ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಪ್ರತಿಭಟನಾಕಾರರ ಮೇಲೆ, ಲಾಠಿಚಾರ್ಜ್ ಮಾಡಲಾಗಿದೆ. ಸೆಪ್ಟೆಂಬರ್ 7ರ ರಾತ್ರಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ, ಕಲ್ಲು ತೂರಾಟ ಮಾಡಲಾಗಿತ್ತು. ಇದ್ರಿಂದ ರೊಚ್ಚಿಗೆದ್ದ ಜನರು, ಪೇಟೆ ಬೀದಿ ಮಾರ್ಗವಾಗಿ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿದ್ರು.
ಸೋಮವಾರ ಬೆಳಗ್ಗೆಯೇ ನೂರಾರು ಸಂಖ್ಯೆಯಲ್ಲಿ ಜನರು ಜಮಾವಣೆಗೊಂಡಿದ್ರು. ಹಿಂದೂ ಸಂಘಟನೆಗಳ ನೇತೃತ್ವದ ಪ್ರತಿಭಟನೆಗೆ, ಬಿಜೆಪಿ ಕಾರ್ಯಕರ್ತರು ಸಾಥ್ ಕೊಟ್ಟಿದ್ರು. ಕಲ್ಲು ತೂರಾಟ ಖಂಡಿಸಿ, ಜೈ ಶ್ರೀರಾಮ್ ಘೋಷಣೆ ಕೂಗಲು ಶುರು ಮಾಡಿದ್ರು. ರಸ್ತೆಗಳ ಪಕ್ಕದ ಕಂಬಗಳಲ್ಲಿದ್ದ ಹಸಿರು ಧ್ವಜ, ಬಂಟಿಂಗ್ಸ್ ಕಿತ್ತು ಹಾಕಿ, ಸುಟ್ಟು ಹಾಕಿದ್ರು. ಅದೇ ಜಾಗದಲ್ಲಿ ಕೇಸರಿ ಧ್ವಜಗಳನ್ನು ಹಾಕಿದ್ದಾರೆ.
ಮದ್ದೂರು ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ರು, ನೂರಾರು ಜನರು ಗುಂಪುಗೂಡಿದ್ದಾರೆ. ಜಿಲ್ಲೆಯ ಹಲವು ತಾಲೂಕುಗಳಿಂದ ಮತ್ತು ಅಕ್ಕಪಕ್ಕದ ಜಿಲ್ಲೆಗಳಿಂದಲೂ ಜನರು ಬಂದಿದ್ರು. ಪೇಟೆ ಬೀದಿಯಿಂದ ಹೊರಟ ಪ್ರತಿಭಟನಾ ರ್ಯಾಲಿ, ಕಲ್ಲು ತೂರಾಟ ನಡೆದಿದ್ದ ರಾಮ್‌ರಹೀಂ ನಗರದ ಮಸೀದಿಯತ್ತ ಹೊರಟಿತ್ತು. ಡಿಜೆ ಹಾಕಿಕೊಂಡು ಗಣೇಶನ ಮೂರ್ತಿಯ ಮೆರವಣಿಗೆ ಮಾಡುತ್ತಾ ಹೊರಟಿದ್ರು.
ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿದ್ರೂ, ಪರಿಸ್ಥಿತಿ ಕೈಮೀರುವ ಹಂತ ಸೃಷ್ಟಿಯಾಗಿದೆ. ಪೊಲೀಸರು ಎಷ್ಟೇ ಹೇಳಿದ್ರೂ ಕೇಳಿಲ್ಲ. ಹೀಗಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ಗುಂಪು ಚದುರಿಸಲು, ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಮಾಡಲಾಗಿದೆ.

