ಅಬಕಾರಿ ಸಚಿವ ಆರ್‌ಬಿ ತಿಮ್ಮಾಪುರ ಅವರ ರಾಜೀನಾಮೆಗೆ ಒತ್ತಾಯಿಸುತ್ತಿರುವ ಬಿಜೆಪಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಬುಧವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಆರೋಪ ಮಾಡುವ ಮೊದಲು ದೃಢವಾದ ಪುರಾವೆಗಳನ್ನು ಮುಂದಿಡಲಿ ಎಂದು ಅವರು ಸವಾಲು ಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಕಳೆದ ಹತ್ತು ದಿನಗಳಿಂದ ಬಿಜೆಪಿ ವಿಧಾನಪರಿಷತ್ ಮತ್ತು ವಿಧಾನಸಭೆಯಲ್ಲಿ ಈ ವಿಚಾರವನ್ನು ಎತ್ತುತ್ತಿದೆ. ಆದರೆ ಭ್ರಷ್ಟಾಚಾರ ಯಾವಾಗ ನಡೆದಿದೆ, ಹೇಗೆ ನಡೆದಿದೆ ಎಂಬುದರ ಬಗ್ಗೆ ಒಂದೇ ಒಂದು ಪುರಾವೆಯನ್ನೂ ನೀಡಿಲ್ಲ. ಕೇವಲ ಆರೋಪಗಳ ಮೂಲಕ ವಿಧಾನಸೌಧದಲ್ಲಿ ರಾಜಕೀಯ ಆಟವಾಡುತ್ತಿದ್ದಾರೆ ಎಂದು ಟೀಕಿಸಿದರು.
ತಮ್ಮ ವಿರುದ್ಧ ಒಂದು ಸಣ್ಣ ಸಾಕ್ಷ್ಯ ನೀಡಿದರೂ ಸಚಿವ ತಿಮ್ಮಾಪುರ ರಾಜೀನಾಮೆ ನೀಡಲು ಸಿದ್ಧರಿದ್ದಾರೆ. ಬಿಜೆಪಿ ಬಳಿ ಪುರಾವೆಗಳಿದ್ದರೆ ವಿಧಾನಸಭೆಯಲ್ಲಿ ಮಂಡಿಸಲಿ ಅಥವಾ ಲೋಕಾಯುಕ್ತಕ್ಕೆ ಸಲ್ಲಿಸಲಿ. ಗ್ಯಾಲರಿಯಲ್ಲಿ ನಿಂತು ಆರೋಪ ಮಾಡುವುದನ್ನು ಬಿಟ್ಟು ವಾಸ್ತವಾಂಶಗಳನ್ನು ಮುಂದಿಡಲಿ ಎಂದು ಹೇಳಿದರು.
ಕಾಂಗ್ರೆಸ್ ಯಾವ ವಿಷಯವನ್ನು ಎತ್ತಿದರೂ ಸದಾ ಪುರಾವೆಗಳೊಂದಿಗೆ ಮಾತನಾಡುತ್ತದೆ. ಬಿಜೆಪಿ ಹೇಳುತ್ತಿರುವ ಪುರಾವೆಗಳು ಎಲ್ಲಿವೆ? ಅಪರಾಧ ನಡೆದಿರುವ ದಾಖಲೆ ಎಲ್ಲಿ? ಕೇವಲ ಒಬ್ಬ ಅಧಿಕಾರಿ ಹಣ ಕೇಳಿದ್ದಾರೆ ಎಂದು ಹೇಳಿಕೊಂಡ ಮಾತ್ರಕ್ಕೆ ಸಚಿವರು ರಾಜೀನಾಮೆ ನೀಡಬೇಕೆಂದಿಲ್ಲ ಎಂದು ಖರ್ಗೆ ಸ್ಪಷ್ಟಪಡಿಸಿದರು.
ಬಿಜೆಪಿ ಆಡಳಿತದ ಅವಧಿಯಲ್ಲಿ ಪಿಎಸ್ಐ ಹಗರಣ ಸೇರಿದಂತೆ ಹಲವು ಪ್ರಕರಣಗಳು ನಡೆದರೂ ಸಂಬಂಧಪಟ್ಟ ಸಚಿವರು ರಾಜೀನಾಮೆ ನೀಡಿರಲಿಲ್ಲ ಎಂಬುದನ್ನು ನೆನಪಿಸಿದ ಅವರು, ಹಗರಣಕ್ಕೆ ಸಂಬಂಧಿಸಿದಂತೆ ADGP ಶ್ರೇಣಿಯ ಅಧಿಕಾರಿಯನ್ನು ಬಂಧಿಸಿದಾಗಲೂ ಯಾರೂ ಹೊಣೆ ಹೊತ್ತಿರಲಿಲ್ಲ. ಆದ್ದರಿಂದ ಪುರಾವೆಗಳೊಂದಿಗೆ ಮಾತನಾಡಿ. ನಾವು ಚರ್ಚೆಗೆ ಸಿದ್ಧ ಎಂದು ಹೇಳಿದರು.
ವರದಿ : ಲಾವಣ್ಯ ಅನಿಗೋಳ




