ಕರ್ನಾಟಕ V/s ಕೇಂದ್ರ ಬಜೆಟ್: ರಾಜ್ಯಕ್ಕೆ ಎಷ್ಟು ಪಾಲು?

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡಿಸಲು ಕ್ಷಣಗಣನೆ ಆರಂಭವಾಗಿದೆ. ಪಂಚರಾಜ್ಯಗಳ ಚುನಾವಣಾ ವಾತಾವರಣದ ನಡುವೆ ಮಂಡನೆಯಾಗುತ್ತಿರುವ ಈ ಬಜೆಟ್‌ನಲ್ಲಿ ದಕ್ಷಿಣ ಭಾರತದ ಆರ್ಥಿಕ ಶಕ್ತಿ ಕರ್ನಾಟಕಕ್ಕೆ ನ್ಯಾಯ ಸಿಗುತ್ತದೆಯೇ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.

ದೇಶದಲ್ಲಿ ಅತಿಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಜಿಎಸ್‌ಟಿ ಪಾಲಿನ ಅಸಮಾನತೆ ಸರಿಪಡಿಸುವುದು ಹಾಗೂ ನನೆಗುದಿಗೆ ಬಿದ್ದಿರುವ ಬೃಹತ್ ಯೋಜನೆಗಳಿಗೆ ಮರುಜೀವ ನೀಡುವುದು ಕೇಂದ್ರ ಸರ್ಕಾರದ ಮುಂದಿರುವ ದೊಡ್ಡ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಾಗೂ ಜನರು ಈ ಬಜೆಟ್‌ನಿಂದ ಮಹತ್ವದ ಘೋಷಣೆಗಳ ನಿರೀಕ್ಷೆಯಲ್ಲಿದ್ದಾರೆ.

ಹಾಗಾದ್ರೆ 2026 ರ ಬಜೆಟ್ ನಲ್ಲಿ ಕರ್ನಾಟಕದ ಪ್ರಮುಖ ಬೇಡಿಕೆಗಳೇನು? ಅನ್ನೋದನ್ನ ನೋಡೋದಾದ್ರೆ

೧) ನೀರಾವರಿ ಯೋಜನೆಗಳು
ಕೃಷ್ಣಾ ಮೇಲ್ದಂಡೆ, ಎತ್ತಿನಹೊಳೆ ಹಾಗೂ ಮಹದಾಯಿ ಯೋಜನೆಗಳಿಗೆ ‘ರಾಷ್ಟ್ರೀಯ ಯೋಜನೆ’ ಮಾನ್ಯತೆ ನೀಡುವಂತೆ ರಾಜ್ಯ ಆಗ್ರಹಿಸಿದೆ. ಇದರಿಂದ ಶೇ.90ರಷ್ಟು ಅನುದಾನ ಕೇಂದ್ರದಿಂದಲೇ ದೊರೆಯುವ ಸಾಧ್ಯತೆ ಇದೆ. ಇದು ಬರಪೀಡಿತ 23 ಜಿಲ್ಲೆಗಳ 150ಕ್ಕೂ ಹೆಚ್ಚು ತಾಲೂಕುಗಳಿಗೆ ವರದಾನವಾಗಲಿದೆ.

೨) ಭದ್ರಾ ಮೇಲ್ದಂಡೆ ಯೋಜನೆ
2023ರಲ್ಲಿ ಘೋಷಿಸಲಾದ 5,300 ಕೋಟಿ ರೂ. ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಈ ಬಜೆಟ್‌ನಲ್ಲಿ ಹಣ ಬಿಡುಗಡೆ ಆಗಲಿದೆ ಎಂಬ ನಿರೀಕ್ಷೆ ಜನರಲ್ಲಿ ಮೂಡಿದೆ.

೩) ಮೆಟ್ರೋ ಮತ್ತು ರೈಲು ಸಂಪರ್ಕ
ಬೆಂಗಳೂರು ಮೆಟ್ರೋ ಮೂರನೇ ಹಂತದ ವಿಸ್ತರಣೆ, ಸಬ್‌ಅರ್ಬನ್ ರೈಲು ಯೋಜನೆಗೆ ಹೆಚ್ಚುವರಿ ಅನುದಾನ, ಚೆನ್ನೈ–ಬೆಂಗಳೂರು–ಮೈಸೂರು ಹೈಸ್ಪೀಡ್ ರೈಲು ಯೋಜನೆಗೆ ಗ್ರೀನ್ ಸಿಗ್ನಲ್ ನಿರೀಕ್ಷಿಸಲಾಗಿದೆ.

೪) ಪ್ರಮುಖ ಸಂಸ್ಥೆಗಳು ಮತ್ತು ಯೋಜನೆಗಳು
ಹಾಸನ IIT, ರಾಯಚೂರು ಏಮ್ಸ್, ಶಿರಾಡಿ ಸುರಂಗ ಮಾರ್ಗ, ವಿಶ್ವೇಶ್ವರಯ್ಯ ಉಕ್ಕು ಕಾರ್ಖಾನೆಗೆ ಮರುಜೀವ ನೀಡುವ ನಿರೀಕ್ಷೆ ಇದೆ. ಜೊತೆಗೆ ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆ ಹಾಗೂ ಮೈಸೂರು–ಕುಶಾಲನಗರ ಹೊಸ ರೈಲು ಮಾರ್ಗಕ್ಕೂ ಬೇಡಿಕೆ ಮುಂದಿಡಲಾಗಿದೆ.

೫) ರೈಲ್ವೆ ಮತ್ತು ಕರಾವಳಿ ಅಭಿವೃದ್ಧಿಗೆ ಬೂಸ್ಟ್?
ಧಾರವಾಡ–ಕಿತ್ತೂರು–ಬೆಳಗಾವಿ, ಗಿಣಿಗೇರಾ–ರಾಯಚೂರು ರೈಲು ಮಾರ್ಗಗಳ ಅಭಿವೃದ್ಧಿ ಹಾಗೂ ಕಲಬುರಗಿ ರೈಲ್ವೆ ವಿಭಾಗ ಘೋಷಣೆಯ ನಿರೀಕ್ಷೆ ಇದೆ. ಇನ್ನು 360 ಕಿಲೋಮೀಟರ್ ಕರಾವಳಿ ಹೊಂದಿದ್ದರೂ ನಿರೀಕ್ಷಿತ ಅಭಿವೃದ್ಧಿ ಕಾಣದ ಕರ್ನಾಟಕದ ಬಂದರುಗಳಿಗೆ ಸಾಗರಮಾಲಾ ಯೋಜನೆಯಡಿ ವಿಶೇಷ ಪ್ಯಾಕೇಜ್ ಸಿಗಬಹುದು ಎಂಬ ಮಾತು ಕೇಳಿಬರುತ್ತಿದೆ.

೬) ಅತಿವೃಷ್ಟಿ, ಬರ ಮತ್ತು ಆರ್ಥಿಕ ಸವಾಲು
ನಿರಂತರ ಅತಿವೃಷ್ಟಿ, ಪ್ರವಾಹ ಮತ್ತು ಬರದಿಂದ ರಾಜ್ಯದ ಆರ್ಥಿಕತೆ ತತ್ತರಿಸಿದ್ದು, ಸಾಲದ ಹೊರೆ ಕೂಡ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಹಾಗೂ ನಗರಾಭಿವೃದ್ಧಿಗೆ ಹೆಚ್ಚಿನ ನಿಧಿ ಹಂಚಿಕೆ ಮಾಡುವಂತೆ ರಾಜ್ಯ ಒತ್ತಾಯಿಸಿದೆ. ಜೊತೆಗೆ ಗುಜರಾತ್ ಹಾಗೂ ಯುಪಿ ಮಾದರಿಯಲ್ಲಿ ಕರ್ನಾಟಕಕ್ಕೂ ಬೃಹತ್ ತಾಂತ್ರಿಕ ಮತ್ತು ಕೈಗಾರಿಕಾ ಯೋಜನೆಗಳನ್ನು ನೀಡುವ ಮೂಲಕ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಬೇಕೆಂದು ಉದ್ಯಮ ವಲಯ ಮನವಿ ಮಾಡಿದೆ.

ಇದೀಗ ಎಲ್ಲರ ಕಣ್ಣು ಕೇಂದ್ರ ಬಜೆಟ್ ಮೇಲಿದ್ದು, ಕರ್ನಾಟಕದ ಪಾಲಿಗೆ ಈ ಬಾರಿ ಎಷ್ಟು ನ್ಯಾಯ ಸಿಗಲಿದೆ ಎಂಬುದು ಕಾದು ನೋಡಬೇಕಿದೆ.

ವರದಿ : ಲಾವಣ್ಯ ಅನಿಗೋಳ

About The Author