Tuesday, October 14, 2025

Latest Posts

ಕೆಲಸದ ಜಾಗಕ್ಕೆ ಕನ್ನ ಹಾಕಿ ಕೆಜಿಗಟ್ಟಲೇ ಬೆಳ್ಳಿ ಕಳ್ಳತನ !

- Advertisement -

ಉಂಡ ಮನೆಗೆ ಕನ್ನ ಹಾಕಿದ ಎಂಬ ಗಾದೆ ಮಾತಿನಂತೆ ಮೈಸೂರಿನಲ್ಲಿ ಒಂದು ಘಟನೆ ನಡೆದಿದೆ. ತಾನು ಕೆಲಸ ಮಾಡುತ್ತಿದ್ದ ಮಾಲೀಕರ ಗೋದಾಮಿಗೆ ನುಗ್ಗಿ ದರೋಡೆ ಮಾಡಿದ್ದಾರೆ. ಕಾರು ಚಾಲಕ ಹಾಗೂ ಆತನಿಗೆ ಸಹಾಯ ಮಾಡಿದ ಐವರನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ.

ಗುಜರಾತ್‌ನ ಪರೇಶ್ ಕುಮಾರ್ ಮಾಳಿ, ಕಿಶೋ‌ರ್, ದಿಲೀಪ್ ಕುಮಾ‌ರ್, ಅರವಿಂದ್ ರಜಪೂತ್‌, ಹರೇಶ್ ಪುರೋಹಿತ್ ಹಾಗೂ ಮಧ್ಯಪ್ರದೇಶದ ರವಿ ಅಲಿಯಾಸ್ ಅರವಿಂದ ಸಿಂಗ್ ಠಾಕೋರ್ ಬಂಧಿತರು. ಆದಿ ತೋಮರ್ ಎಂಬಾತ ತಲೆಮರೆಸಿಕೊಂಡಿದ್ದಾನೆ.

ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ರಾಕೇಶ್ ಕುಮಾರ್ ಅವರು ಬೆಳ್ಳಿ ಆಭರಣ ತಯಾರಿಸುವ ಕಾರ್ಖಾನೆ ನಡೆಸುತ್ತಿದ್ದಾರೆ. ಜು.28ರಂದು ಕಾರ್ಖಾನೆಗೆ ನುಗ್ಗಿದ ಮೂವರು, ಭದ್ರತಾ ಸಿಬ್ಬಂದಿ ಬಾಯಿಗೆ ಬಟ್ಟೆ ತುರುಕಿ, ಚಾಕು ಹಾಗೂ ಪಿಸ್ತೂಲ್ ತೋರಿಸಿ ಬೆದರಿಸಿ 16 ಕೆ.ಜಿ ಬೆಳ್ಳಿಯ ವಸ್ತು ಕದ್ದು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಹೆಬ್ಬಾಳ ಪೊಲೀಸರು ಆರೋಪಿಗಾಗಿ ಹುಡುಕಾಟ ಆರಂಭಿಸಿದರು.

ನ್ಯಾಷನಲ್ ಆಟೊಮೇಟೆಡ್ ಫಿಂಗ‌ಪ್ರಿಂಟ್ ಐಡೆಂಟಿಫಿಕೇಷನ್ ನಲ್ಲಿ ಪರಿಶೀಲಿಸಿದಾಗ, ಗುಜರಾತ್‌ನ ನಟೋರಿಯಸ್ ದರೋಡೆಕೋರ ಕಿಶೋರ್ ಬೆರಳಚ್ಚು ತಾಳೆಯಾಯಿತು. ಆತನ ವಿರುದ್ಧ 30 ಪ್ರಕರಣಗಳಿದ್ದವು, ಆತನನ್ನು ಬಂಧಿಸಿ, ವಿಚಾರಣೆಗೊಳಪಡಿಸಿದಾಗ ದರೋಡೆಗೆ ಪರೇಶ್ ಕುಮಾ‌ರ್ ಯೋಜನೆ ರೂಪಿಸಿದ್ದು ಗೊತ್ತಾಯಿತು ಎಂದು ನಗರ ಪೊಲೀಸ್ ಆಯುಕ್ತ ಸೀಮಾ ಲಾಟ್ಕರ್ ಮಾಹಿತಿ ನೀಡಿದರು.

ಒಂದೂವರೆ ವರ್ಷದ ಹಿಂದೆ ಗುಜರಾತ್‌ನ ದಿಶಾ ಗ್ರಾಮದ ಪರೇಶ್ ಕುಮಾರ್, ರಾಕೇಶ್ ಅವರ ಕಾರಿನ ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದ. ನ್ಯಾಯಾಲಯದಲ್ಲಿ ಎದುರಿಸುತ್ತಿದ್ದ ಸಿವಿಲ್ ವ್ಯಾಜ್ಯ ಹಾಗೂ ಕುಟುಂಬ ನಿರ್ವಹಣೆಗಾಗಿ ಊರಿನಲ್ಲಿ 50 ಲಕ್ಷ ಸಾಲ ಮಾಡಿದ್ದ. ಅದನ್ನು ತೀರಿಸಲು ಮಾಲೀಕರ ಗೋಡಾನ್‌ನಿಂದ ಕಳವು ಮಾಡುವ ನಿರ್ಧಾರಕ್ಕೆ ಬಂದಿದ್ದ. ಅದಕ್ಕಾಗಿ ತನ್ನ ಗ್ರಾಮದ ಕಿಶೋರ್‌ನನ್ನು ಸಂಪರ್ಕಿಸಿ ಇನ್‌ಸ್ಟಾಗ್ರಾಂ ಹಾಗೂ ವಾಟ್ಸ್ಆ್ಯಪ್‌ನಲ್ಲಿ ದರೋಡೆಗೆ ಯೋಜನೆ ರೂಪಿಸಿದ ಎಂದು ಪೊಲೀಸರು ತಿಳಿಸಿದ್ದಾರೆ.

ದರೋಡೆ ಮಾಡಿದ ಬಳಿಕ ಕಾರಿನಲ್ಲಿ ಬೆಂಗಳೂರಿಗೆ ತೆರಳಿ, ಹೆಸರಘಟ್ಟದಲ್ಲಿದ್ದ ಗುಜರಾತ್ ಮೂಲದ ವ್ಯಕ್ತಿಯೊಬ್ಬನ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಆರೋಪಿಗಳನ್ನು ಬಂಧಿಸಿದ ಪೊಲೀಸರು, ಥಾರ್ ಹಾಗೂ ಕ್ರೆಟಾ ಕಾರು, 18 ಲಕ್ಷ ಮೌಲ್ಯದ 16 ಕೆ.ಜಿ ಬೆಳ್ಳಿ ವಸ್ತು, 1 ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss