ಸರ್ಕಾರಿ ಯೋಜನೆಗಳನ್ನು ಪಡೆಯಲು ಗುತ್ತಿಗೆದಾರರಿಗಿರುವ ಕಷ್ಟಗಳನ್ನು ಬಯಲು ಮಾಡಿದ್ದ ಗುತ್ತಿಗೆದಾರ ಸಚಿನ್ ಪಾಂಚಾಲ್ ಆತ್ಮಹತ್ಯೆ ಪ್ರಕರಣದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪುತ್ರ, ಆರ್ ಡಿ ಪಿ ಆರ್ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಪ್ರತಿಪಕ್ಷ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.
ಬಹುಕೋಟಿ ಮಹರ್ಷಿ ವಾಲ್ಮೀಕಿ ಎಸ್. ಟಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಿ. ನಾಗೇಂದ್ರ ಅವ್ರನ್ನ ಸಂಪುಟದಿಂದ ತೆಗೆದುಹಾಕುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು . ಇದೀಗ ಸಚಿವ ಪ್ರಿಯಾಂಕ್ ಖರ್ಗೆ ಗುರಿಯಾಗಿಸಿ ಬಿಜೆಪಿ ಸದ್ಯ ಇದೇ ತಂತ್ರವನ್ನ ಅನುಸರಿಸ್ತಿದೆ ಅಂತ ಅನಿಸ್ತಿದೆ. ಕಳೆದ ಬಾರಿ ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದಾಗ ಆರ್ ಡಿ ಪಿ ಆರ್ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ ಅವ್ರ ಹೆಸರು ಹೇಳಿಕೊಂಡು ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ನಂತರ ರಾಜೀನಾಮೆ ನೀಡಿದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.
ಪ್ರಿಯಾಂಕ್ ಖರ್ಗೆ ಅವ್ರ ಬೆಂಬಲಿಗ ಹಾಗೂ ಕಲಬುರಗಿಯ ಮಾಜಿ ಕಾರ್ಪೋರೇಟರ್ ರಾಜು ಕಪನೂರು , ಸಚಿನ್ ಪಂಚಾಲ್ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ್ದಾರೆ ಅಂತ ಆರೋಪಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿರುವುದರಿಂದ ಬಿಜೆಪಿ ಅವ್ರ ರಾಜೀನಾಮೆಗೆ ಒತ್ತಾಯಿಸ್ತಿದೆ.
ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯ ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಮಲ್ಲಿಕಾರ್ಜುನ ಖರ್ಗೆ ದೆಹಲಿಯಲ್ಲಿ ಪ್ರಜಾಪ್ರಭುತ್ವವನ್ನು ಉಳಿಸುವಲ್ಲಿ ನಿರತರಾಗಿರುವಾಗ, ಅವರ ತವರು ಕ್ಷೇತ್ರ ಕಲಬುರಗಿಯಲ್ಲಿ ಪರಿಸ್ಥಿತಿ ವಿರುದ್ಧವಾಗಿದೆ. ಮಹಾನ್ ಸಾಂವಿಧಾನಿಕ ತಜ್ಞರಂತೆ ವರ್ತಿಸುವ ಅವರ ಮಗ ಒಂದಿಲ್ಲೊಂದು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇದೊಂದೇ ಅಲ್ಲ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ಟ್ರಸ್ಟ್‌ಗಳು ಮತ್ತು ಭೂ ಹಗರಣಗಳ ವಿವರಗಳೂ ಒಂದರ ಹಿಂದೆ ಒಂದರಂತೆ ಹೊರಬೀಳುತ್ತಿವೆ ಅಂತ ಟೀಕಿಸಿದ್ದಾರೆ.
ಅಲ್ಲದೇ ಅವರ ಕುಟುಂಬದ ಟ್ರಸ್ಟ್ ಇತ್ತೀಚೆಗೆ ದಲಿತ ಕೋಟಾದಡಿ ತೆಗೆದುಕೊಂಡ ಬೆಂಗಳೂರಿನ ಕೆಐಎಡಿಬಿ ಜಮೀನಿನ 5 ಎಕರೆಯನ್ನು ಹಿಂದಿರುಗಿಸುವಂತೆ ಒತ್ತಾಯಿಸಲಾಯಿತು. ಸೋನಿಯಾ ಗಾಂಧಿಯವರ ಕೃಪಾಕಟಾಕ್ಷ ಅವರ ಮೇಲಿದೆ. ಕರ್ನಾಟಕ ಕಾಂಗ್ರೆಸ್‌ನಲ್ಲಿ ಯಾರೂ ಯಾರಿಗೂ ನಿಷ್ಠರಾಗಿಲ್ಲ. ತಮ್ಮ ಅಧಿಕಾರ ಉಳಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ ಅಂತಲೂ ಬರೆದಿದ್ದಾರೆ.
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರು ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಅಂಬೇಡ್ಕರ್ ಸಂವಿಧಾನವು ಖರ್ಗೆ ಕುಟುಂಬಕ್ಕೆ ಅನ್ವಯಿಸುವುದಿಲ್ಲವೇ, ಬೇರೆಯವರಿಗೆ ಉಪದೇಶ ಮಾಡುವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಿ ನೈತಿಕತೆ ತೋರಬೇಕು. ಪ್ರಿಯಾಂಕ್ ಖರ್ಗೆಯವರು ಕಲಬುರಗಿ ನಿಜಾಮರೂ ಅಲ್ಲ, ಅವರ ಅನುಯಾಯಿಗಳೂ ‘ರಜಾಕಾರರು’ ಅಲ್ಲ. ಗುತ್ತಿಗೆದಾರ ಸಚಿನ್ ಸಾವಿನಲ್ಲಿ ಪ್ರಿಯಾಂಕ್ ಖರ್ಗೆ ಅವರ ನಿಕಟವರ್ತಿಗಳ ಪಾತ್ರವಿದೆ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಕೂಡಲೇ ರಾಜೀನಾಮೆ ನೀಡಬೇಕು ಅಂತ ಒತ್ತಾಯಿಸಿದರು.
ಇನ್ನು ರಾಜು ಕಾಪನೂರ ಖರ್ಗೆ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದು, ಕಲಬುರಗಿಯಲ್ಲಿ ಕಾರ್ಪೊರೇಟರ್ ಕೂಡ ಆಗಿದ್ದರು. ಈ ಹಿಂದೆ ಅಕ್ರಮ ಪಿಸ್ತೂಲ್ ಹೊಂದಿದ್ದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ಇಷ್ಟೆಲ್ಲಾ ಗೊತ್ತಿದ್ದರೂ ಪ್ರಿಯಾಂಕ್ ಖರ್ಗೆ ಗೂಂಡಾಗಳಿಂದ ದೂರ ಉಳಿದಿಲ್ಲ ಎಂದರೆ ನಮ್ಮ ರಾಜ್ಯದಲ್ಲಿ ಗೂಂಡಾಗಳು, ರೌಡಿಗಳ ಸರ್ಕಾರ ನಡೆಯುತ್ತಿದೆ ಎಂದರ್ಥವಲ್ಲವೇ ಅಂತ ಆರೋಪಿಸಿದರು.
ಛಲವಾದಿ ನಾರಾಯಣಸ್ವಾಮಿ ವಿಧಾನ ಪರಿಷತ್ತಿನಲ್ಲಿ ಪ್ರಿಯಾಂಕ್ ಖರ್ಗೆ ಬಂಧನಕ್ಕೆ ಒತ್ತಾಯಿಸಿದರು. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸಂತ್ರಸ್ತ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಒಗ್ಗಟ್ಟು ಪ್ರದರ್ಶಿಸಿದರು.
ಇನ್ನು ಆರ್‌ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ ನಿನ್ನೆ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವರ ನಿವಾಸ ಕಾವೇರಿಯಲ್ಲಿ ಭೇಟಿಯಾಗಿ ಗುತ್ತಿಗೆದಾರರ ಆತ್ಮಹತ್ಯೆ ಕುರಿತು ವಿವರಿಸಿದರು. ಸ್ವತಂತ್ರ ಏಜೆನ್ಸಿಯಿಂದ ತನಿಖೆಯನ್ನು ಪ್ರಾರಂಭಿಸಬೇಕೆ ಅನ್ನೋದ್ರಾ ಕುರಿತು ಚರ್ಚಿಸಿದರು. ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ನಿರ್ಧಾರಕ್ಕೆ ಬದ್ಧರಾಗಿರುತ್ತೇನೆ ಅಂತ ಪ್ರಿಯಾಂಕ್ ಖರ್ಗೆ ಸಿಎಂಗೆ ತಿಳಿಸಿದರು.
ಘಟನೆಯಲ್ಲಿ ತಾವು ಭಾಗಿಯಾಗಿಲ್ಲ ಮತ್ತು ತನಿಖೆಯನ್ನು ಎದುರಿಸುವುದಾಗಿ ಪ್ರಿಯಾಂಕ್ ಖರ್ಗೆ ಸಿಎಂಗೆ ತಿಳಿಸಿದರು, ಏಳು ಪುಟಗಳ ಪಾಂಚಾಲ್ ಅವರ ಡೆತ್ ನೋಟ್‌ನ ಸತ್ಯಾಸತ್ಯತೆಯನ್ನು ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಖಚಿತಪಡಿಸಲಾಗುವುದು ಅಂತ ಹೇಳಿದರು.