ಪ್ರವೇಶ ನಿರ್ಬಂಧದ ನಡುವೆಯೂ ಅಂಜನಾದ್ರಿ ಬೆಟ್ಟ ಏರಿದ ಕೆರೆಹಳ್ಳಿ!

ಕೊಪ್ಪಳ ಜಿಲ್ಲೆಯಲ್ಲಿ ಪ್ರವೇಶ ನಿರ್ಬಂಧದ ನಡುವೆಯೂ, ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಅಂಜನಾದ್ರಿ ಬೆಟ್ಟ ಏರಿರುವ ಘಟನೆ ಗಮನ ಸೆಳೆಯುತ್ತಿದೆ. ಜಿಲ್ಲೆಯಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ಉದ್ದೇಶದಿಂದ, ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹಾಗೂ ಪುನೀತ್ ಕೆರೆಹಳ್ಳಿಗೆ ಮಾರ್ಚ್ 21ರಿಂದ 23ರವರೆಗೆ ಪ್ರವೇಶ ನಿರ್ಬಂಧ ವಿಧಿಸಲಾಗಿತ್ತು. ಆದರೂ, ದರ್ಶನಕ್ಕೆ ಒತ್ತಾಯಿಸಿದ ಕೆರೆಹಳ್ಳಿ, ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಘಟನೆ ನಡೆದಿದೆ.

ಈ ನಡುವೆ, ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿದ ಪುನೀತ್ ಕೆರೆಹಳ್ಳಿಗೆ ನೋಟಿಸ್ ನೀಡಲು ಯಲಬುರ್ಗಾ ಪೊಲೀಸರು ಮುಂದಾದರು. ಆದರೆ, ನೋಟಿಸ್ ನಕಲಿ ಎಂದು ಹೇಳಿ, ಇದು ಕಲರ್ ಝರಾಕ್ಸ್ ಮಾತ್ರ ಎಂದು ವಾದಿಸಿದ ಅವರು, ದರ್ಶನ ಮಾಡಲೇಬೇಕು ಎಂದು ಹಠ ಹಿಡಿದರು.

ಪೊಲೀಸರು ನಿಯಮ ಪಾಲನೆಗೆ ಒತ್ತಾಯಿಸಿ ಸ್ಥಳ ತೊರೆಯುವಂತೆ ಸೂಚಿಸಿದರೂ, ಕೆಲಕಾಲ ಮಾತಿನ ಚಕಮಕಿ ನಡೆದಿದೆ. ಬಳಿಕ, ಪೊಲೀಸರ ಸಮ್ಮುಖದಲ್ಲೇ ಪುನೀತ್ ಕೆರೆಹಳ್ಳಿ ಅಂಜನಾದ್ರಿ ಬೆಟ್ಟ ಏರಿರುವುದು ವರದಿಯಾಗಿದೆ. ಇದಕ್ಕೂ ಮೊದಲು, ಕನಕಗಿರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮೋದ್ ಮುತಾಲಿಕ್ ಮತ್ತು ಪುನೀತ್ ಕೆರೆಹಳ್ಳಿ ನೀಡಿದ್ದ ವಿವಾದಾತ್ಮಕ ಭಾಷಣ ಹಿನ್ನೆಲೆ, ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಈ ಹಿನ್ನೆಲೆ, ಶಿವಾಜಿ ಜಯಂತೋತ್ಸವದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಈ ನಿರ್ಬಂಧ ಆದೇಶ ಹೊರಡಿಸಿದ್ದರು. ಘಟನೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಪರಿಸ್ಥಿತಿಯನ್ನು ಪೊಲೀಸ್ ಇಲಾಖೆ ಕಟ್ಟುನಿಟ್ಟಾಗಿ ಗಮನಿಸುತ್ತಿದೆ.

ವರದಿ : ಲಾವಣ್ಯ ಅನಿಗೋಳ

About The Author