Darshan case : ಸ್ಟೈಲಿಶ್‌ ಲುಕ್‌ ನಲ್ಲಿ ಜೈಲಿಗೆ ದರ್ಶನ್‌ ಎಂಟ್ರಿ : ಪೊಲೀಸರಿಗೆ ಡಿಐಜಿ ಪತ್ರ

ಕೂಲಿಂಗ್‌ ಗ್ಲಾಸ್ ಹಾಕ್ಕೊಂಡು ಸ್ಟೈಲ್‌ ಆಗಿ ಬಳ್ಳಾರಿ ಜೈಲಿಗೆ ಶಿಫ್ಟ್‌ ಆಗಿದ್ದ ದರ್ಶನ್‌ ಅವರಿಂದಾಗಿ ಇದೀಗ ಪೊಲೀಸರು ಪರಿತಪಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೌದು, ಇಂದು ಬೆಳಗ್ಗೆ ಸುಮಾರು ೧೦ ಗಂಟೆ ವೇಳೆಗೆ ಬಳ್ಳಾರಿ ಜೈಲು ತಲುಪಿದ ದರ್ಶನ್‌ ಅವರು, ಬಳ್ಳಾರಿ ಜೈಲಿಗೆ ಕೂಲಿಂಗ್‌ ಗ್ಲಾಸ್‌ ಹಾಕಿಕೊಂಡು ಎಂಟ್ರಿಯಾಗಿದ್ದಾರೆ. ಈ ಕುರಿತಂತೆ ಡಿಐಜಿ ಶೇಷ ಅವರು ಪೊಲೀಸರಿಗೆ ಪತ್ರ ಬರೆದಿದ್ದಾರೆ. ಜೈಲು ನಿಯಮ ಪ್ರಕಾರ ಕೊಲೆ ಆರೋಪಿಯಾಗಲಿ, ಯಾವುದೇ ಪ್ರಕರಣದ ಆರೋಪಿಯಾಗಿರಲಿ, ಕೂಲಿಂಗ್‌ ಗ್ಲಾಸ್‌ ಹಾಕುವಂತಿಲ್ಲ. ಹಾಗಾಗಿ, ಇದನ್ನು ಪ್ರಶ್ನಿಸಿದ ಡಿಐಜಿ ಅವರು, ಪೊಲೀಸರಿಗೆ ಪತ್ರ ಬರೆದಿದ್ದಾರೆ. ದರ್ಶನ್‌ಗೆ ಬೆಂಗಳೂರಿನ ಪರಪ್ಪನ ಕಾರಾಗೃಹ ಮಾತ್ರವಲ್ಲ, ಬಳ್ಳಾರಿ ಜೈಲು ಕೂಡ ಎಂಟ್ರಿಯಲ್ಲೇ ಅಪಶಕುನವಾಗಿದೆ.

 

ಇನ್ನು, ದರ್ಶನ್‌ ಅವರನ್ನು ಭೇಟಿ ಮಾಡಲು ಅವರ ಪತ್ನಿ ವಿಜಯಲಕ್ಷ್ಮೀ ಮತ್ತು ಸಂಬಂಧಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅವರನ್ನು ಹೊರತುಪಡಿಸಿ, ಸಿನಿಮಾ ನಟ,ನಟಿಯರು, ರಾಜಕಾರಣಿಗಳು, ಗೆಳೆಯರಿಗೆ ಅವಕಾಶ ಕಲ್ಪಿಸಿಲ್ಲ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಸಾಕಷ್ಟು ಕಲಾವಿದರು ಆಗಮಿಸಿ, ದರ್ಶನ್‌ ಅವರನ್ನು ಭೇಟಿ ಮಾಡಿದ್ದರು. ಈಗ ಬಳ್ಳಾರಿ ಜೈಲಿಗೆ ಕೆಲವರನ್ನು ಹೊರತುಪಡಿಸಿ ಬೇರೆ ಯಾರನ್ನೂ ಒಳಗೆ ಬಿಡಬಾರದು ಎಂದು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಬಳ್ಳಾರಿ ಜೈಲು ಸೇರಿರುವ ದರ್ಶನ್‌ ಅವರಿಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಬೆಳಗ್ಗೆ ಬಳ್ಳಾರಿ ಜೈಲಿಗೆ ಆಗಮಿಸಿದ ದರ್ಶನ್‌ ಅವರನ್ನು ಮೊದಲು ಇಬ್ಬರು ವೈದ್ಯರಿಂದ ಆರೋಗ್ಯ ತಪಾಸಣೆ ನಡೆಸಲಾಯಿತು. ಆ ಬಳಿಕ ಸಾಮಾನ್ಯ ಕೈದಿಯಂತೆ ಅವರನ್ನು ಸೆಲ್‌ಗೆ ಕಳುಹಿಸಲಾಯಿತು. ಅದೇನೆ ಇರಲಿ, ದರ್ಶನ್‌ ಬ್ರಾಂಡೆಡ್‌ ಟೀ ಶರ್ಟ್‌, ಕೂಲಿಂಗ್‌ ಗ್ಲಾಸ್‌ ಹಾಕಿದ್ದರ ಪರಿಣಾಮ ಪೊಲೀಸರು ಸದ್ಯ ತಲೆಚಚ್ಚಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ.

About The Author