ರಾಜ್ಯ ಕಾಂಗ್ರೆಸ್‌ನಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಸದ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿದೇಶದಲ್ಲಿದ್ದಾರೆ. ಆದ್ರೆ ಇತ್ತ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರ ಡಿನ್ನರ್ ಮೀಟಿಂಗ್ ಜೋರಾಗಿ ನಡೆದಿದೆ. ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಡಿನ್ನರ್ ಪಾರ್ಟಿ ನಡೆದಿರುವುದು ಹಲವು ಕುತೂಹಲಗಳಿಗೆ ಎಡೆಮಾಡಿಕೊಟ್ಟಿದೆ. ಇನ್ನು ಈ ಮೀಟಿಂಗ್‌ನಲ್ಲಿ ಸಿದ್ದರಾಮಯ್ಯ ಬಣದ ಶಾಸಕರೇ ಇರುವುದು ಕೂಡ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಅಂದಹಾಗೆ ಡಿ.ಕೆ.ಶಿ ಅನುಪಸ್ಥಿತಿಯಲ್ಲಿ ಈ ಔತಣಕೂಟ ನಡೆದಿರೋದು ಭಾರಿ ಮಹತ್ವ ಪಡೆದುಕೊಂಡಿದೆ. ನಿನ್ನೆ ಸಚಿವ ಸಂಪುಟ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಸೇರಿದಂತೆ 30ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಈ ಡಿನ್ನರ್‌ನಲ್ಲಿ ಹಾಜರಾಗಿದ್ದರು .
ರಾಜ್ಯ ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಹಾಗೂ ಡಿಸಿಎಂ ಹುದ್ದೆಯನ್ನು ಹೆಚ್ಚುವರಿಯಾಗಿ ಸೃಷ್ಟಿಸುವ ಚರ್ಚೆಗಳು ಜೋರಾಗಿವೆ. ಇದ್ರ ನಡುವೆಯೇ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ನಡೆದ ಡಿನ್ನರ್ ಮೀಟಿಂಗ್ ಭಾರಿ ಗಮನ ಸೆಳೆದಿದೆ. ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಕೂಡ ಈ ಔತಣಕೂಟದಲ್ಲಿ ಭಾಗಿಯಾಗಿರುವುದು ಚರ್ಚೆಗಳನ್ನು ಹುಟ್ಟುಹಾಕಿದೆ.
ಇನ್ನು ಮೂರು ಮಹತ್ವದ ವಿಚಾರಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಈ ಮೀಟಿಂಗ್ ಆಯೋಜಿಸಲಾಗಿತ್ತು ಅಂತ ಹೇಳಲಾಗುತ್ತಿದೆ. ಪ್ರಮುಖವಾಗಿ ಬಜೆಟ್‌ಗೂ ಮುನ್ನವೇ ಸಂಪುಟ್ ಪುನರ್‌ರಚನೆಯ ಬಗ್ಗೆಯೂ ಭಾರಿ ಚರ್ಚೆ ನಡೆದಿದೆ ಎನ್ನಲಾಗಿದೆ.
ಮುಖ್ಯವಾಗಿ ಸಚಿವ ಸಂಪುಟ ಪುನಾರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸೇರಿದಂತೆ ಅಧಿಕಾರ ಹಂಚಿಕೆ ವಿಚಾರಗಳ ಬಗ್ಗೆಯೂ ಸಿದ್ದರಾಮಯ್ಯ ಬಣದ ನಾಯಕರು ಚರ್ಚೆ ನಡೆಸಿದ್ದಾರಂತೆ. ಈ ಸಭೆಯಲ್ಲಿ ಸಿದ್ದರಾಮಯ್ಯ ಬಣದ ಜಿ.ಪರಮೇಶ್ವರ್, ಎಚ್.ಸಿ.ಮಹದೇವಪ್ಪ, ಕೆ.ಎನ್.ರಾಜಣ್ಣ ಸೇರಿದಂತೆ ಪ್ರಮುಖರಿದ್ದರು ಎನ್ನಲಾಗಿದೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಸಂಪುಟ ಪುನರ್‌ರಚನೆ ಆಗಬೇಕಾ? ಬೇಡವಾ? ಎಂಬುದರ ಕುರಿತಾಗಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಹೈಕಮಾಂಡ್ ಸಂಪುಟ್ ಪುನರ್ ರಚನೆಗೆ ಸೂಚಿಸಿದರೆ ಆಗ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಬಗ್ಗೆಯೂ ಚರ್ಚೆಗಳು ನಡೆದಿವೆ.
ಮೊದಲೇ ಹೇಳಿದಾಗೆ,ಡಿಸಿಎಂ ಡಿ.ಕೆ.ಶಿವಕುಮಾರ್ ಅನುಪಸ್ಥಿತಿಯಲ್ಲಿ ನಡೆದಿರುವ ಈ ಸಭೆಯ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ. ಡಿಕೆಶಿ ಇಲ್ಲದಾಗಲೇ ಡಿನ್ನರ್ ಮೀಟಿಂಗ್ ಆಯೋಜಿಸಿರುವುದರ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ಸಭೆ ಬಳಿಕ ಎಲ್ಲ ನಾಯಕರು ಕೇವಲ ಭೋಜನಕೂಟಕ್ಕಷ್ಟೇ ಸೇರಿದ್ದೆವು ಎಂದು ಹೇಳಿದ್ದಾರೆ. ಕೆ.ಎನ್.ರಾಜಣ್ಣ ಅವರು ಡಿನ್ನರ್‌ನಲ್ಲಿ ವಿಸ್ಕಿ ಕುಡಿದಿದ್ದೀನಿ ಎಂದು ಹಾಸ್ಯವಾಗಿ ಹೇಳಿಕೊಂಡಿದ್ದಾರೆ.
ಈ ಡಿನ್ನರ್ ಮೀಟಿಂಗ್ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ. ಅತ್ತ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಿದೇಶ ಪ್ರವಾಸಕ್ಕೆ ಹೋಗುವುದನ್ನೇ ಕಾಯುತ್ತಿದ್ದ ಸಿಎಂ ಸಿದ್ದರಾಮಯ್ಯ ಬಣ, ಇತ್ತ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ 35 ಶಾಸಕರ ಡಿನ್ನರ್ ಮೀಟಿಂಗ್ ನಡೆಸಿ ಶಕ್ತಿ ಪ್ರದರ್ಶನ ಮಾಡಿದೆ ಅಂತ ಕಿಡಿಕಾರಿದ್ದಾರೆ.
ಡಿ.ಕೆ.ಶಿವಕುಮಾರ್ ಅವರೇ, ಅಧಿಕಾರವನ್ನು ಒದ್ದು ಕಿತ್ತುಕೊಳ್ಳುತ್ತೇನೆ ಎಂದು ಸದನದಲ್ಲಿ ತಾವು ಅಬ್ಬರಿಸದ್ದನ್ನು ಕಾರ್ಯಗತ ಮಾಡುವ ಸಮಯ ಬಂದಿದೆ. ತಮ್ಮ ಅನುಪಸ್ಥಿತಿಯಲ್ಲಿ ಸಂಪುಟ ಸಭೆ ನಡೆಯುತ್ತದೆ. ಬಸ್ ಟಿಕೆಟ್ ದರ ಹೆಚ್ಚಿಸುವಂತಹ ಪ್ರಮುಖ ನಿರ್ಧಾರವಾಗಿದೆ. ಒಬ್ಬ ಉಪಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷರ ಅನುಪಸ್ಥಿತಿಯಲ್ಲಿ ಇಂತಹ ನಿರ್ಧಾರಗಳು ಆಗುತ್ತೆ ಅಂದರೆ ಏನರ್ಥ? ಕಾಂಗ್ರೆಸ್ ಪಕ್ಷದಲ್ಲಿ ತಾವು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆಯೇ? ಅಂತ ಪ್ರಶ್ನಿಸಿದ್ದಾರೆ.