Wednesday, December 3, 2025

Latest Posts

KMF ಸಿಂಹಾಸನಕ್ಕಾಗಿ ಕಾಂಗ್ರೆಸ್ನಲ್ಲೇ ಕಾಳಗ: ತ್ರಿಮೂರ್ತಿಗಳ ಕಣ್ಣು

- Advertisement -

ಕರ್ನಾಟಕ ಹಾಲು ಮಹಾ ಮಂಡಳಿ ಅಂದ್ರೆ KMF ಅಧ್ಯಕ್ಷರ ಚುನಾವಣೆಯ ಸಿದ್ಧತೆಗಳು ಅಂತಿಮ ಹಂತಕ್ಕೆ ತಲುಪಿದ್ದು, ಶೀಘ್ರದಲ್ಲೇ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈಗಾಗಲೇ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಗಳಿಗೆ ಡೆಲಿಗೇಷನ್ ಫಾರಂಗಳನ್ನು ಹಂಚಲಾಗಿದ್ದು, ಈ ಫಾರಂ ಪಡೆದ ಪ್ರತಿನಿಧಿಗಳು ಮಾತ್ರ ಮತ ಚಲಾಯಿಸಲು ಅವಕಾಶವಿದೆ ಎಂದು ಮೂಲಗಳು ತಿಳಿಸಿವೆ.

ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟವನ್ನು ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲಾ ಹಾಲು ಒಕ್ಕೂಟಗಳಿಗೆ ಡೆಲಿಗೇಷನ್ ಫಾರಂ ವಿತರಣೆ ಪೂರ್ಣಗೊಂಡಿದೆ. ಇನ್ನೂ ಒಂದೆರಡು ವಾರಗಳೊಳಗೆ KMF ಅಧ್ಯಕ್ಷರ ಚುನಾವಣೆ ನಡೆಯಲಿದೆ ಎಂದು ವಿಶ್ವಾಸಾರ್ಹ ವಲಯಗಳು ದೃಡಪಡಿಸಿವೆ.

KMF ನೂತನ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ವಲಯದಲ್ಲೇ ತೀವ್ರ ಪೈಪೋಟಿ ಉಂಟಾಗಿದೆ. ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಅವಿರೋಧವಾಗಿ ಬಮೂಲ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಇವರು, KMF ಅಧ್ಯಕ್ಷ ಸ್ಥಾನಕ್ಕೆ ಇವರ ಹೆಸರು ಮುಂಚೂಣಿಯಲ್ಲಿದೆ.

ಮಾಲೂರು ಶಾಸಕ K.Y. ನಂಜೇಗೌಡ ಕೋಲಾರ ಹಾಲು ಒಕ್ಕೂಟ ಅಧ್ಯಕ್ಷರಾಗಿರುವ ಇವರು ಕೂಡಾ ಈ ಬಾರಿ KMF ಅಗ್ರ ಸ್ಥಾನಕ್ಕೆ ಕಣ್ಣಿಟ್ಟಿದ್ದಾರೆ. ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯಕ್ಕೆ ಸೇರಿದವರಾಗಿದ್ದಾರೆ. ಇವರನ್ನೂ ಪೈಪೋಟಿಯ ಪ್ರಮುಖ ಮುಖವಾಗಿ ಪರಿಗಣಿಸಲಾಗುತ್ತಿದೆ.ಈ ಮೂವರು ತ್ರಿಮೂರ್ತಿಗಳ ಹೆಸರೇ ಈಗ ಕಾಂಗ್ರೆಸ್ ವಲಯದಲ್ಲಿ ಚರ್ಚೆಯಲ್ಲಿದೆ.

ಸದ್ಯ ರಾಜ್ಯದಲ್ಲಿ ಬೆಂಗಳೂರು, ಹಾಸನ, ಶಿವಮೊಗ್ಗ, ಮಂಡ್ಯ, ಕೋಲಾರ ಸೇರಿ ಒಟ್ಟು 16 ಹಾಲು ಉತ್ಪಾದಕರ ಸಂಘಗಳ ಒಕ್ಕೂಟಗಳು ಇವೆ. ಈ ಪೈಕಿ ಚಿಕ್ಕಬಳ್ಳಾಪುರ ಒಕ್ಕೂಟದ ನಿರ್ದೇಶಕರ ಚುನಾವಣೆ ನಡೆಯಬೇಕಿದೆ. ಉಳಿದಂತೆ 15 ಒಕ್ಕೂಟಗಳಲ್ಲಿ ಹಾಸನ, ಬೆಳಗಾವಿ ಹಾಲು ಒಕ್ಕೂಟಗಳನ್ನು ಹೊರತುಪಡಿಸಿ ಉಳಿದ 13 ಒಕ್ಕೂಟಗಳಲ್ಲಿ ಕಾಂಗ್ರೆಸ್ ಬೆಂಬಲಿಗರಿದ್ದಾರೆ. ಹಾಸನದಲ್ಲಿ JDS ಮುಖಂಡ H.D. ರೇವಣ್ಣ ಮತ್ತು ಬೆಳಗಾವಿಯಲ್ಲಿ ಬಿಜೆಪಿ ಮುಖಂಡ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷರಾಗಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss