ಹೊಸ ವರ್ಷಕ್ಕೆ ಕರ್ನಾಟಕದಲ್ಲಿ ಹಾಲಿನ ದರ ಏರಿಕೆಯ ಪ್ರಸ್ತಾವನೆ ಸರ್ಕಾರದ ಮುಂದಿದೆ. ಇತ್ತ ರೈತರಿಗೆ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡದ ಸರ್ಕಾರ, ನೂರಾರು ಕೋಟಿ ರೂಪಾಯಿ ಹಣ ನೀಡದೇ ಬಾಕಿ ಉಳಿಸಿಕೊಂಡಿದೆ. ರಾಜ್ಯ ಸರ್ಕಾರ ಹಾಲು ಉತ್ಪಾದಕರಿಗೆ ನೀಡಬೇಕಾಗಿರೋ ಹಾಲಿನ ಪ್ರೋತ್ಸಾಹ ಧನದ ಬಾಕಿ ಹಣ ಸುಮಾರು 622.54 ಕೋಟಿಗೆ ಏರಿದೆ. ಕಳೆದ ಜೂನ್ ನಿಂದಲೂ ಪ್ರೋತ್ಸಾಹ ಧನ ಬಿಡುಗಡೆಯಾಗಿಲ್ಲ.
ರಾಜ್ಯದಲ್ಲಿ ದೊಡ್ಡ ಸಂಖ್ಯೆಯ ರೈತರು ಹಾಲು ಉತ್ಪಾದನೆಯನ್ನು ಉಪಕಸುಬನ್ನಾಗಿಸಿಕೊಂಡಿದ್ದಾರೆ. ಇನ್ನು ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಸಂಕಷ್ಟಕ್ಕೊಳಗಾಗಿರುವ ರೈತರು ಪ್ರೋತ್ಸಾಹ ಧನ ಸಿಗಬಹುದು ಅನ್ನೋ ನಿರೀಕ್ಷೆಯಲ್ಲಿ ಇದ್ದಾರೆ.
ಅಂದಹಾಗೆ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿದ ಪೂರಕ ಅಂದಾಜು, ಎರಡನೇ ಕಂತಿನಲ್ಲಿ 2024ರ ಆಗಸ್ಟ್‌ನಿಂದ 2025ರ ಫೆಬ್ರುವರಿವರೆಗೆ ಸಾಮಾನ್ಯ ವರ್ಗದ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಪಾವತಿಸಲು ₹200 ಕೋಟಿ ವಿನಿಯೋಗಿಸುವುದಾಗಿ ಸರ್ಕಾರ ಹೇಳಿದೆ.
ಹಾಲು ಉತ್ಪಾದಕರು ಸರಬರಾಜು ಮಾಡುವ ಪ್ರತಿ ಲೀಟರ್ ಹಾಲಿಗೆ ಸರ್ಕಾರ ₹5 ಪ್ರೋತ್ಸಾಹ ಧನ ನೀಡುತ್ತೆ. ಸಾಮಾನ್ಯ ವರ್ಗದ ಹಾಲು ಉತ್ಪಾದಕರಿಗೆ ₹606.69 ಕೋಟಿ ಬಾಕಿ ಉಳಿಸಿಕೊಂಡಿದೆ. ಪರಿಶಿಷ್ಟ ಜಾತಿಯ ಹಾಲು ಉತ್ಪಾದಕರಿಗೆ ಅಕ್ಟೋಬರ್ ತಿಂಗಳ ₹6.85 ಕೋಟಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ₹9 ಕೋಟಿ ಹಾಲಿನ ಪ್ರೋತ್ಸಾಹ ಧನವನ್ನು ಬಾಕಿ ಉಳಿಸಿದೆ.
ರಾಜ್ಯದಲ್ಲಿ 8 ಲಕ್ಷಕ್ಕಿಂತ ಹೆಚ್ಚು ಜನ ಸಾಮಾನ್ಯ ವರ್ಗದ ಹೈನುಗಾರರಿದ್ದಾರೆ. 51 ಸಾವಿರಕ್ಕೂ ಹೆಚ್ಚು ಪರಿಶಿಷ್ಟ ಜಾತಿಯ ಹಾಲು ಉತ್ಪಾದಕರು ಹಾಗೂ ಪರಿಶಿಷ್ಟ ಪಂಗಡದ 31 ಸಾವಿರಕ್ಕೂ ಹೆಚ್ಚು ಮಂದಿ ಹಾಲು ಉತ್ಪಾದಕರು ಇದ್ದಾರೆ. ಸರ್ಕಾರ ನೀಡುವ ಹಾಲಿನ ಪ್ರೋತ್ಸಾಹಧನಕ್ಕಾಗಿ ಹಾಲು ಉತ್ಪಾದಕರ ಸಂಘಗಳಿಗೆ ಅಲೆದಾಡುವ ಪರಿಸ್ಥಿತಿಯನ್ನು ಸೃಷ್ಟಿಸಲಾಗಿದೆ ಅಂತ ರೈತರು ದೂರಿದ್ದಾರೆ.
ಪ್ರತಿ ತಿಂಗಳು ಸರಿಯಾದ ಕ್ರಮದಲ್ಲಿ ಪ್ರೋತ್ಸಾಹಧನ ಬಿಡುಗಡೆ ಆಗ್ತಿಲ್ಲ. ಸಾಮಾನ್ಯವಾಗಿ ಮೂರ್ನಾಲ್ಕು ತಿಂಗಳಿಗೊಮ್ಮೆ ಪ್ರೋತ್ಸಾಹಧನವನ್ನು ಬಿಡುಗಡೆ ಮಾಡಲಾಗ್ತಿದೆ. ಬರ, ಅತಿವೃಷ್ಠಿ ಸಂದರ್ಭದಲ್ಲೂ ಸರ್ಕಾರ ರೈತರೊಂದಿಗೆ ಚೆಲ್ಲಾಟವಾಡುವುದು ಸರಿಯಲ್ಲ. ಬಾಕಿ ಉಳಿಸಿಕೊಂಡಿರುವ ಪ್ರೋತ್ಸಾಹಧನವನ್ನು ರೈತರಿಗೆ ಕೂಡಲೇ ಪಾವತಿಸಬೇಕು ಅಂತ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದ್ರು.