SIR ನೋಟಿಸ್ ಬಂದಿದೆಯಾ? ಈ ದಾಖಲೆ ರೆಡಿ ಇಟ್ಕೊಳ್ಳಿ!

ಕರ್ನಾಟಕದಲ್ಲಿ SIR ಕಸರತ್ತು ಅತ್ಯಂತ ಚುರುಕಾಗಿ ನಡೆಯುತ್ತಿದೆ. ರಾಜ್ಯದಾದ್ಯಂತ ಇದುವರೆಗೆ ಲಕ್ಷಾಂತರ ನೋಟಿಸ್‌ಗಳನ್ನು ವಿತರಿಸಲಾಗಿದ್ದು, ಚುನಾವಣಾ ಆಯೋಗವು ಪ್ರಕ್ರಿಯೆಯನ್ನು ಕ್ಷಿಪ್ರವಾಗಿ ಮುಗಿಸುತ್ತಿದೆ. ಮುಖ್ಯ ಚುನಾವಣಾಧಿಕಾರಿ ಕಚೇರಿಯ ಇತ್ತೀಚಿನ ಮಾಹಿತಿಯ ಪ್ರಕಾರ, ಸೆಪ್ಟೆಂಬರ್ 25ರ ಅಂಕಿ-ಅಂಶಗಳನ್ವಯ ರಾಜ್ಯದಲ್ಲಿ ಒಟ್ಟು 4 ಕೋಟಿ 48 ಲಕ್ಷಕ್ಕೂ ಅಧಿಕ ಮತದಾರರಿದ್ದಾರೆ. ಇದರಲ್ಲಿ ಸುಮಾರು 2.22 ಕೋಟಿ ಪುರುಷರು, 2.25 ಕೋಟಿ ಮಹಿಳೆಯರು ಹಾಗೂ 2,873 ತೃತೀಯ ಲಿಂಗಿ ಮತದಾರರಿದ್ದಾರೆ.

ಮತದಾರರ ಪಟ್ಟಿಯಲ್ಲಿರುವ ‘No Mapping’ ಮತ್ತು ‘Anomalies’ ಅಂದರೆ ವ್ಯತ್ಯಾಸವಿರುವ ವಿಭಾಗಗಳನ್ನು ಗುರುತಿಸಿ ನೋಟಿಸ್‌ಗಳನ್ನು ನೀಡಲಾಗಿದೆ. ಒಟ್ಟು 43 ಲಕ್ಷ 82 ಸಾವಿರಕ್ಕೂ ಹೆಚ್ಚು ನೋಟಿಸ್‌ಗಳನ್ನು ಸೃಷ್ಟಿಸಲಾಗಿದ್ದು, ಈ ಪೈಕಿ 41 ಲಕ್ಷ 63 ಸಾವಿರಕ್ಕೂ ಅಧಿಕ ನೋಟಿಸ್‌ಗಳು ಈಗಾಗಲೇ ವಿತರಣೆಯಾಗಿವೆ. ಶೇ.95ರಷ್ಟು ಪ್ರಗತಿ ಸಾಧಿಸಲಾಗಿದ್ದು, ಇನ್ನು ಕೇವಲ 2 ಲಕ್ಷ 18 ಸಾವಿರ ನೋಟಿಸ್‌ಗಳು ಮಾತ್ರ ವಿತರಣೆಯಾಗಬೇಕಿವೆ.

ಇನ್ನು ವಿತರಿಸಲಾದ ನೋಟಿಸ್‌ಗಳಿಗೆ ಸಂಬಂಧಿಸಿದಂತೆ, ಈಗಾಗಲೇ 28 ಲಕ್ಷ 80 ಸಾವಿರಕ್ಕೂ ಹೆಚ್ಚು ವಿಚಾರಣೆಗಳು ಪೂರ್ಣಗೊಂಡಿವೆ. ಇದು ಶೇ.69.20ರಷ್ಟಾಗಿದೆ. ಬಾಕಿ ಇರುವ 12 ಲಕ್ಷಕ್ಕೂ ಅಧಿಕ ವಿಚಾರಣೆಗಳು ಪ್ರಗತಿಯಲ್ಲಿವೆ. ವಿವಿಧ ನಮೂನೆಗಳ ಮೂಲಕ ಒಟ್ಟು 19 ಲಕ್ಷ 48 ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ ಹೊಸ ಸೇರ್ಪಡೆಗಾಗಿರುವ Form 6 ಅರ್ಜಿಗಳೇ ಬರೋಬ್ಬರಿ 7.70 ಲಕ್ಷಕ್ಕೂ ಹೆಚ್ಚಿವೆ. ರಾಜಕೀಯ ಪಕ್ಷಗಳ ಮನವಿಯ ಮೇರೆಗೆ, ನೋಟಿಸ್ ಪಡೆದವರ ಪಟ್ಟಿಯನ್ನು CEO ಕಚೇರಿ ವೆಬ್‌ಸೈಟ್‌ನಲ್ಲೂ ಪ್ರಕಟಿಸಲಾಗಿದೆ.

ಪ್ರಮುಖ ದಿನಾಂಕಗಳನ್ನು ಗಮನಿಸುವುದಾದರೆ, ಅಕ್ಟೋಬರ್ 12 ರಂದು ಕೊನೆಯ ವಿಚಾರಣೆ ನಡೆಯಲಿದೆ. ಹಾಗೂ ಅಕ್ಟೋಬರ್ 22 ಕ್ಲೇಮ್‌ಗಳು ಮತ್ತು ಆಕ್ಷೇಪಣೆಗಳ ವಿಲೇವಾರಿ ಹಾಗೂ ನೋಟಿಸ್ ಹಂತವನ್ನು ಪೂರ್ಣಗೊಳಿಸಲು ಕೊನೆಯ ದಿನವಾಗಿದೆ. ಒಂದು ವೇಳೆ ನಿಮ್ಮ ಹೆಸರು ಮತದಾರರ ಪಟ್ಟಿಯಿಂದ ಗೈರುಹಾಜರಾಗಿದ್ದರೆ ಅಥವಾ ಹೊಸದಾಗಿ ಸೇರಿಸಬೇಕಿದ್ದರೆ Form 6 ಬಳಸಿ ಅರ್ಜಿ ಸಲ್ಲಿಸಬಹುದಾಗಿದೆ.

About The Author