ತುರುವೇಕೆರೆ ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯಲ್ಲಿ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಒಂದೇ ದಿನದೊಳಗೆ ನಾಲ್ಕು ಕಡೆಗಳಲ್ಲಿ ಚಿರತೆ ದಾಳಿ ನಡೆಸಿದ್ದು, ಹಲವರು ಗಾಯಗೊಂಡಿದ್ದಾರೆ. ತುರುವೇಕೆರೆ ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಗೋಣಿ ತುಮಕೂರು, ನಡುವನಹಳ್ಳಿ, ದೇವಿಹಳ್ಳಿ ಹಾಗೂ ಕೆಲ ಗ್ರಾಮಗಳ ತೋಟಗಳಲ್ಲಿ ದನ, ಕರ ಕುರಿಗಳನ್ನು ಮೇಯಿಸುತ್ತಿದ್ದವರ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ
ನಡುವನಹಳ್ಳಿ ಗ್ರಾಮದ ಶಿವಣ್ಣ ಎಂಬುವವರಿಗೆ ಸೇರಿದ ತೋಟದಲ್ಲಿ ಎಂದಿನಂತೆ ಅವರ ಹೆಂಡತಿ ವನಜಾಕ್ಷಿ ದನಗಳನ್ನು ಮೇಯಿಸುತ್ತಿದ್ದರು. ಮಧ್ಯಾನದ 3:00 ಘಂಟೆ ಸಮಯದಲ್ಲಿ ಏಕಾಏಕಿ ಚಿರತೆ ದಾಳಿ ನಡೆಸಿದೆ. ಗಾಬರಿಯಿಂದ ಅಲ್ಲಿಂದ ಕಾಲ್ ಕಿತ್ತ ಚಿರತೆ ಗೋಣಿ ತುಮಕೂರು ತೋಟದಲ್ಲಿದ್ದ ಹುಚ್ಚಮ್ಮನ ಮೇಲೆ ದಾಳಿ ಮಾಡಿದೆ.
ಮತ್ತೆ ಅಲ್ಲಿಂದ ಹೊರಟ ಚಿರತೆ ಕಿರುಬನಕಲ್ಲು ಬಳಿ ಎಮ್ಮೆ ಮೇಯಿಸುತ್ತಿದ್ದ ಬೋರೇಗೌಡರ ಮೇಲೆ ದಾಳಿ ನಡೆಸಿದೆ. ಮತ್ತೆ ಅಲ್ಲಿಂದ ಹೊರಟ ಚಿರತೆ ನೀರಗಂಟಿ ಸಣ್ಣ ಲಿಂಗಯ್ಯ ಮೇಲೆ ದಾಳಿ ಮಾಡಿ ದೇವಿಹಳ್ಳಿ ಶೇಖರ್ ಎಂಬುವರ ಮೇಲೆ ಮತ್ತೆ ದಾಳಿ ಮಾಡಲು ಹೋಗಿ ಅವರ ಮನೆಯಲ್ಲಿ ಬಂಧಿಯಾಗಿದೆ ಎಂದು ತಿಳಿದುಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ತುರುವೇಕೆರೆ ತಾಸಿಲ್ದಾರ್ ಎನ್ ಎ ಅಹಮ್ಮದ್, ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ವರ್ಗ ಸ್ಥಳಕ್ಕೆ ಆಗಮಿಸಿದ್ದಾರೆ. ಇನ್ನೂ ಚಿರತೆ ಸೆರೆ ಹಿಡಿಯುವುದನ್ನು ನೋಡಲು ಜನಸಾಗರ ಹರಿದು ಬಂದಿತ್ತು. ಚಿರತೆ ದಾಳಿಗೆ ಒಳಗಾದವರರು ಪ್ರಾಣಾಪಯದಿಂದ ಪಾರಾಗಿದ್ದು, ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

