ಕೋಲ್ಕತ್ತಾ: ದೇಶವ್ಯಾಪಿ ಭಾರಿ ಸಂಚಲನ ಮೂಡಿಸಿರೋ ಆರ್.ಜಿ ಕಾರ್ ಆಸ್ಪತ್ರೆ (RG Kar Medical College)ಯಲ್ಲಿ 31 ವರ್ಷದ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಕ್ಷಣಕ್ಷಣಕ್ಕೂ ಹೊಸ ತಿರುವು ಪಡೆದುಕೊಳ್ಳುತ್ತಿದೆ. ತರಬೇತಿ ನಿರತ ವೈದ್ಯೆ ಮೇಲೆ ಕ್ರೌರ್ಯ ಎಸಗಿರೋ ಆರೋಪಿಯನ್ನು ಗಲ್ಲಿಗೇರಿಸಬೇಕು ಎಂಬ ಆಗ್ರಹಗಳು ಹೆಚ್ಚಾಗುತ್ತಿವೆ. ಈ ಮಧ್ಯೆ ಕಾಮುಕ ಸಂಜಯ್ ರಾಯ್ (Sanjay Roy)ನ ವಿಕೃತ ಕ್ರೌರ್ಯವನ್ನು ತನಿಖಾಧಿಕಾರಿಗಳು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
Central Bureau of Investigation
ಟ್ರೈನಿ ವೈದ್ಯೆ ಮೇಲೆ ಎರಗಿ ಕ್ರೌರ್ಯ ಮೆರೆದ ಆರೋಪಿ ಸಂಜಯ್ ರಾಯ್ ಪ್ರಾಣಿ ಪ್ರವೃತ್ತಿಯನ್ನು ಹೊಂದಿದ್ದಾನೆ.. ವಿಕೃತ ಕಾಮುಕನಂತೆ ವರ್ತಿಸಿದ್ದಾನೆ. ಕೃತ್ಯದ ಬಗ್ಗೆ ವಿವರಣೆ ನೀಡುವಾಗ ಆತ ಯಾವುದೇ ಭಾವನೆಯನ್ನ ವ್ಯಕ್ತಪಡಿಸಿಲ್ಲ. ಪಾಪ ಕೃತ್ಯ ಎಸಗಿರೋ ಬಗ್ಗೆ ಆತನಲ್ಲಿ ಯಾವುದೇ ಯಾವುದೇ ಪಾಪಪ್ರಜ್ಞೆ ಇರಲಿಲ್ಲ ಎಂಬ ಆಘಾತಕಾರಿ ಅಂಶ ತನಿಖೆಯಲ್ಲಿ ಬಯಲಾಗಿದೆ.
ಕೋಲ್ಕತ್ತಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿರೋ ಸಿಬಿಐ, ಆರ್.ಜಿ ಕಾರ್ ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನ ಈಗಾಗಲೇ ವಶಪಡಿಸಿಕೊಂಡಿಸಿದ್ದಾರೆ. ಕೃತ್ಯ ನಡೆದ ದಿನ ಅಂದರೆ ಆಗಸ್ಟ್ 8ರ ಬೆಳಗ್ಗೆ 11 ಗಂಟೆ ಸುಮಾರಿಗೆ ಆರೋಪಿ ಸಂಜಯ್ ರಾಯ್ ಆಸ್ಪತ್ರೆಯ 3ನೇ ಮಹಡಿಯಲ್ಲಿರುವ ಎದೆಯ ವಿಭಾಗದ ವಾರ್ಡ್ (chest department ward) ಬಳಿ ನಿಂತಿರುವುದು ಆಸ್ಪತ್ರೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವೇಳೆ 31 ವರ್ಷದ ಟ್ರೈನಿ ವೈದ್ಯೆ ಜೊತೆ ಇತರೆ ನಾಲ್ವರ್ ಜ್ಯೂನಿಯರ್ ಡಾಕ್ಟರ್ಗಳು ಸಹ ಇದ್ದರು. ಆರೋಪಿ ಸಂಜಯ್ ರಾಯ್ ಟ್ರೈನಿ ವೈದ್ಯರನ್ನೇ ದಿಟ್ಟಿಸಿ ನೋಡುತ್ತಾ ನಿಂತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಿಚಾರಣೆ ವೇಳೆ ಆರೋಪಿ ಕೆಲ ಸ್ಫೋಟಕ ಸಂಗತಿಗಳನ್ನು ಬಾಯ್ಬಿಟ್ಟಿದ್ದಾನೆ. ಆಗಸ್ಟ್ 9ರ ರಾತ್ರಿ ಮೃತ ಟ್ರೈನಿ ವೈದ್ಯೆ ಆಕೆಯ ಸ್ನೇಹಿತೆಯರೊಂದಿಗೆ ಊಟಕ್ಕೆಂದು ವಾರ್ಡ್ನಿಂದ ತೆರಳಿದ್ದರು. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಸೆಮಿನಾರ್ ಹಾಲ್ಗೆ 31 ವರ್ಷದ ತರಬೇತಿ ನಿರತ ವೈದ್ಯೆ ಹಿಂತಿರುಗಿದ್ದರು. ಮಧ್ಯರಾತ್ರಿ 2.30ರ ಸುಮಾರಿಗೆ ಹಾಲ್ಗೆ ಬಂದಿದ್ದ ಕಿರಿಯ ವೈದ್ಯೆ ಮೃತ ಟ್ರೈನಿ ವೈದ್ಯೆಯ ಜೊತೆ ಮಾತನಾಡಿದ್ದರು. ಬಳಿಕ ಸಂತ್ರಸ್ತೆ ಸೆಮಿನಾರ್ ಹಾಲ್ನಲ್ಲಿರುವ ಕೊಠಡಿಯಲ್ಲಿ ಮಲಗಿದ್ದರು. ಮುಂಜಾನೆ 4 ಗಂಟೆ ಸುಮಾರಿಗೆ ಆಸ್ಪತ್ರೆ ಆವರಣಕ್ಕೆ ಆಗಮಿಸಿದ್ದ ಆರೋಪಿ ಸಂಜಯ್ ರಾಯ್ ಸಂತ್ರಸ್ತೆ ಮಲಗಿದ್ದ 3ನೇ ಮಹಡಿಯ ಸೆಮಿನಾರ್ ಹಾಲ್ನ ಕೊಠಡಿಗೆ ತೆರಳಿ ಕೃತ್ಯವನ್ನು ಎಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿ ಹೇಳಿಕೆ ಹಾಗೂ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಸಿಬಿಐ (Central Bureau of Investigation) ಅಧಿಕಾರಿಗಳು ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ಮಧ್ಯಂತರ ವರದಿಯನ್ನು ಸಲ್ಲಿಸಿದ್ದಾರೆ.