Devotional:
ಕಾರ್ತಿಕ ಹುಣ್ಣಿಮೆ ಹಿಂದೂ ಧರ್ಮದಲ್ಲಿ ಬಹಳಷ್ಟು ಮಹತ್ವವನ್ನು ಪಡೆದುಕೊಂಡಿದೆ. ಈ ಹುಣ್ಣಿಮೆಯನ್ನು ತ್ರಿಪುರಿ ಹುಣ್ಣಿಮೆ ಎಂದೂ ಸಹ ಕರೆಯುತ್ತಾರೆ. ಈ ದಿನದಂದು ಶಿವನು ತ್ರಿಪುರಾಸುರನನ್ನು ಕೊಂದನೆಂದು ಪುರಾಣಗಳಲ್ಲಿ ಉಲ್ಲೇಖವಿದೆ. ಅಂದಿನಿಂದ ತ್ರಿಪುರಾರಿ ಎಂಬ ಹೆಸರು ಬಂತು. ಈ ಬಾರಿಯ ಕಾರ್ತಿಕ ಪೌರ್ಣಮಿ ಹುಣ್ಣಿಮೆ ನವೆಂಬರ್ 8ರಂದು ಬರಲಿದೆ. ವಾಸ್ತವವಾಗಿ, ಕಾರ್ತಿಕ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಕಾರ್ತಿಕ ಹಬ್ಬವು ಐದು ದಿನಗಳವರೆಗೆ ನಡೆಯುತ್ತದೆ. ಏಕಾದಶಿಯಂದು ಪ್ರಾರಂಭವಾಗಿ ಹುಣ್ಣಿಮೆಯ ದಿನದಂದು ಕೊನೆಗೊಳ್ಳುತ್ತದೆ. ಪುರಾಣಗಳ ಪ್ರಕಾರ, ತ್ರಿಪುರಾಸುರ ಎನ್ನುವ ರಾಕ್ಷಸನನ್ನು ಶಿವನು ಕಾರ್ತಿಕ ಹುಣ್ಣಿಮೆಯ ದಿನ ಸಂಹರಿಸಿದನು. ಶಿವನ ವಿಜಯದ ನೆನಪಿಗಾಗಿಯೇ ಕಾರ್ತಿಕ ಹುಣ್ಣಿಮೆಯನ್ನು “ತ್ರಿಪುರ ಹುಣ್ಣಿಮೆ” ಎಂದು ಆಚರಿಸಲಾಗುವುದು. ಈ ಪವಿತ್ರ ದಿನವು “ಕೃತಿಕಾ” ನಕ್ಷತ್ರದಲ್ಲಿ ಬಂದಾಗ ಅದು ಇನ್ನಷ್ಟು ಮಹತ್ವವನ್ನು ಪಡೆದುಕೊಳ್ಳುತ್ತದೆ. ಆಗ ಕಾರ್ತಿಕ ಹುಣ್ಣಿಮೆಯನ್ನು ಮಾಹಾ ಕಾರ್ತಿಕ ಹುಣ್ಣಿಮೆ ಎಂದು ಕರೆಯಲಾಗುವುದು.
ಕಾರ್ತಿಕ ಹುಣ್ಣಿಮೆಯಂದು ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡಬೇಕು. ಸಾಧ್ಯವಾದರೆ, ನದಿ ಸ್ನಾನ ಮಾಡಿ ಉಪವಾಸ ಮಾಡಬೇಕು. ನಂತರ ಲಕ್ಷ್ಮೀನಾರಾಯಣನಿಗೆ ತುಪ್ಪದ ದೀಪಗಳನ್ನು ಹಚ್ಚಬೇಕು. ಕಾರ್ತಿಕ ಮಾಸದಲ್ಲಿ ಬರುವಂತಹ ಹುಣ್ಣಿಮೆಯು ಅತ್ಯಂತ ಶ್ರೇಷ್ಠವಾಗಿದೆ. ಈ ದಿನ ಮಾಡುವಂತಹ, ಪೂಜೆಗಳಿಂದ ಜೀವನದಲ್ಲಿ ಯಶಸ್ಸು ಸಿಗುವುದು. ಈ ದಿನ ಸಮಸ್ತ ದೇವತೆಗಳಿಗೂ ಪೂಜೆ ಹಾಗೂ ಪ್ರಾರ್ಥನೆಯನ್ನು ಸಲ್ಲಿಸಬೇಕು. ಈ ದಿನ ಹರಿ-ಹರರ ಭಕ್ತರು ವಿಶೇಷ ಉಪವಾಸ ವ್ರತಗಳನ್ನು ಕೈಗೊಂಡರೆ ಹರಿ ಹರರು ಪ್ರಸನ್ನ ರಾಗುವರು .
ವಿಶೇಷ ಶಕ್ತಿ ಹೊಂದಿರುವ ಕಾರ್ತಿಕ ಹುಣ್ಣಿಮೆಯನ್ನು ದೇವ್ ದೀಪಾವಳಿ ಎಂದು ಆಚರಿಸಲಾಗುತ್ತದೆ. ಈ ದಿನ ದೇವತೆಗಳು ದೀಪಾವಳಿ ಹಬ್ಬವನ್ನು ಆಚರಿಸುವರು ಎಂಬ ನಂಬಿಕೆ ಇದೆ. ಈ ದಿನ ದೇವತೆಗಳು ಪವಿತ್ರವಾದ ನದಿಗಳ ಮೂಲಕ ಭೂಮಿಗೆ ಬರುತ್ತಾರೆ ಎನ್ನುವ ನಂಬಿಕೆಯಿದೆ. ಹಾಗಾಗಿ ಭಕ್ತರು ಕಾರ್ತಿಕ ಹುಣ್ಣಿಮೆಯ ದಿನ ನದಿ ನೀರಿನಲ್ಲಿ ಸ್ನಾನ ಮಾಡಿದರೆ ಎಲ್ಲಾ ದೇವತೆಗಳ ಆಶೀರ್ವಾದ ದೊರೆಯುವುದು ಎಂದು ಹೇಳಲಾಗುತ್ತದೆ .
ಕಾರ್ತಿಕ ಹುಣ್ಣಿಮೆಯ ದಿನ ಭಕ್ತರು ವಿಶೇಷ ಯಾತ್ರಾಸ್ಥಳದಲ್ಲಿರುವ ನದಿ ನೀರಿನಲ್ಲಿ ಸ್ನಾನ ಮಾಡುತ್ತಾರೆ. ಇದನ್ನು ಕಾರ್ತಿಕ ಸ್ನಾನ ಎಂದು ಕರೆಯುತ್ತಾರೆ. ಈ ಪವಿತ್ರ ನದಿಯ ಸ್ನಾನ ವಾರಣಾಸಿಯಲ್ಲಿ ಮಾಡಿದರೆ ಅತ್ಯಂತ ಶ್ರೇಷ್ಠ ಎನ್ನಲಾಗುತ್ತದೆ. ಕಾರ್ತಿಕ ಸ್ನಾನವನ್ನು ವಿಶೇಷವಾಗಿ ಸೂರ್ಯೋದಯ ಹಾಗೂ ಚಂದ್ರೋದಯದ ಸಮಯದಲ್ಲಿ ಮಾಡುತ್ತಾರೆ. ಇದು ಅತ್ಯಂತ ಶುಭ ಸಮಯವಾಗಿದ್ದು, ದೇವರ ಕೃಪೆಗೆ ಒಳಗಾಗುತ್ತಾರೆ ಎನ್ನಲಾಗುವುದು .
ಶಿವನಿಗೆ ಕಾರ್ತಿಕ ಹುಣ್ಣಿಮೆಯ ದಿನ ವಿಶೇಷ ಪ್ರಾರ್ಥನೆ, ಪಂಚಾಮೃತ ಅಭಿಷೇಕ ಮತ್ತು ಕ್ಷೀರಾಭಿಷೇಕ ಮಾಡಬೇಕು. ನಂತರ ಶಿವನ ಪೂಜೆಯನ್ನು ಕೈಗೊಳ್ಳಬೇಕು. ಹೀಗೆ ಮಾಡಿದರೆ ಶಿವನು ಪ್ರಸನ್ನಗೊಳ್ಳುವನು. ಭಕ್ತರು ಸಹ ಮಾನಸಿಕ ಶಾಂತಿ ಮತ್ತು ಆರ್ಥಿಕ ಲಾಭವನ್ನು ಪಡೆದುಕೊಳ್ಳುವರು.
ಭಕ್ತರು ಕಾರ್ತಿಕ ಹುಣ್ಣಿಮೆಯ ದಿನ ವಿಷ್ಣು ದೇವರಿಗೆ ವಿಶೇಷ ಹೂವಿನ ಅಲಂಕಾರ, ಧೂಪ ದ್ರವ್ಯಗಳಿಂದ ಪೂಜಿಸಲಾಗುತ್ತದೆ. ದೀಪಗಳನ್ನು ಬೆಳಗಿ ,ವಿಶೇಷ ಪ್ರಾರ್ಥನೆ ಹಾಗೂ ಮಂತ್ರ ಪಠಣವನ್ನೂ ಮಾಡಲಾಗುತ್ತದೆ. ಈ ದಿನ ವಿಷ್ಣು ದೇವರಿಗೆ ವಿಶೇಷ ಪೂಜೆ ಮಾಡಿದರೆ ಜೀವನದಲ್ಲಿ ಶಾಂತಿ ,ಸಂತೋಷ ನೆಲೆಸುತ್ತವೆ ಎನ್ನಲಾಗುತ್ತದೆ.
ಕಾರ್ತಿಕ ಹುಣ್ಣಿಮೆಯು ವಿಷ್ಣು ಹಾಗೂ ಲಕ್ಷ್ಮಿ ದೇವಿಗೆ ಅತ್ಯಂತ ಶ್ರೇಷ್ಠವಾದ ದಿನ. ಈ ದಿನದಂದು ಭಕ್ತರು ಶುಭ ಮುಹೂರ್ತದಿಂದ ಉಪವಾಸವನ್ನು ಕೈಗೊಳ್ಳಬೇಕು. ನಂತರ ಸತ್ಯನಾರಾಯಣ ವ್ರತವನ್ನು ಆಚರಿಸಬೇಕು. ಈ ದಿನ ಸತ್ಯನಾರಾಯಣ ಕಥೆಯನ್ನು ಪಠಿಸಿದರೆ ಜೀವನದಲ್ಲಿ ಒಳ್ಳೆಯಫಲಿತಾಂಶ ಸಿಗುತ್ತದೆ. ಮನೆಯಲ್ಲಿ ಸಂತೋಷ ಹಾಗೂ ನೆಮ್ಮದಿ ನೆಲೆಸುವುದು ಎಂದು ಹೇಳಲಾಗುತ್ತದೆ. ಈದಿನ ಸತ್ಯನಾರಾಯಣ ವ್ರತ ಹಾಗೂ ಕಥೆಯನ್ನು ಪಠಿಸುವವರಿಗೆ ಪುಣ್ಯ ಪ್ರಾಪ್ತಿಯಾಗುವುದು.
ಕಾರ್ತಿಕ ಹುಣ್ಣಿಮೆ ದಿನದಂದು ದೀಪದ ದಾನ ಮಾಡಬೇಕು. ಇದು ಅತ್ಯಂತ ಶ್ರೇಷ್ಠ ಹಾಗೂ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುವುದು. ಈ ದಿನದಂದು ಮಂತ್ರಗಳನ್ನು ಪಠಿಸುವುದು ಮತ್ತು ಭಜನೆಗಳನ್ನು ಮಾಡುವುದು ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ. ಮನೆಯಲ್ಲಿ ಸುಖ ಸಮೃದ್ಧಿಯು ಸದಾ ಕಾಲ ನೆಲೆಸುವುದು ಎಂದು ಪುರಾಣದಲ್ಲಿ ಉಲ್ಲೇಖವಿದೆ. ಅಕ್ಕಿ ದಾನ ಮಾಡಿದರೆ ಚಂದ್ರನು ಪ್ರಸನ್ನನಾಗುವನು. ಜೊತೆಗೆ ಕುಂಡಲಿಯಲ್ಲಿ ಚಂದ್ರ ದೋಷ ಇದ್ದರೆ ನಿವಾರಣೆಯಾಗುವುದು. ಅಕ್ಕಿಯ ದಾನವು ಮನೆಯಲ್ಲಿ ಸಮೃದ್ಧಿ, ಆರೋಗ್ಯ ಹಾಗೂ ಸಂಪತ್ತನ್ನು ತಂದುಕೊಡುವುದು ಎಂದು ಹೇಳಲಾಗುತ್ತದೆ.
ಕಾರ್ತಿಕ ಹುಣ್ಣಿಮೆಯ ದಿನವು ಅತ್ಯಂತ ಮಹತ್ವದ ದಿನ. ಈ ದಿನ ಕೈಗೊಳ್ಳುವ ಪೂಜಾ ಕ್ರಮ, ವ್ರತ ಆಚರಣೆ, ಪವಿತ್ರ ಸ್ನಾನ ಹಾಗೂ ದಾನ-ಧರ್ಮಗಳನ್ನು ಮಾಡಿದರೆ ನೂರು ಅಶ್ವಮೇಧ ಯಜ್ಞಗಳನ್ನು ಮಾಡಿದಷ್ಟು ಪುಣ್ಯ ಪ್ರಾಪ್ತಿಯಾಗುವುದು. ಕಾರ್ತಿಕ ಪೂರ್ಣಿಮೆಯ ದಿನ ಕೈಗೊಳ್ಳುವ ಶ್ರೇಷ್ಠ ವಿಧಿ-ವಿಧಾನಗಳಿಂದ ವ್ಯಕ್ತಿ ಅರ್ಥ, ಧರ್ಮ, ಕಾಮ ಮತ್ತು ಮೋಕ್ಷಗಳನ್ನು ಪಡೆದುಕೊಳ್ಳುತ್ತಾನೆ ಎಂದು ಪುರಾಣ ಕಥೆಗಳು ತಿಳಿಸುತ್ತವೆ.