ರಾಜ್ಯದ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವ ಭೂಮಿ ಲೂಟಿ ಹಗರಣ ಇದೀಗ ಬೆಳಕಿಗೆ ಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಂಗೇರಿ ಹೋಬಳಿಯ ದೊಡ್ಡಬೆಲೆ ಗ್ರಾಮದಲ್ಲಿ ಸುಮಾರು ₹360 ಕೋಟಿ ಮೌಲ್ಯದ ಸರ್ಕಾರಿ ಭೂಮಿಯನ್ನು ನಕಲಿ ದಾಖಲೆಗಳ ಆಧಾರದ ಮೇಲೆ ಖಾಸಗಿಯಾಗಿ ವಶಪಡಿಸಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಆರೋಪಗಳ ಪ್ರಕಾರ, ಮಾಜಿ ಸಚಿವ ಎಸ್.ಟಿ. ಸೋಮಶೇಖರ್ ಅವರ ಆಪ್ತರೆಂದು ಹೇಳಲಾಗುತ್ತಿರುವ ನಾರಾಯಣಪ್ಪ ಮತ್ತು ಲಕ್ಕಪ್ಪ ಎಂಬವರು, ನಕಲಿ ಹಕ್ಕುಪತ್ರಗಳು ಹಾಗೂ ಭೂಮಿಯ ಪ್ರಾಮಾಣಿಕ ದಾಖಲೆಗಳನ್ನು ತಿರುಚಿ, ಸ್ಥಳೀಯ ಭ್ರಷ್ಟ ಅಧಿಕಾರಿಗಳ ಸಹಕಾರದಿಂದ ಈ ಭೂ ಕಬಳಿಕೆ ಎಸಗಿದ್ದಾರೆ.
ದೊಡ್ಡಬೆಲೆ ಗ್ರಾಮದಲ್ಲಿರುವ 39 ಎಕರೆ ಸರ್ಕಾರಿ ಜಮೀನಿನಲ್ಲಿ ಸುಮಾರು 24 ಎಕರೆ ಭೂಮಿಯನ್ನು ಕಬಳಿಸಲಾಗಿದೆ. ಈ ಭೂಮಿಯ ಮೌಲ್ಯ ಪ್ರತಿ ಎಕರಿಗೆ ₹15 ರಿಂದ ₹20 ಕೋಟಿಯಷ್ಟಿದೆ. ಒಟ್ಟು ಮೌಲ್ಯ ₹360 ಕೋಟಿಗೂ ಅಧಿಕವಾಗಿದ್ದು, ಈ ಹಗರಣ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.
ಈ ಭೂ ಕಬಳಿಕೆಗೆ ವಿರೋಧವಾಗಿ ಹೋರಾಡಿದ ಹಲವರು ದುರ್ಭಾಗ್ಯಕರ ಅಂತ್ಯ ಕಂಡಿದ್ದಾರೆ. 2002ರಲ್ಲಿ ನಿವೃತ್ತ ಯೋಧ ಕೈಲಾಸ್ ಕೊಲೆಯಾಗಿದ್ದರು. 2003ರಲ್ಲಿ ಹೋರಾಟಗಾರ್ತಿ ಲಕ್ಷ್ಮಮ್ಮ ಹತ್ಯೆಗೀಡಾದರು. ಅದೇ ವರ್ಷ ಮತ್ತೊಬ್ಬ ಹೋರಾಟಗಾರ ವೆಂಕಟಪ್ಪ ಆತ್ಮಹತ್ಯೆ ಮಾಡಿಕೊಂಡರು. ಈ ಮೂರು ಘಟನೆಗಳ ಹಿಂದೆಯೂ ಭೂ ಲೂಟಿ ಮಾಡಲು ಯತ್ನಿಸಿದವರು ಭಾಗಿಯಾಗಿರಬಹುದೆಂಬ ಅನುಮಾನಗಳು ಇತ್ತೀಚೆಗೆ ಪುನಃ ಚರ್ಚೆಗೆ ಬಂದಿದೆ.
ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಜೂನ್ 2025ರಲ್ಲಿ ಮುಖ್ಯಮಂತ್ರಿ ಕಚೇರಿ ಹಾಗೂ ಕಂದಾಯ ಸಚಿವರಿಂದ ತಹಶೀಲ್ದಾರಿಗೆ 24 ಎಕರೆ ಭೂಮಿಯನ್ನು ಮರು ವಶಪಡಿಸಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಆದರೆ, ಈ ನಿರ್ದೇಶನಕ್ಕೆ 50 ದಿನಗಳಾದರೂ ಜಿಲ್ಲಾಡಳಿತದಿಂದ ಯಾವುದೇ ಕ್ರಿಯಾಶೀಲತೆ ಕಾಣಿಸಿಕೊಂಡಿಲ್ಲ. ಗ್ರಾಮಸ್ಥರ ಅಭಿಪ್ರಾಯದಲ್ಲಿ, ಈ ವಿಳಂಬದ ಹಿಂದೆ ರಾಜಕೀಯ ಪ್ರಭಾವಿ ವ್ಯಕ್ತಿಗಳ ರಕ್ಷಣೆ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ವರದಿ : ಲಾವಣ್ಯ ಅನಿಗೋಳ




