ಕನ್ನಡ ಚಿತ್ರರಂಗದ ಆರಡಿ ಕಟೌಟ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪ್ರಪಂಚದ ಅತಿ ಎತ್ತರ ಕಟ್ಟಡದಲ್ಲಿ ವಿಕ್ರಾಂತ್ ರೋಣನಾಗಿ ರಾರಾಜಿಸಿದ ವಿಶ್ವದ ಮೊದಲ ಹೀರೋ ಎಂಬ ಪಟ್ಟವನ್ನು ಅಲಂಕರಿಸಿದ್ದಾರೆ. ಯಾವ್ ಸೂಪರ್ ಸ್ಟಾರ್ ಮಾಡದ ದಾಖಲೆಯನ್ನು ಕಿಚ್ಚ ಬುರ್ಜ್ ಖಲೀಫ್ ಕಟ್ಟದ ಮೇಲೆ ಬರೆದಿದ್ದಾರೆ. ಬಣ್ಣದ ಬದುಕಿಗೆ ಕಿಚ್ಚ ಬಂದು 25 ವರ್ಷದ ಸಂಭ್ರಮದೊಂದಿಗೆ ಬುರ್ಜ್ ಖಲೀಫ್ ಕಟ್ಟಡದಲ್ಲಿ ವಿಕ್ರಾಂತ್ ರೋಣನ ಶೀರ್ಷಿಕೆ ಟೀಸರ್ ಝಲಕ್ ರಿಲೀಸ್ ಮಾಡಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ ಸುದೀಪ್.
ಇಂತಹ ದಾಖಲೆ ಬರೆದ ಕಿಚ್ಚ ಸುದೀಪ್ ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ತ್ರಿಡಿಯಲ್ಲಿ ವಿಕ್ರಾಂತ್ ರೋಣನ ಅವತಾರವನ್ನು ತೆರೆಗೆ ತರಲು ಪ್ಲ್ಯಾನ್ ಮಾಡಲಾಗಿದೆಯಂತೆ. ಸ್ವತಃ ಈ ವಿಚಾರವನ್ನು ಕಿಚ್ಚ ಸುದೀಪ್ ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡಿದ್ದಾರೆ.
ಉಪ್ಪಿ, ದಚ್ಚು ಹಾದಿಯಲ್ಲಿ ಕಿಚ್ಚ
ತ್ರಿಡಿ ಸಿನಿಮಾ ಅಂದ್ರೆ ಖರ್ಚುವೆಚ್ಚಗಳು ಜಾಸ್ತಿ ಇರುತ್ತದೆ. ವರ್ಕ್ ಕೂಡ ಕೊಂಚ ಹೆಚ್ಚಾಗಿರುತ್ತದೆ. ಅಂತಹ ರಿಸ್ಕ್ ತಗೊಳೋದಿಕ್ಕೆ ವಿಕ್ರಾಂತ್ ರೋಣ ಟೀಂ ಜೈ ಎಂದಿದೆ. ಈಗಾಗ್ಲೇ ಕನ್ನಡದಲ್ಲಿ ಎರಡು ಸಿನಿಮಾಗಳು ತ್ರಿಡಿಯಲ್ಲಿ ತೆರೆಗಪ್ಪಳಿಸಿವೆ. ಅಂಬರೀಷ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಠಾರಿವೀರ ಸುರಸುಂದರಾಗಿ ಸಿನಿಮಾ ಹಾಗೂ ಮುನಿರತ್ನ ನಿರ್ಮಾಣದ ಡಿಬಾಸ್ ನಟನೆಯ 50 ನೇ ಸಿನಿಮಾ ಕುರುಕ್ಷೇತ್ರ ಕೂಡ ತ್ರಿಡಿಯಲ್ಲಿ ರಿಲೀಸ್ ಆಗಿತ್ತು. ಇದೀಗ ಇಂತಹ ಸಾಹಸಕ್ಕೆ ನಿರ್ಮಾಪಕ ಜಾಕ್ ಮಂಜು ಕೈ ಹಾಕಿದ್ದಾರೆ.
ಈಗಾಗ್ಲೇ ಯಾರು ಮಾಡದ ರೀತಿಯಲ್ಲಿ ವಿಕ್ರಾಂತ್ ರೋಣ ಟೈಟಲ್ ಟೀಸರ್ ರಿಲೀಸ್ ಮಾಡಿ ಯಾವ್ ಇಂಡಸ್ಟ್ರೀಗೂ ಕನ್ನಡ ಇಂಡಸ್ಟ್ರೀ ಕಮ್ಮಿ ಇಲ್ಲ ಅನ್ನೋದನ್ನು ಸಾಬೀತುಪಡಿಸಿದ್ದಾರೆ ಜಾಕ್ ಮಂಜು. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ತ್ರಿಡಿಯಲ್ಲಿ ಸಿನಿಮಾ ತರುವುದಾಗಿ ಪಣ ತೊಟ್ಟಿದ್ದಾರೆ.
ಕನ್ನಡ ಸೇರಿದಂತೆ ಒಟ್ಟು ಆರು ಭಾಷೆಯಲ್ಲಿ ವಿಕ್ರಾಂತ್ ರೋಣನಿಗೆ ನಿರ್ದೇಶಕ ಅನೂಪ್ ಬಂಡಾರಿ ಓಂಕಾರ ಆಗಿದ್ದಾರೆ. ಸದ್ಯ ಗಾಂಧಿನಗರದಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿದ್ದು, ಸ್ವಲ್ಪ ಬಿಡುವು ಸಿಕ್ಮೇಲೆ ವಿಕ್ರಾಂತ್ ರೋಣ ತೆರೆಗೆ ಬರ್ತಾನಾ ನೋಡ್ಬೇಕು.