ಕಿರಣ್ ರಾಜ್ ಅಭಿನಯದ “ಬಡ್ಡೀಸ್” ಚಿತ್ರೀಕರಣ ನಡೆಯುತ್ತಿದೆ

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರಾಂತ ಸಂಸ್ಥೆಗಳು ಉತ್ತಮ ಚಿತ್ರಗಳನ್ನು ನೀಡುತ್ತಾ ಬಂದಿದೆ. ಈಗ ಆ ಸಾಲಿಗೆ ಭಾರತಿ ಶೆಟ್ಟಿ ಫಿಲಂಸ್ ಸಂಸ್ಥೆ ಸಹ ಸೇರಿದೆ. ಈ ಸಂಸ್ಥೆಯ ಮೊದಲ ಚಿತ್ರವಾಗಿ ಕಿರಣ್ ರಾಜ್ ನಟನೆಯ “ಬಡ್ಡೀಸ್” ಚಿತ್ರ ನಿರ್ಮಾಣವಾಗುತ್ತಿದೆ. ಮಂಗಳೂರು ಮೂಲದ ಭಾರತಿ ಶೆಟ್ಟಿ ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬರು. ಪ್ರಸ್ತುತ ದುಬೈ ನಿವಾಸಿಯಾಗಿರುವ ಇವರು ಅಲ್ಲಿ ಜಾಹಿರಾತು ಸಂಸ್ಥೆ ನಡೆಸುತ್ತಿದ್ದಾರೆ‌. ಉತ್ತಮ ಗುಣಮಟ್ಟವಿರುವ ಚಿತ್ರಗಳನ್ನು ನಿರ್ಮಿಸುವ ಆಸೆಯಿರುವುದಾಗಿ ಭಾರತಿ ಶೆಟ್ಟಿ ತಿಳಿಸಿದ್ದಾರೆ.

ಕಿರುತೆರೆ ಹಾಗೂ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಜನಮನ ಗೆದ್ದಿರುವ ಕಿರಣ್ ರಾಜ್, ಈಗ ಹಿರಿತೆರೆಯಲ್ಲೂ ಬ್ಯುಸಿಯಾಗಿದ್ದಾರೆ.‌
ಅವರು ಅಭಿನಯಿಸುತ್ತಿರುವ “ಬಡ್ಡೀಸ್” ಚಿತ್ರಕ್ಕೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಬೆಂಗಳೂರು, ಮಂಗಳೂರು, ಗೋವಾ, ತುಮಕೂರು ಮುಂತಾದ ಕಡೆ ಚಿತ್ರೀಕರಣ ನಡೆದಿದೆ, ಸ್ನೇಹದ ಮಹತ್ವ ಸಾರುವ ಈ ಚಿತ್ರದ ಫಸ್ಟ್ ಲುಕ್ ಮುಂದಿನವಾರ ಬಿಡುಗಡೆಯಾಗಲಿದೆ.‌

ಈ ಹಿಂದೆ ಗುರುವೇಂದ್ರ ಶೆಟ್ಟಿ ಎಂಬ ಹೆಸರಿನಿಂದ ಚಿತ್ರವೊಂದನ್ನು ನಿರ್ದೇಶಿಸಿದ್ದ ನಿರ್ದೇಶಕರು ಈ ಚಿತ್ರದಿಂದ ಗುರುತೇಜ್ ಶೆಟ್ಟಿ ಎಂದು ಹೆಸರು ಬದಲಿಸಿಕೊಂಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಹಾಡುಗಳನ್ನು ನಿರ್ದೇಶಕರೆ ಬರೆದಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಇವರು ನಿರ್ದೇಶಿಸಿದ್ದ 5ಜಿ ಸಿನಿಮಾ ಜಂಕಾರ್ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿತ್ತು. ಒಂದೇ ವಾರದಲ್ಲಿ ಒಂದು ಮಿಲಿಯನ್ ಗೂ ಅಧಿಕ ವೀಕ್ಷಣೆಗೊಂಡು ಪ್ರೇಕ್ಷಕರ ‌ಮೆಚ್ಚುಗೆಗೆ‌ ಪಾತ್ರವಾಗಿತ್ತು.

22.2.22 ಬಹಳ ಅಪರೂಪದ ದಿನಾಂಕ. ಇಂತಹ ಸುದಿನದಿಂದ “ಬಡ್ಡೀಸ್” ಚಿತ್ರದ ಪ್ರಚಾರಕ್ಕೆ ಚಾಲನೆ ನೀಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಮೂರು ಹಾಡುಗಳಿರುವ ಈ ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಸಂಗೀತ ನೀಡುತ್ತಿದ್ದಾರೆ. ಯು.ಎಸ್.ಎ ವಾಸಿ‌ ನಿಭಾ ಶೆಟ್ಟಿ‌ ಎಂಬ ಮಹಿಳೆ ಈ ಚಿತ್ರದ ಛಾಯಾಗ್ರಹಕರು. ಅಲ್ಲಿನ ಸಿನಿಮಾಗಳಿಗೆ ಹಾಗೂ ಜಾಹಿರಾತು ಗಳಿಗೆ ನಿಭಾ ಶೆಟ್ಟಿ ಕೆಲಸ ಮಾಡಿದ್ದಾರೆ. ಇವರು ಪ್ರತಿಷ್ಠಿತ ಎಮ್ಮಿ ಅವಾರ್ಡ್ ಗೆ ನಾಮಿನೇಟರ್ ಸಹ ಆಗಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ, ಧನಂಜಯ್ ನೃತ್ಯ ನಿರ್ದೇಶನ ಹಾಗೂ ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಕಿರಣ್ ರಾಜ್ ಗೆ ನಾಯಕಿಯಾಗಿ ಸಿರಿ ಪ್ರಹ್ಲಾದ್ ಅಭಿನಯಿಸುತ್ತಿದ್ದಾರೆ. ಗೋಪಾಲ್ ದೇಶಪಾಂಡೆ, ಅರವಿಂದ್ ಬೋಳಾರ್, ವಿನಯ್ ರೋಹನ್ ಸಾಯಿ, ಗಿರೀಶ್ ಮುಂತಾದವರು “ಬಡ್ಡೀಸ್” ನಲ್ಲಿ ಅಭಿನಯಿಸುತ್ತಿದ್ದಾರೆ.

About The Author