂರಾವ್, ಪರಮೇಶ್ವರ್ ಆಗಮಿಸಿ ಪ್ರಕರಣದ ಕುರಿತು ಚರ್ಚಿಸಿದ್ದಾರೆ. ಹಾಗೆಯೇ, ಇಂದು ನಡೆಯಬೇಕಿದ್ದ ತುರ್ತು ಸಚಿವ ಸಂಪುಟ ಸಭೆಯನ್ನು ರದ್ದುಗೊಳಿಸಲಾಗಿದೆ. ಸಿಎಂ ಇಂದು ಭಾಗಿಯಾಗಬೇಕಿದ್ದ ಎರಡು ಕಾರ್ಯಕ್ರಮಗಳನ್ನೂ ರದ್ದುಗೊಳಿಸಿದ್ದಾರೆ.