ಪಶ್ಚಿಮ ಬಂಗಾಳದ ಟ್ರೈನಿ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ವಿರುದ್ಧ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಕೊಲೆಯಾದ ವೈದ್ಯೆಯ ಸಾವಿಗೆ ನ್ಯಾಯ ಸಿಗಲೇಬೇಕು ಅಂತಾ ಕೋಲ್ಕತ್ತಾದಲ್ಲಿ ವೈದ್ಯರು ನಿತ್ಯವೂ ಪ್ರತಿಭಟನೆ ನಡೆಸ್ತಿದ್ದು, ಮಮತಾ ಬ್ಯಾನರ್ಜಿ ಸರ್ಕಾರವ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಈ ಪ್ರತಿಭಟನೆಗೆ ಇದೀಗ ಮೃತಪಟ್ಟ ವೈದ್ಯೆಯ ಪೋಷಕರು ಬೆಂಬಲ ನೀಡಿದ್ದು, ಪೊಲೀಸರ ವಿರುದ್ಧ ಸ್ಫೋಟಕ ಆರೋಪ ಮಾಡಿದ್ದಾರೆ.
ಕೋಲ್ಕತ್ತಾದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ವೈದ್ಯರ ಪ್ರತಿಭಟನೆಗೆ ಸಂತ್ರಸ್ತೆಯ ಪೋಷಕರು ಜತೆಗೂಡಿಸಿದ್ದು, ಬಂಗಾಳ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪ್ರಕರಣವನ್ನು ಆರಂಭದಲ್ಲೇ ಮುಚ್ಚಿಹಾಕೋದಕ್ಕೆ ಪೊಲೀಸರು ಪ್ರಯತ್ನಿಸಿದ್ರುಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಪೊಲೀಸರು ಆರಂಭದಿಂದಲೂ ಪ್ರಕರಣ ಮುಚ್ಚಿಹಾಕಲು ಎಲ್ಲಾ ರೀತಿಯಿಂದಲೂ ಪ್ರಯತ್ನಿಸಿದ್ರು. ಆಸ್ಪತ್ರೆಯಲ್ಲಿ ನಮಗೆ ಮೃತದೇಹ ನೋಡಲು ಅವಕಾಶ ನೀಡಿರಲಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾಗ, ಪೊಲೀಸ್ ಠಾಣೆಯಲ್ಲಿ ನಮ್ಮನ್ನು ಸುಮ್ಮನೆ ಕಾಯಿಸಿದ್ದರು ಎಂದು ಸಂತ್ರಸ್ತೆಯ ತಂದೆ ಹೇಳಿದ್ದಾರೆ.
ಮಗಳ ಮೃತದೇಹವನ್ನು ನಮಗೆ ಒಪ್ಪಿಸಿದಾಗ ಹಿರಿಯ ಪೊಲೀಸರು ಅಧಿಕಾರಿಯೊಬ್ಬರು ನಮಗೆ ಹಣದ ಆಫರ್ ಕೊಟ್ಟಿದ್ರು. ನಾನು ಅದನ್ನೂ ಕೂಡಲೇ ತಿರಸ್ಕರಿಸಿದ್ದೇವೆ ಎಂದು ಹೇಳಿದ್ದಾರೆ. ನಾವು ಮೃತದೇಹವನ್ನು ಸಂರಕ್ಷಿಸಿ ಇರಿಸಲು ಬಯಸಿದ್ದೆವು. ಆದರೆ ತರಾತುರಿಯಲ್ಲಿ ಅಂತ್ಯ ಸಂಸ್ಕಾರ ನಡೆಸುವಂತೆ ನಮ್ಮ ಒತ್ತಡ ಹೇರಲಾಯಿತು. ನಮ್ಮ ಸುತ್ತಲೂ ಸುಮಾರು 300-400 ಪೊಲೀಸರು ಇದ್ದರು. ನಾವು ಮನೆಗೆ ವಾಪಸ್ ಬಂದಾಗಲೂ ಮನೆಯ ಹೊರಗಡೆ 300 ಪೊಲೀಸರು ನಿಂತಿದ್ದರು. ನಾವು ಆಕೆಯ ಅಂತ್ಯಕ್ರಿಯೆ ನಡೆಸಲೇಬೇಕೆಂದು ಅಷ್ಟೊಂದು ಒತ್ತಡ ಹಾಕಿದ್ರು ಅಂತಾ ಪೋಷಕರು ಆರೋಪಿಸಿದ್ದಾರೆ.
ಅನುಮಾನ ಮೂಡಿಸಿದ ಆಸ್ಪತ್ರೆ ಅಧಿಕಾರಿಗಳ ನಡೆ!
ಇನ್ನೂ ಕುತೂಹಲ ವಿಷ್ಯ ಅಂದ್ರೆ, ಸಂತ್ರಸ್ತ ಯುವತಿ ಯಾವಾಗ ಕೊಲೆಯಾದಳೋ ಆಸ್ಪತ್ರೆಯ ಅಧಿಕಾರಿಗಳು ಒಂದೊಂದೇ ಡ್ರಾಮಾ ಮಾಡಿದ್ದಾರೆ. ಪೋಷಕರು ಆಸ್ಪತ್ರೆಗೆ ಹೋಗಿ ಮೃತದೇಹವನ್ನು ಪರಿಶೀಲಿಸುವುದಕ್ಕೂ ಮುನ್ನವೇ ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅಧಿಕಾರಿಗಳು ಹೇಳಿದ್ದೇಕೆ? ಅಂತಾ ತಂದೆ ಪ್ರಶ್ನೆಸಿದ್ದಾರೆ. ನಮ್ಮ ಮಗಳ ಮುಖವನ್ನು ನೋಡಲು ಮೂರೂವರೆ ಗಂಟೆ ಕಾಯುವಂತೆ ಮಾಡಿದ್ರು. ನಮಗೆ ಆಕೆಯನ್ನು ನೋಡಲು ಅವಕಾಶ ನೀಡಿ ಎಂದ ಅಧಿಕಾರಿಗಳ ಕಾಲಿಗೆ ಬಿದ್ದಿವು. ಮರಣೋತ್ತರ ಪರೀಕ್ಷೆ ತಡವಾಗಿದ್ದು ಯಾಕೆ? ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು ಯಾಕೆ? ನಾನು ಪೊಲೀಸ್ ಠಾಣೆಯಲ್ಲಿ ಸಂಜೆ 7 ಗಂಟೆಗೆ ದೂರು ಸಲ್ಲಿಸಿದ್ದೆ. ಆದ್ರೆ, 11.45ಕ್ಕೆ ಎಫ್ಐಆರ್ ದಾಖಲಾಗಿದ್ದು ಯಾಕೆ ಎಂದು ಸಂತ್ರಸ್ತೆಯ ತಂದೆ ಪ್ರಶ್ನಿಸಿದ್ದಾರೆ.
ಒಟ್ನಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ದಿನಕ್ಕೊಂದು ತಿರುವು ಪಡೆಯುತ್ತಿದೆ. ಆಸ್ಪತ್ರೆಯ ಅಧಿಕಾರಿಗಳ ನಡೆ ಹಾಗೂ ಪೊಲೀಸರು ಪೋಷಕರ ಮೇಲೆ ಒತ್ತಡ ಹೇರಿದ್ದು, ಭಾರೀ ಸಂಶಯಕ್ಕೆ ಕಾರಣವಾಗಿದೆ.