Thursday, October 16, 2025

Latest Posts

ಕೋಲಾರ ವಿಧಾನಸಭಾ ಕ್ಷೇತ್ರದ ಮೇಲೆ ಕೊತ್ತೂರು ಮಂಜುನಾಥ್ ಕಣ್ಣು

- Advertisement -

ಕೋಲಾರ : ಕೋಲಾರ ಜಿಲ್ಲೆಯ ಮುಳಬಾಗಿಲು ಕ್ಷೇತ್ರದ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಳಬಾಗಿಲು ತಾಲೂಕಿನ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಅವರ ಜಾತಿ ಪ್ರಮಾಣಪತ್ರ ಮೇಲಿನ ತಕರಾರಿಂದ, ಅವರು ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ಇದೀಗ ಕೊತ್ತೂರು ಮಂಜುನಾಥ್ ಅವರ ದೃಷ್ಟಿ ಸಾಮಾನ್ಯ ಕ್ಷೇತ್ರವಾಗಿರುವ ಕೋಲಾರ ವಿಧಾನಸಭಾ ಕ್ಷೇತ್ರದ ಮೇಲೆ  ನೆಟ್ಟಿದೆ. ಈ ಹಿಂದೆ ಮುಳಬಾಗಿಲು ತಾಲೂಕಿನಲ್ಲಿ ಮಾತನಾಡಿದ್ದ ಅವರು, ಮುಂದಿನ ನನ್ನ ರಾಜಕೀಯ ಭವಿಷ್ಯ ಕೋಲಾರದಲ್ಲಿ ಮುಂದುವರೆಯಲಿದೆ ಎಂದಿದ್ದರು, ಅದಕ್ಕೆ ಪುಷ್ಟಿ ನೀಡುವಂತೆ ಪೌರಕಾರ್ಮಿಕರ ದಿನಾಚರಣೆ ಹಿನ್ನಲೆ, ಕೊತ್ತೂರು ಮಂಜುನಾಥ್ ಅವರ ಬೆಂಬಲಿಗರು ಕೋಲಾರ ನಗರಸಭೆಯ 318 ಪೌರಕಾರ್ಮಿಕರಿಗೂ ಮನೆ ಬಳಕೆಯ ಮಿಕ್ಸಿ ವಿತರಣೆ ಮಾಡಿದರು. ಆದರೆ ನಗರಸಭೆ ಕಛೇರಿ ಆವರಣದಲ್ಲೇ ಮಿಕ್ಸಿ ವಿತರಣೆ ಮಾಡಲು ಮುಂದಾಗಿದ್ದಕ್ಕೆ ದಲಿತಮುಖಂಡರು ವಿರೋಧಿಸಿ ಪ್ರತಿಭಟನೆ ಎಚ್ಚರಿಕೆ ನೀಡಿದ್ದರು, ಹೀಗಾಗಿ ಒಕ್ಕಲಿಗರ ಸಂಘದ ಹಾಸ್ಟಲ್ ಆವರಣದಲ್ಲಿ ಮಿಕ್ಸಿಗಳನ್ನು, ಕಾಂಗ್ರೆಸ್ ಮುಖಂಡ ಅನಿಲ್ ಕುಮಾರ್ ವಿತರಣೆ ಮಾಡಿದರು.


ಇದೇ ವೇಳೆ ಮಾತನಾಡಿದ ಅನಿಲ್‍ಕುಮಾರ್, ಪೌರಕಾರ್ಮಿಕರ ಬೇಡಿಕೆಯಂತೆ ಮಿಕ್ಸಿಯನ್ನ ವಿತರಣೆ ಮಾಡಲಾಗಿದೆ, ಆದರೆ ಇದಕ್ಕೆ ರಾಜಕೀಯ ಬಣ್ಣ ಬಳಿಯಲಾಗುತ್ತಿದೆ, ಕೊತ್ತೂರು ಮಂಜುನಾಥ್ ಅವರು, ಮುಳಬಾಗಿಲು ತಾಲೂಕಿನಲ್ಲಿ ಶಾಸಕರಾಗಿದ್ದಾಗಲೂ, ಕೋಲಾರ ಕ್ಷೇತ್ರದಲ್ಲಿ ಸಮಾಜಮುಖಿ ಕಾರ್ಯಗಳನ್ನ ಮಾಡಿದ್ದರು. ಇದೀಗ ಅವರು ಕೋಲಾರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ದೃಷ್ಟಿಯಿಂದ ಇದೆಲ್ಲ ಮಾಡುತ್ತಿಲ್ಲ ಎಂದರು. ಇನ್ನು ನಗರಸಭೆ ಕಚೇರಿ ಆವರಣದಲ್ಲಿ ಮಿಕ್ಸಿಗಳನ್ನ ವಿತರಣೆ ಮಾಡಲು ವಿರೋಧಿಸಿದ್ದ ದಲಿತ ಮುಖಂಡ ನಾರಾಯಣಸ್ವಾಮಿ, ಒಕ್ಕಲಿಗರ ಹಾಸ್ಟಲ್ ಆವರಣದಲ್ಲಿ ಮಿಕ್ಸಿಗಳನ್ನ ವಿತರಣೆ ಮಾಡುತ್ತಿದ್ದ ಮಾಹಿತಿ ತಿಳಿದು, ರಸ್ತೆಯಲ್ಲೆ ಪ್ರತಿಭಟನೆ ನಡೆಸಿದರು. ರಸ್ತೆಯಲ್ಲೆ ಕುಳಿತು ಅರೆಬೆತ್ತಲೆ ಪ್ರತಿಭಟನೆ ಮಾಡುತ್ತಾ ಕೊತ್ತೂರು ಮಂಜುನಾಥ್ ಅವರ ವಿರುದ್ದ ಘೋಷಣೆಗಳನ್ನ ಹಾಕಿದರು.

ನಾಗೇಶ್, ಕರ್ನಾಟಕ ಟಿವಿ, ಕೋಲಾರ

- Advertisement -

Latest Posts

Don't Miss