Friday, December 13, 2024

Latest Posts

ಅವ್ಯವಸ್ಥೆ ಸರಿದೂಗಿಸಲು ಕಿಮ್ಸ್ ಹೊಸ ಪ್ಲ್ಯಾನ್

- Advertisement -

www.karnatakatv.net : ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಸಂಜೀವಿನಿ ಅಂತಾ ಕರೆಸಿಕೊಳ್ಳುವ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯರ ಕರ್ತವ್ಯದ ವಿಚಾರದಲ್ಲಿ ಬೇಜಾವಾಬ್ದಾರಿ ನಡೆಯನ್ನು ಇತ್ತೀಚೆಗಷ್ಟೆ ಕೇಂದ್ರ ಸಚಿವರೇ ಕಿಡಿಕಾರಿದ್ದರು.‌ ಆದರೇ ಇದೀಗ ಈ ಆಸ್ಪತ್ರೆಯ ವೈದ್ಯರ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ಆಡಳಿತ ಮಂಡಳಿ ನೂತನ ಪ್ಲಾನ್ ಗೆ ಚಿಂತನೆ ನಡೆಸಿದೆ. ಏನಿದು ಪ್ಲಾನ್ ಅಂತಾ ಹೇಳ್ತೀವಿ ನೋಡಿ.

ಹೌದು ಉತ್ತರ ಕರ್ನಾಟಕ ಭಾಗದ ಬಡಜನರ ಪಾಲಿಗೆ ಸಂಜೀವಿನಿ ಅಂತಾ ಕರೆಸಿಕೊಳ್ಳುವ ಕಿಮ್ಸ್ ಆಸ್ಪತ್ರೆ ಇಡೀ ಕರ್ನಾಟಕದಲ್ಲೇ ಅತ್ಯಂತ ಹೆಸರು ಮಾಡಿದೆ. ಕೋವಿಡ್ ನಿರ್ವಹಣೆಯಲ್ಲಿ ಅದೇ ರೀತಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡುವಲ್ಲಿ ರಾಜ್ಯದಲ್ಲೇ ಮೊದಲ ಹೆಗ್ಗಳಿಕೆಗೆ ಪಾತ್ರವಾಗಿರುವ ಕಿಮ್ಸ್ ಆಸ್ಪತ್ರೆಯಲ್ಲಿ ಸುಮಾರು 900 ಕ್ಕೂ ಅಧಿಕ ಸಿಬ್ಬಂಧಿ ಹಾಗೂ ವೈದ್ಯಾಧಿಕಾರಿಗಳು ಕಾರ್ಯನಿರ್ವಹಿಸುತ್ತಾರೆ. ಆದರೆ ರಾಜ್ಯದಲ್ಲೇ ಹೆಚ್ಚಿನ ಸಂಖ್ಯೆಯ ಸಿಬ್ಬಂದಿ ಹೊಂದಿರುವ ಕಿಮ್ಸ್ ಆಸ್ಪತ್ರೆಯಲ್ಲಿ ಆ ವೈದ್ಯರು ಪ್ರತಿ ತಿಂಗಳು ಸರ್ಕಾರದಿಂದ ಲಕ್ಷ ಲಕ್ಷ ಸಂಬಳ ತೆಗೆದುಕೊಂಡು ಕರ್ತವ್ಯಕ್ಕೆ ಹಾಜರಾಗೋದಿಲ್ಲ ಎಂಬ ಗಂಭೀರ ಆರೋಪವನ್ನು ಇತ್ತೀಚೆಗೆ ಸ್ವತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರೇ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಿಮ್ಸ್ ಆಸ್ಪತ್ರೆಯ ಆಡಳಿತ ಮಂಡಳಿಗೆ ಇಲ್ಲಿನ ವೈದ್ಯರ ಮೇಲೆ ನಿಗಾ ಇಡುವಂತೆ ಸೂಚಿಸಿದ ಹಿನ್ನೆಲೆ ಇದೀಗ ವೈದ್ಯರ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ಜಿಯೋ ಫೆನ್ಸಿಂಗ್ ಎಂಬ ನೂತನ ಪ್ಲಾನ್ ಗೆ ಕಿಮ್ಸ್ ಚಿಂತನೆ ನಡೆಸಿದೆ.

ಕಿಮ್ಸ್ ಆಸ್ಪತ್ರೆಯಲ್ಲಿ ವಿವಿಧ ವಿಭಾಗದಲ್ಲಿ 900 ಕ್ಕೂ ಅಧಿಕ ವೈದ್ಯರು ಕಾರ್ಯ ನಿರ್ವಹಿಸುತ್ತಾರೆ. ಆದ್ರೆ ರೋಗಿಗಳ ಆರೈಕೆ ವಿಚಾರದಲ್ಲಿ ಸುಮಾರು ಪ್ರತಿಶತ 60 % ಜನ ವೈದ್ಯರು ಕರ್ತವ್ಯವವನ್ನೇ ಮರೆತು ಕಣ್ಣಾಮುಚ್ಚಾಲೆ ಆಟ ಆಡ್ತಾರೆ ಎಂಬ ಸಚಿವರ ಆರೋಪದ ಹಿನ್ನೆಲೆ ಇದೀಗ ಜಿಯೋ ಫೆನ್ಸಿಂಗ್ ಎಂಬ ನೂತನ ಪ್ಲಾನ್ ಗೆ ಮುಂದಾಗಿದ್ದು, ಪ್ರತಿಯೊಬ್ಬ ವೈದ್ಯರಿಗೆ ಟ್ಯಾಗ್ ಅಳವಡಿಕೆ ಮಾಡುವ ಮೂಲಕ ಅವರ ಮೇಲೆ ನಿಗಾ ವಹಿಸಲು ರಾಜ್ಯ ಸರ್ಕಾರ ಹಾಗೂ ಕಿಮ್ಸ್ ಆಡಳಿತ ಮಂಡಳಿ ಚಿಂತನೆ ನಡೆಸಿದೆ. ಈ ಬಗ್ಗೆ ಮಾಜಿ ಸಚಿವ ಸುಧಾಕರ ಅವರು ಸ್ವತ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸೂಚನೆಯನ್ನ ನೀಡಿ ಹೋಗಿದ್ದರು. ಆದ್ರೆ ಇದೀಗ ಸಿಎಂ ಬದಲಾವಣೆಯ ನಂತರ ಸಚಿವರೇ ಇಲ್ಲದ ಹಿನ್ನೆಲೆ ಈ ನೂತನ‌ ಪ್ಲಾನ್ ಕೇವಲ ಪ್ಲಾನ್ ಆಗಿಯೇ ಉಳಿದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಗಾಗಿಯೇ ಕಿಮ್ಸ್ ಆಡಳಿತ ಮಂಡಳಿ ಕಾಯುತ್ತಿದ್ದು, ಸರ್ಕಾರದ ಸೂಚನೆಯ ಬೆನ್ನಲ್ಲೇ ಈ ಪ್ಲಾನ್ ಅಳವಡಿಕೆಗೆ ಕಿಮ್ಸ್ ಮುಂದಾಗಲಿದೆ.

ಒಟ್ಟಾರೆ ಪ್ರತಿ ತಿಂಗಳು ಲಕ್ಷ ಲಕ್ಷ ಸಂಬಳ ಪಡೆದು ಕರ್ತವ್ಯ ನಿಷ್ಠೆಯನ್ನೇ ಮರೆತು ರೋಗಿಗಳ ಆರೈಕೆಗೆ ಮುಂದಾಗದೇ ಸರ್ಕಾರದ ಕಣ್ಣಿಗೆ ಮಣ್ಣೆರಚುವ ವೈದ್ಯರ ಮೇಲೆ ನಿಗಾ ವಹಿಸಿ ಕರ್ತವ್ಯ ಪ್ರಜ್ಞೆ ಮೆರೆಯುವಂತಹ ಸರ್ಕಾರದ ಹಾಗೂ ಕಿಮ್ಸ್ ನ‌ ಈ ನೂತನ ಪ್ಲಾನ್ ಆದಷ್ಟು ಶೀಘ್ರ ಜಾರಿಯಾಗಲಿ. ಬಡಜನರ ಹಿತ ಕಾಪಾಡುವಲ್ಲಿ ವೈದ್ಯರು ಮುಂದಾಗಲಿ ಎನ್ನುವುದೆ ನಮ್ಮ ಆಶಯ.

- Advertisement -

Latest Posts

Don't Miss