ಬೆಂಗಳೂರು : ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆಯಾಗುವುದಿಲ್ಲ. ನಾನೇ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುತ್ತೇನೆ. ಅಲ್ಲದೆ ಮುಂಬರುವ ಚುನಾವಣೆಯನ್ನೂ ಸಹ ನನ್ನ ನೇತೃತ್ವದಲಿ ನಡೆಯುತ್ತದೆ ಎಂದು ಖುದ್ದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಮೂಲಕ ಶಾಸಕರು ಸೇರಿದಂತೆ ಹೈಕಮಾಂಡ್‌ಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಇಷ್ಟು ದಿನಗಳ ಕಾಲ ಸಿಎಂ ಆಗಿ ಪ್ರಮೋಶನ್ ಪಡೆಯುವ ತವಕದಲ್ಲಿದ್ದ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸಿದ್ದರಾಮಯ್ಯ ಶಾಕ್ ನೀಡಿದ್ದಾರೆ. ಅಲ್ಲದೆ ಸಿಎಂ ಹೇಳಿದ ಬಳಿಕ ಎಲ್ಲವೂ ಮುಗಿಯುತು, ಅಂಪೈರ್ ಬಹಿರಂಗವಾಗಿ ಹೇಳಿದ ಮೇಲೆ ಮ್ಯಾಚ್ ಕ್ಲೋಸ್ ಎಂದು ಸಚಿವ ಸತೀಶ್ ಜಾರಕಿಹೊಳಿ ಸಿದ್ದು ಹೇಳಿಕೆಯನ್ನು ಬೆಂಬಲಿಸಿದ್ದಾರೆ.
ಇನ್ನೂ ಈ ಎಲ್ಲ ಬೆಳವಣಿಗೆಗಳ ನಡುವೆಯೇ ಡಿಕೆ ಶಿವಕುಮಾರ್ ಬಣದ ಆಪ್ತ, ಕುಣಿಗಲ್‌ನ ಶಾಸಕ ಡಾ. ರಂಗನಾಥ್ ಮತ್ತೆ ಡಿಕೆಶಿ ಸಿಎಂ ಆಗಬೇಕೆಂಬ ಮಂತ್ರದ ಜಪ ಮಾಡಿದ್ದಾರೆ. ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ನನ್ನ ಹೇಳಿಕೆಯನ್ನು ನಾನು ಪ್ರತಿಪಾದಿಸುತ್ತೇನೆ. ಡಿಕೆ ಶಿವಕುಮಾರ್ ಅವರು 40 ವರ್ಷಗಳಿಂದ ಕಾಂಗ್ರೆಸ್ ಪಕ್ಷ ಕಟ್ಟಲು ಶ್ರಮ ಹಾಕಿದ್ದಾರೆ. ಪಕ್ಷಕ್ಕಾಗಿ ಹೋರಾಟ ಮಾಡಿದ್ದಾರೆ. ಇವತ್ತು 140 ಸ್ಥಾನ ಬರಲು ಡಿಕೆಶಿ ಪ್ರಮುಖ ಕಾರಣ ಎಂದು ನಾನು ಹೆಮ್ಮೆಯಿಂದ ಹೇಳುತ್ತೇನೆ. ಇವತ್ತಲ್ಲ ನಾಳೆ, ಸಿಎಂ ಆಗೇ ಆಗುತ್ತಾರೆ. ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಡಿಕೆಶಿ ಪರ ಬ್ಯಾಟ್ ಬೀಸಿದ್ದಾರೆ.
ನಮ್ಮ ಮಿತಿಯಲ್ಲಿ ನಾವು ಇರುವುದು ರಾಜಕೀಯ ಧರ್ಮ. ಶಾಸಕರ ಬೆಂಬಲದ ಬಗ್ಗೆ ಸಿಎಂ ಮಾತಾಡಿರಲ್ಲ. ಯಾಕೆಂದರೆ ಸಿಎಂ ಅವರು ಹಿರಿಯರಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಶಾಸಕರೆಲ್ಲ ಸಂತೋಷದಲ್ಲಿದ್ದೇವೆ. ಇಂದಲ್ಲ ನಾಳೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಿಎಂ ಆಗಿಯೇ ಆಗುತ್ತಾರೆ. ಸದ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇರದೇ ಇರಬಹುದು. ಆದರೆ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳುವ ಮೂಲಕ ಐದು ವರ್ಷ ನಾನೇ ಸಿಎಂ ಎಂದಿದ್ದ ಸಿದ್ದರಾಮಯ್ಯ ಹೇಳಿಕೆಗೆ ಕೌಂಟರ್ ನೀಡಿದ್ದಾರೆ.
ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಇಬ್ಬರೂ ದೆಹಲಿಗೆ ಹೋಗಿದ್ದಾರೆ. ಅವರು ಕೇಂದ್ರದ ಹಾಗೂ ರಾಜ್ಯದ ನಾಯಕರ ಮಟ್ಟದಲ್ಲಿನ ಚರ್ಚೆ ನಡೆಸುತ್ತಾರೆ. ನಮ್ಮ ರಾಜ್ಯ ಸರ್ಕಾರ ದೇಶದಲ್ಲಿ ಪ್ರಮುಖವಾದ ಸ್ಥಾನದಲ್ಲಿದೆ. ಬಿಜೆಪಿಯವರನ್ನು ಮಣಿಸಿ, ಅವರಿಗೆ ಸೆಡ್ಡು ಹೊಡೆದು ನಮ್ಮ ಕಾಂಗ್ರೆಸ್ ಸರ್ಕಾರ ಬಡವರ ಜೊತೆಗಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ನಾಯಕರಿಗೆ ಬಲ ನೀಡುವ ನಿಟ್ಟಿನಲ್ಲಿ ಹೇಳಿಕೆ ನೀಡಿರಬಹುದು ಎಂದು ಭಾವಿಸಿಕೊಳ್ಳುತ್ತೇನೆ. ಆ ಇಬ್ಬರೂ ನಾಯಕರು ಹೈಕಮಾಂಡ್ ನಾಯಕರ ಜೊತೆ ಚರ್ಚಿಸಲಿದ್ದಾರೆ ಎಂದು ಹೇಳಿದ್ದಾರೆ.
ನಮ್ಮ ಶಾಸಕರ ಅಹವಾಲು ಹಾಗೂ ಅವರ ಕಷ್ಟ ಸುಖಗಳನ್ನು ಉಸ್ತುವಾರಿ ಸುರ್ಜೇವಾಲಾ ಅವರು ಬುಧವಾರವೂ ಆಲಿಸಿದ್ದಾರೆ. ಆಗ ನಮ್ಮ ಅಭಿಪ್ರಾಯ, ವಿಚಾರಗಳನ್ನು ಅವರ ಎದುರು ಮಂಡಿಸಿದ್ದೇವೆ. ಅವರು ಎಲ್ಲವನ್ನೂ ಬಗೆಹರಿಸುವ ವಿಶ್ವಾಸವಿದೆ ಎಂದು ರಂಗನಾಥ್ ತಿಳಿಸಿದ್ದಾರೆ. ಸುಜೇವಾಲಾ ಮುಂದೆ ನಾಯಕತ್ವದ ಬದಲಾವಣೆಯ ಬಗ್ಗೆ ಪ್ರಸ್ತಾಪದ ಕುರಿತು ಪ್ರತಿಕ್ರಿಯಿಸಿ, ಮಾಧ್ಯಮಗಳು ಫ್ರೆಂಡ್ಲಿಯಾಗಿ ಇಂದು, ನಾಳೆ ಆಗಬೇಕು ಎಂದು ಹೊರಟಿವೆ. ಆದರೆ ಕಾಂಗ್ರೆಸ್ ಪಕ್ಷ ಶಿಸ್ತಿನ ಪಕ್ಷವಾಗಿದೆ. ತಮ್ಮದೇ ಆದ ಮಾನದಂಡಗಳ ಪ್ರಕಾರ ಹೈಕಮಾಂಡ್ ಸಮಯಕ್ಕೆ ತಕ್ಕಂತೆ ನಿರ್ಧಾರ ಪಡೆಯುತ್ತಲೇ ಬಂದಿದೆ. ಇದು ನಮ್ಮ ಪಕ್ಷದ ಇತಿಹಾಸವಾಗಿದೆ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್ ಆದೇಶ ಹಾಗೂ ಶಾಸಕರ ಅಪೇಕ್ಷೆಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿಯೇ ಸಿಎಂ, ಡಿಸಿಎಂ ಇಬ್ಬರೂ ಸೇರಿ ರಾಜ್ಯದ ಜನರಿಗೆ ಕಾಂಗ್ರೆಸ್ ನೀಡಿರುವ ಪ್ರಣಾಳಿಕೆಗಳನ್ನು ಈಡೇರಿಸಿ ತೋರಿಸಿದ್ದಾರೆ. ನಮ್ಮ ನಾಯಕರಾದ ರಾಹುಲ್ ಗಾಂಧಿಯವರು ಸಮರ್ಥ ಹಾಗೂ ಸೂಕ್ತವಾದ ನಾಯಕತ್ವದೊಂದಿಗೆ ಸಾಗುತ್ತಿದ್ದಾರೆ. ಪವರ್ ಶೇರಿಂಗ್ ಕುರಿತು ಮಾತನಾಡುವಷ್ಟು ನಾನು ದೊಡ್ಡವನಲ್ಲ. ಈಗ ಸಿಎಂ ಕುರ್ಚಿ ಖಾಲಿ ಇಲ್ಲ, ನಿಮ್ಮ ನಿಮ್ಮ ಕೆಲಸ ಮಾಡಿ ಎಂದು ಡಿಕೆ ಶಿವಕುಮಾರ್ ಅವರೇ ಹೇಳಿದ್ದಾರೆ. ಹೀಗಿರುವಾಗ ಯಾವುದೇ ಶಾಸಕರು, ಪಕ್ಷದ ನಾಯಕರು ಹಾಗೂ ಹಿರಿಯರು ಈ ಬಗ್ಗೆ ಯಾವ ಹೇಳಿಕೆಗಳನ್ನೂ ನೀಡಬಾರದು ಎಂದು ರಂಗನಾಥ್ ಮನವಿ ಮಾಡಿದ್ದಾರೆ.
ಇನ್ನೂ ಡಿಕೆಶಿ ಬಣದಲ್ಲಿ ಆಪ್ತರಾಗಿರುವ ರಂಗನಾಥ್ ಅವರ ಈ ಹೇಳಿಕೆಯು ಅಡ್ಡಗೋಡೆಯ ಮೇಲೆ ದೀಪವಿಟ್ಟಂತಾಗಿದೆ. ಇತ್ತ ಕಡೆ ಸಿದ್ದರಾಮಯ್ಯ ನಾಯಕತ್ವ ಒಪ್ಪಿಕೊಂಡಂತೆ ಕಂಡರೆ, ಆಕಡೆ ಡಿಕೆ ಶಿವಕುಮಾರ್ ಬೆಂಬಲಕ್ಕೆ ನಿಂತಿದ್ದಾರೆ. ಇಬ್ಬರೂ ನಾಯಕರನ್ನು ಹಾಡಿ ಹೊಗಳಿರುವ ಈ ಶಾಸಕರ ನಡೆ ನಿಗೂಢವಾಗಿಯೇ ಉಳಿದಿದ್ದರೂ, ಡಿಕೆ ಶಿವಕುಮಾರ್ ಕುರಿತು ಹೆಚ್ಚಿನ ಒಲವು ತೋರಿಸಿದ್ದಾರೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.