Thursday, December 12, 2024

Latest Posts

2023ರ ಚುನಾವಣೆಗೆ ಈಗಿನಿಂದಲೇ ಡಿಕೆ ಶಿವಕುಮಾರ್ ಸಿದ್ಧತೆ ಮಾಡಿಕೊಂಡ್ರಾ..?

- Advertisement -

ಕರ್ನಾಟಕ ಟಿವಿ : ಬೆಂಗಳೂರು : ಪ್ರತಿ ಕ್ಷೇತ್ರಕ್ಕೆ ಹೋಗಿ, ಅಲ್ಲಿನ ಕಾರ್ಯಕರ್ತರನ್ನು ಭೇಟಿ ಮಾಡಿ ಅವರ ಅಹವಾಲುಗಳನ್ನು ಆಲಿಸಿ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಮಂಗಳವಾರ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರ ನಿವಾಸಕ್ಕೆ ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ ಶಿವಕುಮಾರ್ ನಂತರ ಮಾಧ್ಯಮಗಳ ಜತೆ ಮಾತನಾಡಿದರು.

ನನ್ನ ಮನೆ ಬಳಿಯೇ ಆಗಲಿ ಅಥವಾ ಬೇರೆ ಕಡೆಗಳಲ್ಲಿ ಆಗಲಿ ಸಾವಿರಾರು ಜನರು ಸೇರುವುದು ಸೂಕ್ತ ಅಲ್ಲ. ಎರಡು ದಿನ ತಡವಾಗಬಹುದು. ಆದರೆ ಪ್ರತಿ ಕ್ಷೇತ್ರಕ್ಕೂ ಭೇಟಿ ನೀಡುತ್ತೀನಿ. ನಾವು ಗೆದ್ದಿರುವ ಕ್ಷೇತ್ರ ಹಾಗೂ ಸೋತಿರುವ ಕ್ಷೇತ್ರಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಯಕರ್ತರನ್ನು ಭೇಟಿ ಮಾಡಿ ಅವರ ಅಭಿಪ್ರಾಯ ಪಡೆದು ಅವರಲ್ಲಿ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ. ಆದ್ದರಿಂದ ಯಾರೂ ಆತಂಕ ಪಡುವುದು ಬೇಡ ನೂಕು ನುಗ್ಗಲು ಬೇಡ. ಎಲ್ಲರಿಗೂ ಅವಕಾಶ ಸಿಗುತ್ತದೆ. ನಿಮ್ಮ ಅಭಿಪ್ರಾಯದಿಂತೆ ನಾನು ನಡೆಯುತ್ತೇನೆ ಅಂತ ಹೇಳಿದ್ರು.

ನಾನು ಜಿಪಂ ಸದಸ್ಯ, ರಾಮಲಿಂಗಾರೆಡ್ಡಿ ಕಾರ್ಪೋರೇಟರ್ ಆಗಿದ್ರು..!

ಇವತ್ತು ನನ್ನ ಸ್ನೇಹಿತ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಲು ಬಂದಿದ್ದೆ. ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ರಾಮಲಿಂಗಾ ರೆಡ್ಡಿ ಕಾರ್ಪೊರೇಟರ್ ಆಗಿದ್ದರು. ಅದಕ್ಕಿಂತ ಮುಂಚಿತವಾಗಿ ನಾವಿಬ್ಬರು ಯೂತ್ ಕಾಂಗ್ರೆಸ್ ನಲ್ಲಿ ಕೆಲಸ ಮಾಡಿದ್ದೆವು. ನಾವು 80ರ ದಶಕದಲ್ಲೇ ಜತೆಯಾಗಿ ಕೆಲಸ ಮಾಡಿದ್ದೆವು. ಏಳು ಬಾರಿ ಜತೆಯಾಗಿ ವಿಧಾನಸೌಧವನ್ನು ಪ್ರವೇಶಿಸಿದ್ದೇವೆ. ಅವರು ನನಗಿಂತ ಹಿರಿಯರಾಗಿದ್ದು ಇಲ್ಲಿಯವರೆಗೂ ಅಕ್ಕಪಕ್ಕದಲ್ಲೇ ಕೂತಿದ್ದೇವೆ. ಮುಂದೆಯೂ ನಾವು ಅದೇ ರೀತಿ ಇರುತ್ತೇವೆ. ಬೆಂಗಳೂರು ನಗರಕ್ಕೆ ಇವರ ತ್ಯಾಗ, ಸೇವೆ, ಅನುಭವ ಅಗತ್ಯವಿದೆ. ಇವರು ಬೆಂಗಳೂರು ನಗರದ ಜವಾಬ್ದಾರಿ ಹಾಗೂ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಾರೆ. ಹಿರಿಯರಾಗಿರುವ ಅವರಿಂದ ಆಶೀರ್ವಾದ ಪಡೆಯಲು ನಾನು ಇಲ್ಲಿಗೆ ಬಂದಿದ್ದೇನೆ. ಇದುವರೆಗೂ ನನಗೆ ಉತ್ತಮ ಸಹಕಾರ ನೀಡಿದ್ದು, ಮುಂದೆಯೂ ಕೊಡುತ್ತಾರೆ. ಕಾರ್ಯಕರ್ತರ ಈ ಪ್ರೀತಿ ಅಭಿಮಾನ ಯಾವಾಗಲೂ ನಮ್ಮ ಜತೆ ಇರುತ್ತದೆ. ನಾವು ಅವರಿಗೆ ಅದೇ ರೀತಿ ಸ್ಪಂದಿಸಬೇಕಿದೆ.

ಬೆಂಗಳೂರಿನ 28 ಕ್ಷೇತ್ರಕ್ಕೂ ಬರುತ್ತೇನೆ – ಡಿಕೆಶಿ

ಬೆಂಗಳೂರಿನ ಕಡೆ ಇಡೀ ವಿಶ್ವ ನೋಡುತ್ತಿದೆ. ಈ ರಾಜ್ಯ ಈ ನಗರದ ಮೇಲೆ ಅವಲಂಭಿಸಿದೆ. ಇದಕ್ಕೆ ನಮ್ಮ ಪಕ್ಷ ಕೂಡ ಅದರದೇ ಆದ ಕಾರ್ಯಕ್ರಮ ರೂಪಿಸಲಿದೆ. ಇಲ್ಲಿರುವ ಜನರನ್ನು ಕಡಿಮೆ ಮಾಡುವ ಆಸೆ ಇದೆ. ಹೊರಗಿನವ ವಲಸೆ ಕಡಿಮೆ ಮಾಡುವುದು ನಮ್ಮ ಮೂಲ ಸಿದ್ಧಾಂತವಾಗಿದೆ. ಮನಮೋಹನ್ ಸಿಂಗ್ ಅವರು ಈ ಹಿಂದೆನಗರಗಳ ಕಡೆ ವಲಸೆ ಬರುವುದು ಬೇಡ ಅಂತಾ ಹಳ್ಳಿಗಳಲ್ಲೇ ಕಾರ್ಯಕ್ರಮ ರೂಪಿಸಿದ್ದರು. ಇವುಗಳನ್ನು ಮನದಲ್ಲಿಟ್ಟುಕೊಂಡು ನಾವು ನಮ್ಮ ಕಾರ್ಯಕ್ರಮ ರೂಪಿಸುತ್ತೇವೆ. ಈ ಸಂದರ್ಭದಲ್ಲಿ ನಾನು ಹೇಳುವುದೆಂದರೆ, ಬೆಂಗಳೂರಿನ 28 ಕ್ಷೇತ್ರಕ್ಕೂ ನಾನು ಬರುತ್ತೇನೆ. ಒಂದೆರಡುದಿನ ತಡವಾಗಬಹುದು. ಕೊರೋನಾ ವೈರಸ್ ನಿಂದ ಸಮಸ್ಯೆ ಇದೆ. ನಾವೆಲ್ಲರೂ ಎಚ್ಚರಿಕೆಯಿಂದ ಇರಬೇಕು. ಎಲ್ಲರಲ್ಲಿ ಜಾಗೃತಿ ಮೂಡಿಸೋಣ.ಪೀಗಾಗಿ ಕಾರ್ಯಕರ್ತರು ಸ್ವಲ್ಪ ತಾಳ್ಮೆಯಿಂದ ಇರಬೇಕು ಅಂತಾ ನಮ್ರತೆಯಿಂದ ಮನವಿ ಮಾಡಿಕೊಳ್ಳುತ್ತೇನೆ.

ಬೆಂಗಳೂರಿಗೆ ಸಂಬಂಧಿಸಿದ ವಿಚಾರದಲ್ಲಿ ಇಲ್ಲಿಗೆ ಸಂಬಂಧಪಟ್ಟ ಶಾಸಕರುಗಳಾದ ರಾಮಲಿಂಗಾ ರೆಡ್ಡಿ ಅವರ ನೇತೃತ್ವದಲ್ಲಿ ಕೂತು ಚರ್ಚೆ ಮಾಡುತ್ತಾರೆ. ಅವರ ಜತೆಗೆ ದಿನೇಶ್, ಜಾರ್ಜ್, ಕೃಷ್ಣಪ್ಪನವರು, ಜಮೀರ್, ಹ್ಯಾರೀಸ್ ಅವರ ಜತೆಗೆ ಹೊಸ ಶಾಸಕರುಗಳಿದ್ದಾರೆ. ಕೆಲವರು ಸೋತಿರುವ ಹಿರಿಯ ನಾಯಕರಿದ್ದಾರೆ. ಎಲ್ಲರೂ ಕೂತು ಚರ್ಚಿಸಿ ನಾವು ಯಾವ ರೀತಿ ಹೋರಾಟ ಮಾಡಬೇಕು. ಪಕ್ಷ ಕಾರ್ಪೋರೇಷನ್ ಮಟ್ಟದಲ್ಲಿ ಹೋರಾಡಬೇಕೆ, ಸರ್ಕಾರದ ಮಟ್ಟದಲ್ಲಿ ಹೋರಾಡಬೇಕೆ ಅಥವಾ ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕಾ ಅಂತಾ ಚರ್ಚಿಸುತ್ತಾರೆ.

ಕೇಂದ್ರ ಸರ್ಕಾರ ಉಪಕಾರ ಮಾಡುವುದು ಬೇಡ, ಕಿರುಕುಳ ಕೊಡದಿದ್ದರೆ ಸಾಕು:

ಕೇಂದ್ರ ಸರ್ಕಾರ ಆಧಾರ್, ಎನ್ ಸಿಆರ್ ಸೇರಿದಂತೆ ಅನೇಕ ವಿಚಾರವಾಗಿ ಸಾಮಾನ್ಯ  ಜನರ ವೈಯಕ್ತಿಕ ನಡೆಗಳ ಮೇಲೆ ನಿಗಾ ಇಡುತ್ತಿದೆ. ದೇಶದ ಜನರನ್ನು ಅವರಪಾಡಿಗೆ ಅವರು ಬದುಕಲು ಬಿಡಬೇಕು. ಅವರ ಮೇಲೆ ಕಣ್ಣಿಡಲು ಅವರೇನು ಭಯೋತ್ಪಾದಕರಾ? ಜನರ ವೈಯಕ್ತಿಕ ಬದುಕಿನಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಜನರನ್ನು ನೀವು ನಡೆಸಿಕೊಳ್ಳುತ್ತಿರುವ ರೀತಿ ಸರಿಇಲ್ಲ. ಅವರಿಗೆ ನೀವು ಉಪಕಾರ ಮಾಡದಿದ್ದರೂ ಪರವಾಗಿಲ್ಲ. ಅವರಿಗೆ ಮಾನಸಿಕ ಹಿಂಸೆ ನೀಡಬೇಡಿ. ಅವರು ಬದುಕಿದರೆ ದೇಶ ನೆಮ್ಮದಿಯಾಗಿ ಬದುಕುತ್ತದೆ. ಅವರು ಆರ್ಥಿಕವಾಗಿ ಬಲವಾದರೆ ದೇಶ ಬಲವಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಳ್ಳಿ. ಈ ಬಗ್ಗೆ ನಾನು ವಿವರವಾಗಿ ಮಾಹಿತಿ ಪಡೆದು ನಂತರ ಮುಂದಿನ ಪ್ರತಿಕ್ರಿಯೆ ನೀಡುತ್ತೇನೆ ಅಂತ ಡಿಕೆಶಿವಕುಮಾರ್ ಹೇಳಿದ್ರು.

ಕರ್ನಾಟಕ ಟಿವಿ, ಬೆಂಗಳೂರು

- Advertisement -

Latest Posts

Don't Miss