ಹುಬ್ಬಳ್ಳಿಯಲ್ಲಿ ಕೆಮಿಕಲ್ ರಿಯಾಕ್ಷನ್ ನಿಂದ ಉಸಿರುಗಟ್ಟಿ ಅಸ್ವಸ್ಥರಾಗಿದ್ದ ನಾಲ್ವರು ಕಾರ್ಮಿಕರ ಪ್ರಾಣವನ್ನು ಉಪನಗರ ಠಾಣೆಯ PSI ಚಂದ್ರಶೇಖರ ಅವರು ಸಮಯಪ್ರಜ್ಞೆ ಮೆರೆದು ರಕ್ಷಿಸಿದ್ದಾರೆ. ಗಸ್ತು ತಿರುಗುತ್ತಿದ್ದ ಪಿಎಸ್ಐ ಚಂದ್ರಶೇಖರ ಪರಿಸ್ಥಿತಿ ಅರಿತು ತಕ್ಷಣವೇ ಸ್ಥಳಕ್ಕಾಗಮಿಸಿ, ನಾಲ್ವರನ್ನು ಆಂಬುಲೆನ್ಸ್ ಮೂಲಕ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಹುಬ್ಬಳ್ಳಿಯ ದೇಶಪಾಂಡೆ ನಗರದ ಖಾಸಗಿ ಕಟ್ಟಡವೊಂದರಲ್ಲಿ LED ಕೆಲಸಕ್ಕೆಂದು 10 ದಿನಗಳ ಹಿಂದೆ ಬಂದಿದ್ದ ಕಾರ್ಮಿಕರು ನಿನ್ನೆ ರಾತ್ರಿ ಊಟ ಮುಗಿಸಿ ತಮ್ಮ ಕೊಠಡಿಯನ್ನು ಸಂಪೂರ್ಣವಾಗಿ ಮುಚ್ಚಿ ಮಲಗಿದ್ದರು. ಕೊಠಡಿಯೊಳಗೆ ಇಟ್ಟಿದ್ದ ಕೆಮಿಕಲ್ನಿಂದ ಉಸಿರಾಟದ ತೊಂದರೆ ಕಾಣಿಸಿಕೊಂಡು ಅಸ್ವಸ್ಥಗೊಂಡಿದ್ದರು.
ತಮ್ಮ ಕರ್ತವ್ಯ ನಿರ್ವಹಣೆಗಾಗಿ ಅದೇ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದ ಪಿಎಸ್ಐ ಚಂದ್ರಶೇಖರ ಅವರಿಗೆ ಈ ವಿಷಯ ತಿಳಿಯುತ್ತಿದ್ದಂತೆಯೇ, ತಕ್ಷಣವೇ ಸಾರ್ವಜನಿಕರ ನೆರವಿನೊಂದಿಗೆ ಅಸ್ವಸ್ಥರನ್ನು ಕೊಠಡಿಯಿಂದ ಹೊರತಂದು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಮ್ಮ ಸಮಯಪ್ರಜ್ಞೆ ಮತ್ತು ಕರ್ತವ್ಯನಿಷ್ಠೆಯೊಂದಿಗೆ ನಾಲ್ವರು ಕಾರ್ಮಿಕರ ಪ್ರಾಣ ಉಳಿಸಿದ PSI ಚಂದ್ರಶೇಖರ ಅವರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ವರದಿ : ಲಾವಣ್ಯ ಅನಿಗೋಳ




