ಸೈಬರ್ ಸುನಾಮಿಗೆ ಬೆಚ್ಚಿಬಿದ್ದ ಕರ್ನಾಟಕ!

ಇತ್ತೀಚೆಗೆ ಸೈಬರ್ ಅಪರಾಧಗಳು ಕರ್ನಾಟಕದಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿರುವುದರ ಕುರಿತು ವಿಧಾನಸಭೆಯ ಅಧಿವೇಶನದಲ್ಲಿ ಮಂಗಳವಾರ ತೀವ್ರ ಚರ್ಚೆ ನಡೆಯಿತು. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸೈಬರ್ ಕ್ರೈಮ್‌ಗಳ ಇತ್ತೀಚಿನ ಅಂಕಿಅಂಶಗಳನ್ನು ಮಂಡಿಸಿ, ಸರ್ಕಾರ ಕೈಗೊಂಡಿರುವ ಕ್ರಮಗಳ ವಿವರ ನೀಡಿದರು.

ಪ್ರತಿದಿನ ಸಾವಿರಾರು ಜನ ಸೈಬರ್ ವಂಚನೆಗೆ ತುತ್ತಾಗುತ್ತಿರುವ ಹಿನ್ನೆಲೆಯಲ್ಲಿ, ಬಿಜೆಪಿ ಶಾಸಕ ಸಿಮೆಂಟ್ ಮಂಜು ಕೇಳಿದ ಪ್ರಶ್ನೆಗೆ ಗೃಹಸಚಿವರು ಉತ್ತರಿಸಿದ್ದಾರೆ. 2023ರ ನವೆಂಬರ್ 15ರಿಂದ ಇಂದಿನವರೆಗೆ ಒಟ್ಟು 57,733 ಸೈಬರ್ ಅಪರಾಧ ಪ್ರಕರಣಗಳು ದಾಖಲೆಗೊಂಡಿವೆ ಎಂದರು. ಈ ಅವಧಿಯಲ್ಲಿ ಒಟ್ಟು 5,474 ಕೋಟಿ ರೂ. ವಂಚನೆ ನಡೆದಿದೆ. 10,717 ಪ್ರಕರಣಗಳನ್ನು ಪತ್ತೆ ಹಚ್ಚಿ, 627 ಕೋಟಿ ರೂ. ವಸೂಲು ಮಾಡಲಾಗಿದೆ ಎಂದು ತಿಳಿಸಿದರು.

ಸಾಮಾನ್ಯ ಕಳ್ಳತನ, ಸುಲಿಗೆ, ದರೋಡೆ ಸೇರಿದಂತೆ ಸಾಂಪ್ರದಾಯಿಕ ಅಪರಾಧಗಳಿಗಿಂತ ಸೈಬರ್ ಕ್ರೈಮ್ ಪ್ರಕರಣಗಳು ಈಗ ವೇಗವಾಗಿ ಹೆಚ್ಚುತ್ತಿವೆ ಎಂದು ಹೇಳಿದರು. ಆನ್‌ಲೈನ್ ಬೆಟ್ಟಿಂಗ್ ಮತ್ತು ಗೇಮಿಂಗ್ ಕೂಡ ಇದಕ್ಕೆ ಪ್ರಮುಖ ಕಾರಣವೆಂದು ಅವರು ವಿಶ್ಲೇಷಿಸಿದರು. ಇಂದಿನ ದಿನಗಳಲ್ಲಿ ಮೊಬೈಲ್‌ಫೋನ್ ಇಲ್ಲದೆ ಯಾವುದೇ ವಹಿವಾಟು ಸಾಧ್ಯವಿಲ್ಲ. ಬ್ಯಾಂಕಿಂಗ್, ವ್ಯಾಪಾರ, ಖರೀದಿ ಸೇರಿದಂತೆ ಬಹುತೇಕ ಹಣಕಾಸು ವ್ಯವಹಾರಗಳು ಆನ್‌ಲೈನ್‌ಗೆ ಸೀಮಿತವಾಗಿವೆ.

ಅಂತಹ ಸಂದರ್ಭದಲ್ಲಿ ಸೈಬರ್ ಅಪರಾಧಗಳು ಜನರ ದೈನಂದಿನ ಜೀವನಕ್ಕೆ ದೊಡ್ಡ ಪೆಡಂಭೂತವಾಗಿ ಪರಿಣಮಿಸಿವೆ. ಸೈಬರ್ ಕ್ರೈಮ್‌ಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು, ರಾಜ್ಯ ಸರ್ಕಾರ ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳು ಹಾಗೂ ತಾಂತ್ರಿಕ ಸುಧಾರಣೆಗಳನ್ನು ಕೈಗೊಳ್ಳಬೇಕಿದೆ ಎಂಬ ಅಭಿಪ್ರಾಯ ವಿಧಾನಸಭೆಯಲ್ಲಿ ಬಲವಾಗಿ ಕೇಳಿಬಂದಿದೆ.

ವರದಿ : ಲಾವಣ್ಯ ಅನಿಗೋಳ

About The Author