ಬೆಂಗಳೂರು : ರಾಜ್ಯ ಬಿಜೆಪಿಗೆ ನೂತನ ರಾಜ್ಯಾಧ್ಯಕ್ಷರ ನೇಮಕ ಪ್ರಕ್ರಿಯೆಯು ಸಂಪೂರ್ಣವಾಗಿ ಗೊಂದಲದ ಗೂಡಾಗಿ ಪರಿಣಮಿಸಿದೆ. ಪಕ್ಷದಲ್ಲಿನ ಬಣ ರಾಜಕೀಯದಿಂದ ಈ ಕ್ಷಣದವರೆಗೂ ಅಧ್ಯಕ್ಷರ ಆಯ್ಕೆಗೆ ಗ್ರಹಣ ಹಿಡಿದಂತಾಗಿದೆ. ಕೇವಲ ಶೀಘ್ರದಲ್ಲೇ ಘೋಷಣೆಯಾಗುತ್ತದೆ ಎಂದು ಪಕ್ಷದ ನಾಯಕರು ಹೇಳುತ್ತಿದ್ದರೂ, ಸಹ ಅದು ಅಷ್ಟೊಂದು ಸುಲಭವಾಗಿಲ್ಲ ಎನ್ನುವುದು ಗಮನಾರ್ಹ.
ಈಗಾಗಲೇ ದೇಶದಲ್ಲಿನ ಹಲವು ರಾಜ್ಯಗಳಿಗೆ ಪಕ್ಷದ ಅಧ್ಯಕ್ಷರನ್ನು ನೇಮಕ ಮಾಡಿರುವ ಬಿಜೆಪಿ ಹೈಕಮಾಂಡ್ ರಾಜ್ಯದ ವಿಚಾರದಲ್ಲಿ ಎಚ್ಚರಿಕೆಯ ನಡೆ ಅನುಸರಿಸಲು ಮುಂದಾಗಿದೆ. ಹಾಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಕೆಳಗಿಳಿಸುವ ಮನಸ್ಥಿತಿಯಲ್ಲಿ ದಿಲ್ಲಿಯ ನಾಯಕರು ಇಲ್ಲದಿರುವುದು ಕೂಡ ಈ ವಿಳಂಬಕ್ಕೆ ಕಾರಣವಾಗಿದೆ. ಇನ್ನೂ ಬಿಜೆಪಿಯಲ್ಲಿ ಶಿಸ್ತಿನ ಬಗ್ಗೆ ಹೆಚ್ಚು ಒತ್ತಿ ಹೇಳಲಾಗುತ್ತದೆ. ಆದರೆ ಒಬ್ಬ ರಾಜ್ಯಾಧ್ಯಕ್ಷರ ನೇಮಕದಲ್ಲಿ ಯಾಕಿಷ್ಟು ಅಶಿಸ್ತು ಎನ್ನುವ ಪ್ರಶ್ನೆ ಮೂಡುತ್ತಿದೆ. ದೆಹಲಿಯ ಮಟ್ಟದಲ್ಲಿ ಪಕ್ಷದ ನಾಯಕರು ಗಟ್ಟಿಯಾಗಿದ್ದರೂ ಸಹ, ಕರ್ನಾಟಕದ ವಿಚಾರದಲ್ಲಿ ಅಸಹಾಯಕತೆ ತೋರುತ್ತಿದ್ದಾರೆ. ವಿಜಯೇಂದ್ರ ನಾಯಕತ್ವಕ್ಕೆ ಕೊಕ್ ನೀಡಲು ಹಿಂದೇಟು ಹಾಕುತ್ತಿದ್ದಾರೆ.
ಪ್ರಮುಖವಾಗಿ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿರುವ ನಾಯಕ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರ ಹೋರಾಟದ ಫಲವಾಗಿ ಕೇಸರಿ ಬಾವುಟ ಹಾರಾಡಲು ಸಾಧ್ಯವಾಗಿದೆ. ಇಂದು ದಕ್ಷಿಣ ಭಾಗದಲ್ಲಿ ಬಿಜೆಪಿಗೆ ಇಷ್ಟೊಂದು ಮಾನ್ಯತೆ ಸಿಕ್ಕಿರುವುದು ಯಡಿಯೂರಪ್ಪ ಎಂಬ ಧೀಮಂತ ನಾಯಕನಿಂದ. ಆದರೆ ಪಕ್ಷಕ್ಕೆ ಜೀವ ತುಂಬಿದ್ದ ಒಬ್ಬ ನಾಯಕನನ್ನು ಇದೇ ಬಿಜೆಪಿ ವಯಸ್ಸಿನ ಕಾರಣ ನೀಡಿ ಅವಮಾನಿಸಿ ಕುರ್ಚಿ ಕಸಿದುಕೊಂಡಿತ್ತು. ಅದರ ಫಲವಾಗಿ 2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ನೆಲಕ್ಕಚಿತು.
ಹೀಗಾಗಿಯೇ ಬಳಿಕ ನಡೆದ ರಾಜ್ಯಾಧ್ಯಕ್ಷರ ಆಯ್ಕೆಯ ವೇಳೆಯೇ ಮಾಡಿದ್ದ ತಪ್ಪಿಗೆ ಪಶ್ಚಾತ್ತಾಪವೆಂಬಂತೆ ಇದೇ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರನ್ನು ಆ ಸ್ಥಾನಕ್ಕೆ ತಂದು ಕೂರಿಸಿದೆ. ಆದರೆ ಇದು ಸಂಘನಿಷ್ಠರ ಒಂದು ಗುಂಪಿನ ವಿರೋಧಕ್ಕೆ ಕಾರಣವಾಗಿದೆ. ಇದಕ್ಕೆ ಹಲವು ಕಾರಣಗಳು ಇವೆ. ಬಿವೈ ವಿಜಯೇಂದ್ರ ಅವರಿಗೆ ನಾಯಕತ್ವದ ಅನುಭವ ಇಲ್ಲ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ, ವರ್ಚಸ್ಸಿ ನಾಯಕ ಅಲ್ಲ ಎಂದೆಲ್ಲಾ ಹೇಳುತ್ತಿರುವ ವಿರೋಧಿ ಬಣ. ಅವರ ವಿರುದ್ಧವೂ ಕೆಲವು ಅಸಮಾಧಾನಗಳು ಹೊರಹಾಕಿದೆ. ಅಲ್ಲದೆ ವಿಜಯೇಂದ್ರ ಆಯ್ಕೆಯಿಂದ ಹಿಡಿದು ಇಲ್ಲಿಯವರೆಗೂ ರೆಬಲ್ ನಾಯಕರು ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ನೇರ ವಾಗ್ದಾಳಿ ನಡೆಸುತ್ತಿದ್ದಾರೆ.
ಆದರೆ ಇದೇ ವಿಜಯೇಂದ್ರ ತಂದೆಯ ಅಧಿಕಾರಾವಧಿಯಲ್ಲಿ ಪಕ್ಷಕ್ಕೆ ಹಲವು ರೀತಿಗಳಲ್ಲಿ ಲಾಭ ಮಾಡಿಕೊಟ್ಟಿದ್ದರು. ಆಪರೇಷನ್ ಕಮಲದ ಬಳಿಕ ನಡೆದಿದ್ದ ಉಪಚುನಾವಣೆಯಲ್ಲಿ ಮಂಡ್ಯದ ಕೆ.ಆರ್. ಪೇಟೆ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಪ್ರವಾಸ ಮಾಡಿ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗಿದ್ದರು. ಜೊತೆಗೆ ಯಡಿಯೂರಪ್ಪ ಹಾಗೂ ಪಕ್ಷದ ವರ್ಚಸ್ಸನ್ನೂ ಸಹ ವಿಜಯೇಂದ್ರ ಹೆಚ್ಚಿಸಿದ್ದರು.
ಇನ್ನೂ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಾವಣೆ ಮಾಡಿ ಎಂದು ಈ ಭಿನ್ನರ ಬಣ ಪಟ್ಟು ಹಿಡಿದಿದೆ. ಈ ಹಿನ್ನೆಲೆಯಲ್ಲಿಯೇ ಹೈಕಮಾಂಡ್ ಇಕ್ಕಟ್ಟಿನಲ್ಲಿ ಸಿಲುಕಿದೆ. ಇತ್ತ ವಿಜಯೇಂದ್ರ ಕೆಳಗಿಳಿಸಿದರೆ ಯಡಿಯೂರಪ್ಪ ಅವರಂತಹ ಹಿರಿಯ ನಾಯಕನ ವಿಶ್ವಾಸ ಕಳೆದುಕೊಳ್ಳುವ ಭಯದಲ್ಲಿ ಹೈಕಮಾಂಡ್ ಇದೆ. ಇನ್ನೊಂದೆಡೆ ಪಕ್ಷದಲ್ಲಿನ ಭಿನ್ನರನ್ನೂ ಜೊತೆಯಾಗಿ ಕರೆದುಕೊಂಡು ಹೋಗುವ ಲೆಕ್ಕಚಾರಕ್ಕೂ ಮುಂದಾಗಿದೆ. ಒಂದು ಪಕ್ಷದಲ್ಲಿ ಬಣ ರಾಜಕೀಯ ಶುರುವಾದರೆ, ಆ ಪಕ್ಷಕ್ಕೆ ಭವಿಷ್ಯದಲ್ಲಿ ಸಂಕಟಗಳು ತಪ್ಪಿದ್ದಲ್ಲ ಎಂದು ಅರಿತಿರುವ ಹೈಕಮಾಂಡ್ ಎರಡೂ ಬಣಗಳ ನಡುವಿನ ಅಸಮಾಧಾನ ಶಮನಕ್ಕೆ ಮುಂದಾಗಿದೆ.
ಇದೇ ಕಾರಣಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಭಿನ್ನಮತ ಕೊನೆಗೊಳಿಸಿ, ಎಲ್ಲರ ನಡುವೆ ಸಂಧಾನ ನಡೆಸುವಂತೆ ಸೂಚಿಸಿದೆ. ಆದರೆ ಜೋಶಿ ನಡೆಸಿದ ಸಂಧಾನ ಸಕ್ಸಸ್ ಆಗಿಲ್ಲ ಎನ್ನುವುದು ಹೈಕಮಾಂಡ್ ನಾಯಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ರಾಜ್ಯ ಬಿಜೆಪಿ ಅಧ್ಯಕ್ಷರ ನೇಮಕದ ಪ್ರಕ್ರಿಯೆಯು ಇನ್ನಷ್ಟು ದಿನಗಳ ಕಾಲ ಮುಂದೂಡುವ ಯೋಚನೆಯಲ್ಲಿದೆಯಾ ಅಥವಾ ಶೀಘ್ರದಲ್ಲೇ ಘೋಷಣೆ ಮಾಡುತ್ತಾ ಎನ್ನುವ ಬಗ್ಗೆ ಯಾವುದೇ ಗುಟ್ಟನ್ನು ಹೈಕಮಾಂಡ್ ನಾಯಕರು ಇದುವರೆಗೂ ಬಿಟ್ಟುಕೊಟ್ಟಿಲ್ಲ. ಆದರೆ ಪಕ್ಷದಲ್ಲಿನ ಕೆಲ ನಾಯಕರಿಂದ ವಿರೋಧ ಅನುಭವಿಸುತ್ತಿರುವ ವಿಜಯೇಂದ್ರ ಅವರು ಮರು ಆಯ್ಕೆಯಾಗುತ್ತಾರಾ ಎನ್ನುವುದು ಸದ್ಯದ ಕುತೂಹಲವಾಗಿದೆ.




