ಕೃಷಿ ಸಚಿವ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಅವರು ಸೆಪ್ಟೆಂಬರ್ 29 ರಂದು ಕೆ.ಆರ್.ಎಸ್‌ನಲ್ಲಿ ನಡೆದ ಕಾವೇರಿ ಆರತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಾವೇರಿ ಆರತಿಯನ್ನು ಕೆಲವರು ವಿರೋಧಿಸಿ ಕೋರ್ಟ್‌ಗೆ ಹೋಗಿದ್ದರೂ, ಮುಂದಿನ ದಿನಗಳಲ್ಲಿ ವಿರೋಧಿಗಳು ಕೂಡ ಮನಸ್ಸು ಬದಲಿಸಿಕೊಳ್ಳುತ್ತಾರೆ. ಕಾವೇರಿ ಆರತಿಗೆ ಎಲ್ಲರೂ ಪ್ರೀತಿಯಿಂದ ಸೇರಿ ಅನುಬಂಧ ಬೆಳೆಸೋಣ ಎಂದು ಕರೆ ನೀಡಿದರು. ಗಂಗೆಯನ್ನು ಸಂತೃಪ್ತಿಗೊಳಿಸಲು ಉತ್ತರದಲ್ಲಿ ಗಂಗಾ ಆರತಿ ನಡೆಯುವಂತೆ, ಕರ್ನಾಟಕದ ಜೀವನದಿಯಾಗಿರುವ ಕಾವೇರಿಗೂ ನಮನ ಸಲ್ಲಿಸಬೇಕು ಎಂಬುದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಿರ್ಧಾರ ಎಂದು ತಿಳಿಸಿದರು.
ಪ್ರಕೃತಿಗೆ, ವಿಶೇಷವಾಗಿ ಜೀವನಾಡಿ ಕಾವೇರಿಗೆ ನಮನ ಸಲ್ಲಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕುಡಿಯುವ ನೀರು, ಕೃಷಿ ಹಾಗೂ ತಮಿಳುನಾಡು ಸೇರಿದಂತೆ ಕೋಟ್ಯಾಂತರ ಜನರ ಬದುಕನ್ನು ಕಟ್ಟಿಕೊಟ್ಟ ಕಾವೇರಿ ನದಿಗೆ ಆರತಿ ಸಲ್ಲಿಸುವುದು ಪವಿತ್ರ ಕಾರ್ಯವೆಂದು ಅವರು ಅಭಿಪ್ರಾಯಪಟ್ಟರು. ಸದ್ಯ ವಿಚಾರ ಕೋರ್ಟ್‌ನಲ್ಲಿ ಇರುವುದರಿಂದ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ನಡೆಸುತ್ತಿದ್ದೇವೆ ಎಂದೂ ಸಚಿವರು ಸ್ಪಷ್ಟಪಡಿಸಿದರು.
ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಮುಕ್ತಿದಾನಂದ ಸ್ವಾಮೀಜಿ ಅವರು ಕೂಡ ಮಾತನಾಡಿ, ನದಿಗಳಿಗೆ ನಮನ ಸಲ್ಲಿಸುವುದು ನಮ್ಮ ಸಂಸ್ಕೃತಿಯ ಶಾಶ್ವತ ಪರಂಪರೆ ಎಂದು ಹೇಳಿದರು. ಅನ್ನ ಕೊಡುವ ಮಾತೆಗೆ ಕೃತಜ್ಞತೆಯಿಂದ ನಮಿಸುವ ಅವಕಾಶ ನಮಗೆ ದೊರೆತಿದೆ. ಇದು ಪವಿತ್ರ ಕಾರ್ಯ ಎಂದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಭಿಲಾಷೆಯಂತೆ ಕಾವೇರಿ ಆರತಿ ದಸರಾ ಹಬ್ಬದ ಪ್ರಮುಖ ಅಂಗವಾಗಬೇಕು ಎಂದು ಹಾರೈಸಿದರು.
ಮೂರನೇ ದಿನದ ಕಾವೇರಿ ಆರತಿ ಕಾರ್ಯಕ್ರಮಕ್ಕೂ ಕೆ.ಆರ್.ಎಸ್‌ಗೆ ಜನಸಾಗರವೇ ಹರಿದುಬಂದಿತು. ರಾಜ್ಯದ ವಿವಿಧ ಭಾಗಗಳಿಂದ ಜನರು ಆಗಮಿಸಿ ಕಾವೇರಿ ಆರತಿ ವೀಕ್ಷಿಸಿದರು. ಧಾರ್ಮಿಕ ಕಾರ್ಯಕ್ರಮದ ಜೊತೆಗೆ ಮಂಡ್ಯದ ಸೊಗಡನ್ನು ತೋರಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು, ಲೇಸರ್ ಶೋ ಮತ್ತು ಖ್ಯಾತ ಕಲಾವಿದರಾದ ಡಿ. ಪಲ್ಲವಿ, ಲಕ್ಷ್ಮಿ ನಾಗರಾಜ್ ಮತ್ತು ಇಂದು ನಾಗರಾಜ್ ಅವರ ಗಾಯನಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದವು. ಕಾವೇರಿ ಆರತಿ ಈಗ ಜನರ ನಂಬಿಕೆ ಹಾಗೂ ಸರ್ಕಾರದ ಮಹತ್ವಾಕಾಂಕ್ಷೆಯ ಸಂಕೇತವಾಗಿ ಬೆಳೆಯುತ್ತಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ