ಬಲಗೈ ಬಂಟನಂತಿದ್ದ ಕೆ.ಎನ್. ರಾಜಣ್ಣ ಸಚಿವ ಸ್ಥಾನದಿಂದ ವಜಾಗೊಂಡ ಬಳಿಕ, ಸಿಎಂ ಸಿದ್ದರಾಮಯ್ಯ ಕಸಿವಿಸಿಗೊಂಡಿದ್ದಾರೆ. ಶತಾಯಗತಾಯ ರಾಜಣ್ಣರನ್ನ, ಸಂಪುಟಕ್ಕೆ ಸೇರಿಸಿಕೊಳ್ಳಲೇಬೇಕೆಂದು ಶತಪ್ರಯತ್ನ ಮಾಡ್ತಿದ್ದಾರೆ ಎನ್ನಲಾಗಿದೆ. ರಾಹುಲ್ ಗಾಂಧಿ ಕಟ್ಟಪ್ಪಣೆ ಬಳಿಕ ರಾಜಣ್ಣರನ್ನ ವಜಾಗೊಳಿಸಿದ್ದ ಸಿದ್ದರಾಮಯ್ಯ, ಮತ್ತೆ ಹೈಕಮಾಂಡ್ ಮನವೊಲಿಕೆಗೆ ತೆರೆಮರೆಯಲ್ಲಿ ಪ್ರಯತ್ನಿಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ಶೀಘ್ರವೇ ದೆಹಲಿಗೆ, ಸಿಎಂ ಸಿದ್ದರಾಮಯ್ಯ ತೆರಳುತ್ತಿದ್ದಾರೆ. ವರಿಷ್ಠರನ್ನು ಭೇಟಿ ಮಾಡಿ ವಾಸ್ತವವನ್ನು ವಿವರಿಸುವ ಸಾಧ್ಯತೆ ಇದೆ. ಮತಗಳ್ಳತನದ ವಿರುದ್ಧ ರಾಹುಲ್ ಗಾಂಧಿ ಹೋರಾಟ ನಡೆಸುತ್ತಿದ್ದ ವೇಳೆ, ಗೊಂದಲ ಹೇಳಿಕೆ ನೀಡಿದ ಕಾರಣಕ್ಕೆ ಸಂಪುಟದಿಂದ ರಾಜಣ್ಣರನ್ನು ವಜಾ ಮಾಡಲಾಗಿತ್ತು. ಕ್ಷಮೆಯಾಚನೆಗೂ ಅವಕಾಶ ನೀಡದೆ ಸಂಪುಟದಿಂದ ಏಕಾಏಕಿ ವಜಾಗೊಳಿಸುವಂತೆ, ಸಿದ್ದರಾಮಯ್ಯಗೆ ಹೈಕಮಾಂಡ್ ಸೂಚಿಸಿತ್ತು. ಪರಿಣಾಮ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲೇ ಸಂಪುಟದಿಂದ ವಜಾ ಮಾಡಲಾಗಿತ್ತು.
ನಂತರ ರಾಹುಲ್ ಗಾಂಧಿ, ವೇಣುಗೋಪಾಲ್ ಭೇಟಿಗೆ ರಾಜಣ್ಣ ಸಿದ್ಧತೆ ನಡೆಸಿದ್ದರು. ದೆಹಲಿ ಯಾತ್ರೆಗೆ ರಾಜಣ್ಣ ಸಜ್ಜಾಗುತ್ತಿದ್ದಂತೆ, ಸಿದ್ದರಾಮಯ್ಯ ತಡೆದಿದ್ರು. ಸದ್ಯ ದೆಹಲಿಗೆ ತೆರಳುವುದು ಬೇಡ. ಹೈಕಮಾಂಡ್ ಜೊತೆ ಮಾತನಾಡುವುದಾಗಿ ಹೇಳಿದ್ದರು ಎನ್ನಲಾಗ್ತಿದೆ. ಪರಿಶಿಷ್ಟ ಸಮುದಾಯವನ್ನ ಗಮನದಲ್ಲಿಟ್ಟುಕೊಂಡು ಮತ್ತೆ ಅವಕಾಶ ನೀಡುವಂತೆ ಮನವಿ ಮಾಡುವುದಾಗಿ ಭರವಸೆ ನೀಡಿದ್ದರಂತೆ.
ಹೀಗಾಗಿ ಮುಂದಿನ ದಿನಗಳಲ್ಲಿ ದೆಹಲಿ ಭೇಟಿ ವೇಳೆ, ರಾಜಣ್ಣ ಪರ ವಕಾಲತ್ತು ವಹಿಸುವ ಸಾಧ್ಯತೆ ಇದೆ. ಈಗಾಗಲೇ ಹಿಂದುಳಿದ ಹಾಗೂ ದಲಿತ ಸಮುದಾಯದ ಸ್ವಾಮೀಜಿಗಳಿಂದ, ರಾಜಣ್ಣ ಪರ ಬ್ಯಾಟಿಂಗ್ ಶುರುವಾಗಿದೆ. ಎಐಸಿಸಿ ನಾಯಕರನ್ನ ಭೇಟಿ ಮಾಡಿ ಸಂಪುಟಕ್ಕೆ ತೆಗೆದುಕೊಳ್ಳುವಂತೆ ಒತ್ತಾಯಿಸಲು, ಸ್ವಾಮೀಜಿಗಳು ತೀರ್ಮಾನಿಸಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಸಿದ್ದರಾಮಯ್ಯ ಅಖಾಡಕ್ಕೆ ಇಳಿಯುವ ಸಾಧ್ಯತೆ ಇದೆ. ಸಂಪುಟ ಪುನಾರಚನೆಯ ಕಸರತ್ತು ನಡೆಯುತ್ತಿದ್ದು, ಈ ಸಂಬಂಧ ಹೈಕಮಾಂಡ್ ನಾಯಕರ ಜೊತೆಗೆ ಸಿದ್ದರಾಮಯ್ಯ ಚರ್ಚೆ ನಡೆಸಲಿದ್ದಾರೆ. ಇದೇ ವೇಳೆ ಕೆ.ಎನ್. ರಾಜಣ್ಣ ಪರವಾಗಿಯೂ ಹೈಕಮಾಂಡ್ ಗಮನಕ್ಕೆ ತರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.