ಮೈಸೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ‘ಗೃಹ ಲಕ್ಷ್ಮಿ’ ಯೋಜನೆಗೆ ದಿನಗಣನೆ ಆರಂಭಗೊಂಡಿದ್ದು, ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಭರದದಿಂದ ಸಿದ್ದತಾ ಕಾರ್ಯಗಳು ಸಾಗಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ನಿಭಾಯಿಸುತ್ತಿದ್ದು, ಇಂದು ಕಾರ್ಯಕ್ರಮದ ಸಿದ್ಧತೆ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕಾರ್ಯಕ್ರಮದ ಪೂರ್ವ ಸಿದ್ಧತೆ ಕುರಿತಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಪಂ.ಸಿಇಒಗಳೊಂದಿಗೆ ವಿಡಿಯೋ ಸಂವಾದ ನಡೆಯಿತು. ಕಾರ್ಯಕ್ರಮದ ರೂಪುರೇಷೆ ಕುರಿತಂತೆ ಸಂಪೂರ್ಣ ಮಾಹಿತಿ ಸಂಗ್ರಹಿಸಿದ ಸಚಿವರು, ಕಾರ್ಯಕ್ರಮಕ್ಕೆ ಸುಮಾರು ಒಂದೂವರೆ ಲಕ್ಷ ಮಹಿಳೆಯರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳಬೇಕೆಂದು ಸೂಚಿಸಿದರು. ವಿಡಿಯೋ ಸಂವಾದದ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಎಚ್.ಸಿ.ಮಹದೇವಪ್ಪ, ಚಲುವರಾಯಸ್ವಾಮಿ ಹಾಗು ಶಾಸಕರೊಂದಿಗೆ ಮೈದಾನದಲ್ಲಿ ಕಾರ್ಯಕ್ರಮದ ಸಿದ್ಧತೆಗಳನ್ನು ವೀಕ್ಷಿಸಿದರು. ಶಾಸಕರಾದ ತನ್ವೀರ್ ಸೇಠ್, ನರೇಂದ್ರ ಸ್ವಾಮಿ,ಅನಿಲ್ ಚಿಕ್ಕ ಮಾದು, ಡಿ.ರವಿ ಶಂಕರ್, ಹರೀಶ್ ಗೌಡ, ದರ್ಶನ್ ಧ್ರುವ ನಾರಾಯಣ, ಮಹಿಳಾ ಕಾಂಗ್ರೆಸ್ನ ರಾಜ್ಯಾಧ್ಯಕ್ಷೆ ಪುಷ್ಪ ಅಮರ್ ನಾಥ್, ಹಿರಿಯ ಅಧಿಕಾರಿಗಳು ಹಾಜರಿದ್ದರು.
ಶನಿವಾರದಿಂದ ನಗರದಲ್ಲೆ ವ್ಯಾಸ್ತವ್ಯ : ಇನ್ನು ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿರುವ ಸಚಿವೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಶನಿವಾರದಿಂದ ಕಾರ್ಯಕ್ರಮ ಮುಗಿಯುವವರೆಗೂ (ಆಗಸ್ಟ್ 30) ಮೈಸೂರಿನಲ್ಲೆ ವಾಸ್ತವ್ಯ ಹೂಡಲಿದ್ದಾರೆ. ಈಗಾಗಲೇ 1.10 ಕೋಟಿ ಮಹಿಳೆಯರು ಗೃಹ ಲಕ್ಷ್ಮಿ ಯೋಜನೆಗೆ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದು, ಆಗಸ್ಟ್ ತಿಂಗಳಿಂದ ಎಲ್ಲರಿಗೂ 2000 ರೂಪಾಯಿ ಜಮಾ ಆಗಲಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.