ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣ, ಹಿಂದೂ ಸಂಘಟನೆಗಳ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಇಂದು ನಡೆದ ಶೋಭಾಯಾತ್ರೆಯಲ್ಲಿ ನಿರೀಕ್ಷೆಗೂ ಮೀರಿದ ಸಾವಿರಾರು ಜನ ಜಮಾಯಿಸಿದ್ರು. ಜಿಲ್ಲೆಯ ಮೂಲೆ ಮೂಲೆಗಳಿಂದಷ್ಟೇ ಅಲ್ಲ.. ಅಕ್ಕಪಕ್ಕದ ಜಿಲ್ಲೆಗಳಿಂದ ಸಾವಿರಾರು ಜನರು ಬಂದಿದ್ರು. ಬಿಜೆಪಿ ಕಾರ್ಯಕರ್ತರೂ ಕೂಡ ಸಾಗರೋಪಾದಿಯಲ್ಲಿ ಬಂದಿದ್ರು. ಇಡೀ ಮದ್ದೂರು ಪಟ್ಟಣ ಸಂಪೂರ್ಣ ಕೇಸರಿಮಯವಾಗಿತ್ತು. ಹಿಂದೂ ಕಾರ್ಯಕರ್ತರೆಲ್ಲಾ ಕೈಯ್ಯಲ್ಲಿ ಕೇಸರಿ ಬಾವುಟ ಹಿಡಿದು ಹೆಗಲ ಮೇಲೆ ಕೇಸರಿ ಶಾಲು ಹಾಕಿಕೊಂಡಿದ್ರು. ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದ್ರು.
ಮದ್ದೂರಿನ ವಿವಿಧೆಡೆ ಪ್ರತಿಷ್ಠಾಪನೆ ಮಾಡಿದ್ದ 28 ಗಣೇಶ ಮೂರ್ತಿಗಳನ್ನು, ಸಾಮೂಹಿಕ ವಿಸರ್ಜನೆ ಮಾಡಲಾಯ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ, ಕಾಶಿ ವಿಶ್ವನಾಥ ದೇಗುಲದಲ್ಲಿ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಲಾಯ್ತು. ಮೈಸೂರು ಮಹಾರಾಜ, ಸಂಸದ ಯದುವೀರ್ ಒಡೆಯರ್, ಮಾಜಿ ಸಂಸದೆ ಸುಮಲತಾ, ಸಿ.ಟಿ. ರವಿ ಸೇರಿದಂತೆ, ರಾಜ್ಯ ಬಿಜೆಪಿ ನಾಯಕರು, ಜಿಲ್ಲಾ ಮುಖಂಡರು ಕೂಡ ಭಾಗಿಯಾಗಿದ್ರು. ಟಿಬಿ ವೃತ್ತದಿಂದ ಶುರುವಾದ ಶೋಭಾಯಾತ್ರೆಗೆ, 10ಕ್ಕೂ ಹೆಚ್ಚು ಕಲಾತಂಡಗಳು, ಪೂಜಾ ಕುಣಿತ, ಡೊಳ್ಳು ಕುಣಿತ, ಗಾರುಡಿ ಗೊಂಬೆ, ತಮಟೆ ಸೇರಿ ಹಲವು ಕಲಾ ತಂಡಗಳು ಮೆರಗು ಕೊಟ್ಟಿದ್ದವು. ಗಣೇಶನ ಮೆರವಣಿಗೆಯಲ್ಲಿ ಬಿಜೆಪಿ ನಾಯಕರು ಹೆಜ್ಜೆ ಹಾಕಿದ್ರು.
ಇನ್ನು, ಪೇಟೆ ಬೀದಿಯ ಮೂಲಕ ಹೊರಟ ಮೆರವಣಿಗೆ, ಕಲ್ಲು ತೂರಾಟ ನಡೆದಿದ್ದ ರಾಮ್‌ರಹೀಂ ನಗರದ ರಸ್ತೆಯಲ್ಲಿರುವ ಮಸೀದಿ ಎದುರು ಬಂದಿತ್ತು. ಈ ವೇಳೆ ಹಿಂದೂ ಸಂಘಟನೆಗಳ ಕಾರ್ಯಕರ್ತರ ಕೂಗು ಜೋರಾಗಿತ್ತು. ಜೈಶ್ರೀರಾಮ್, ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು ಘೋಷಣೆ ಮುಗಿಲು ಮುಟ್ಟಿತ್ತು. ಬಳಿಕ ಕೊಲ್ಲಿ ಸರ್ಕಲ್ ಮಾರ್ಗವಾಗಿ ಸಾಗಿದ ಮೆರವಣಿಗೆ, ಶಿಂಷಾ ನದಿಯಲ್ಲಿ ಸಾಮೂಹಿಕ ಗಣಪತಿ ವಿಸರ್ಜನೆ ಮೂಲಕ ಕೊನೆಯಾಯ್ತು.
ಮುನ್ನೆಚ್ಚರಿಕಾ ಕ್ರಮವಾಗಿ ಪಟ್ಟಣದಲ್ಲಿ ಪೊಲೀಸರ ಸರ್ಪಗಾವಲು ಹಾಕಲಾಗಿತ್ತು. 7 ಎಸ್‌ಪಿ, ನಾಲ್ವರು ಎಎಸ್‌ಪಿ, 15 ಕೆಎಸ್‌ಆರ್‌ಪಿ, 10 ಡಿಎಆರ್ ತುಕುಡಿ, ರ್ಯಾಪಿಡ್ ಆಕ್ಷನ್ ಫೋರ್ಸ್ ಸೇರಿ 2 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ದಕ್ಷಿಣ ವಲಯದ ಐಜಿಪಿ ಬೋರಲಿಂಗಯ್ಯ ನೇತೃತ್ವದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಮಂಡ್ಯ, ಮೈಸೂರು, ಬೆಂಗಳೂರು, ಚಾಮರಾಜನಗರ, ರಾಮನಗರ, ಹಾಸನ ಸೇರಿದಂತೆ ಹಲವು ಜಿಲ್ಲೆಗಳಿಂದಲೂ ಹೆಚ್ಚುವರಿಯಾಗಿ ಪೊಲೀಸ್ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿತ್ತು.

