ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆಗೆ ಭೂಮಿ ಬಿಟ್ಟುಕೊಡುವ ಮಾಲೀಕರಿಗೆ ಹೊಸ ಕಾಯ್ದೆಯ ತತ್ವಗಳ ಆಧಾರದಲ್ಲಿ ಕೆಲವು ಗ್ರಾಮಗಳಲ್ಲಿ ಪ್ರತಿ ಎಕರೆಗೆ ₹15.60 ಕೋಟಿ ವರೆಗೆ ಸಂಧಾನಿತ ಪರಿಹಾರ ದರ ನಿಗದಿಪಡಿಸಲಾಗಿದೆ. ಈ ಪರಿಹಾರಕ್ಕೆ ಹಲವು ರೈತರು ಒಪ್ಪಿಗೆ ಸೂಚಿಸಿದ್ದು, ಈಗಾಗಲೇ 100 ಎಕರೆಗೂ ಅಧಿಕ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕ್ರಮ ಕೈಗೊಂಡಿದೆ.
ಬೆಂಗಳೂರು ಬ್ಯುಸಿನೆಸ್ ಕಾರಿಡಾರ್–BBC ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನಕ್ಕೆ ಐದು ವಿಧದ ಪರಿಹಾರ ಆಯ್ಕೆಗಳನ್ನು ಭೂಮಾಲೀಕರಿಗೆ ನೀಡಲಾಗಿದೆ. ಭೂಮಾಲೀಕರಿಂದ ಸಮ್ಮತಿ ಪತ್ರಗಳು ಸ್ವೀಕೃತವಾದ ತಕ್ಷಣ ಭೂಸ್ವಾಧೀನ ಪ್ರಕ್ರಿಯೆಯನ್ನು ಆರಂಭಿಸಲು ಬಿಡಿಎ ತೀರ್ಮಾನಿಸಿದ್ದು, ಈ ಉದ್ದೇಶಕ್ಕಾಗಿ ನಾಲ್ವರು ಜಿಲ್ಲಾಧಿಕಾರಿಗಳನ್ನು ನೇಮಿಸಲಾಗಿದೆ.
BBC ರಸ್ತೆ ಹಾದು ಹೋಗುವ ಗ್ರಾಮಗಳಲ್ಲಿ ಭೂಮಾಲೀಕರಿಗೆ ನಗದು ಪರಿಹಾರ, ವಸತಿ ನಿವೇಶನ, ವಾಣಿಜ್ಯ ನಿವೇಶನ, TDR ಹಾಗೂ FAR ಪರಿಹಾರದ ಆಯ್ಕೆಗಳನ್ನು ನೀಡಲಾಗಿದೆ. ಸಂಧಾನಿತ ಪರಿಹಾರ ಆಯ್ಕೆ ಮಾಡಿಕೊಂಡವರಿಗೆ ನೀಡಲಾಗುವ ಪ್ರತಿ ಎಕರೆ ಪರಿಹಾರ ಮೊತ್ತ, ಟಿಡಿಆರ್ ಮತ್ತು ಎಫ್‌ಎಆರ್ ವಿವರಗಳನ್ನು ಗ್ರಾಮವಾರುವಾಗಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಯಲಹಂಕ ತಾಲೂಕಿನ ವೆಂಕಟಾಲ ಗ್ರಾಮದಲ್ಲಿ ಪ್ರತಿ ಎಕರೆಗೆ ₹15.60 ಕೋಟಿ, ಕೆ.ಆರ್.ಪುರ ತಾಲೂಕಿನ ಕೊತ್ತನೂರಿನಲ್ಲಿ ₹14.64 ಕೋಟಿ ನಗದು ಪರಿಹಾರ ನಿಗದಿಪಡಿಸಲಾಗಿದೆ. ಇದು ಭೂಸ್ವಾಧೀನ ಕಾಯಿದೆ–1894ರನ್ವಯ ಲಭ್ಯವಾಗುವ ಸಾಮಾನ್ಯ ಐ–ತೀರ್ಪಿನ ಪರಿಹಾರಕ್ಕಿಂತ ಹಲವು ಪಟ್ಟು ಹೆಚ್ಚಾಗಿದೆ. ಭೂಮಾಲೀಕರಿಗೆ ಅಂತಿಮ ನೋಟಿಸ್‌ಗಳನ್ನು ನೀಡಿದ್ದು, 15 ದಿನಗಳೊಳಗೆ ಸಮ್ಮತಿ ಪತ್ರಗಳನ್ನು ಸಲ್ಲಿಸಲು ಸೂಚಿಸಲಾಗಿದೆ.
ಜ.1ರಿಂದ ಜಮೀನು ಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗುವುದು. ನೋಟಿಸ್ ಪಡೆದ ದಿನದಿಂದ 15 ದಿನಗಳೊಳಗೆ ಸಮ್ಮತಿ ಪತ್ರ ಸಲ್ಲಿಸದವರಿಗೆ ಭೂಸ್ವಾಧೀನ ಕಾಯಿದೆ 1894ರನ್ವಯ ಲಭ್ಯವಾಗುವ ಸಾಮಾನ್ಯ ಐ-ತೀರ್ಪಿನ ನಗದು ಪರಿಹಾರ ಮೊತ್ತ ಮತ್ತು ಶೇ. 9ರಷ್ಟು ಬಡ್ಡಿ ದರವನ್ನು ನ್ಯಾಯಾಲಯದಲ್ಲಿ ಠೇವಣಿ ಇರಿಸಿ, ಭೂಮಿಯನ್ನು ಸ್ವಾಧೀನಕ್ಕೆ ಪಡೆಯಲಾಗುವುದು. ಈ ಪರಿಹಾರವು ಹೊಸ ಕಾಯಿದೆಯ ತತ್ವಗಳ ಅನುಸಾರ ಗ್ರಾಮವಾರು ನಿಗದಿಪಡಿಸಿರುವ ಸಂಧಾನಿತ ಪರಿಹಾರ ಮೊತ್ತಕ್ಕಿಂತ ತುಂಬಾ ಕಡಿಮೆ ಇದೆ, ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ವರದಿ : ಲಾವಣ್ಯ ಅನಿಗೋಳ




