ಸ್ತ್ರೀಶಕ್ತಿಗೆ ಗೃಹಲಕ್ಷ್ಮಿ ಡಿಜಿಟಲ್ ಆ್ಯಪ್ ಬಿಡುಗಡೆ

ರಾಜ್ಯದ ಮೂಲೆಮೂಲೆಯಲ್ಲಿರುವ ಸ್ತ್ರೀಶಕ್ತಿ ಗುಂಪುಗಳು ಹಾಗೂ ಮಹಿಳೆಯರು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ರೂಪಿಸಲಾದ ‘ಗೃಹಲಕ್ಷ್ಮಿ ಡಿಜಿಟಲ್ ಮಾರ್ಕೆಟಿಂಗ್ ಆ್ಯಪ್’ ಅನ್ನು ಇಂದು ಅಧಿಕೃತವಾಗಿ ಲೋಕಾರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಗ್ರಾಮೀಣ ಮಹಿಳೆಯರು ತಯಾರಿಸುವ ವಸ್ತುಗಳು ಕೂಡ ಆನ್‌ಲೈನ್‌ ಮೂಲಕ ಗ್ರಾಹಕರಿಗೆ ಲಭ್ಯವಾಗಬೇಕೆಂಬ ಆಶಯದಿಂದ ಈ ಆ್ಯಪ್ ರೂಪಿಸಲಾಗಿದೆ ಎಂದು ತಿಳಿಸಿದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಪ್ರತಿಸಾರಿ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡುತ್ತಾ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಆ ಪರಂಪರೆ ಇಂದಿಗೂ ಮುಂದುವರಿದಿದೆ ಎಂದರು.

ದುರ್ಬಲ ವರ್ಗದ ಮಹಿಳೆಯರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ದಿಸೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮ ನಿರಂತರವಾಗಿ ಶ್ರಮಿಸುತ್ತಿದೆ. ಮಹಿಳೆಯರು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ವೇದಿಕೆ ಒದಗಿಸುವ ಕರ್ಮಣಿ ಉತ್ಸವಕ್ಕೆ 8 ವರ್ಷಗಳ ನಂತರ ಪುನಶ್ಚೇತನ ದೊರೆತಿದ್ದು, ಉತ್ಸವಕ್ಕೆ ಇಂದು ಚಾಲನೆ ನೀಡಲಾಗಿದೆ.

ಈ ಕುರಿತು ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪದ್ಮಾವತಿ, ಕರ್ಮಣಿ ಉತ್ಸವವು ಇನ್ನೂ ಮೂರು ದಿನಗಳ ಕಾಲ ನಡೆಯಲಿದ್ದು, ಮಹಿಳೆಯರ ಸ್ವಾವಲಂಬನೆಗೆ ಇದು ಮಹತ್ವದ ವೇದಿಕೆಯಾಗಲಿದೆ ಎಂದು ಹೇಳಿದರು.

ವರದಿ : ಲಾವಣ್ಯ ಅನಿಗೋಳ

About The Author