Monday, October 20, 2025

Latest Posts

ಖರ್ಗೆ ಮೊದಲು ಸರಿಯಾಗಿ ಪತ್ರ ಓದಲಿ : RSS ವಿರುದ್ಧ ಹೋದರೆ ಭಸ್ಮ

- Advertisement -

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 2013ರಲ್ಲಿ ತಮ್ಮ ಮುಖ್ಯಮಂತ್ರಿ ಅವಧಿಯಲ್ಲಿ ಒಂದು ಖಾಸಗಿ ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಖೆಯ ಜಾಗ ಕೇಳಿದಾಗ, ಸರ್ಕಾರಿ ಜಾಗದಲ್ಲಿ ಖಾಸಗಿ ಕಾರ್ಯಕ್ರಮ ನಡೆಸಲು ಅನುಮತಿ ಪಡೆಯಬೇಕೆಂದು ಆ ಸಮಯದ ಬಿಜೆಪಿ ಸರ್ಕಾರವೇ ಆದೇಶಿಸಿತ್ತು ಎಂದು ಈಗ ಕಾಂಗ್ರೆಸ್‌ ಸರ್ಕಾರ ಹೇಳುವುದು ಸುಳ್ಳು ಎಂದು ಅವರು ಸ್ಪಷ್ಟಪಡಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶೆಟ್ಟರ್‌, ಆ ಪತ್ರದಲ್ಲೇನಿದೆ ಎನ್ನುವುದನ್ನು ಪ್ರಿಯಾಂಕ ಖರ್ಗೆ ಮೊದಲು ಓದಲಿ. ಅವರಿಗೆ ಧೈರ್ಯವಿದ್ದರೆ ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳನ್ನು ನಿಷೇಧಿಸಲಿ, ಆಗ ಅವರ ನಿಜವಾದ ಮುಖ ಬಹಿರಂಗವಾಗುತ್ತದೆ ಎಂದು ಸವಾಲು ಹಾಕಿದರು.

ಚಿತ್ತಾಪುರ ಪಥಸಂಚಲನ ಕುರಿತು ಮಾತನಾಡಿದ ಅವರು, ಸಾವಿರಾರು ಯುವಕರು ಆ ಪಥಸಂಚಲನದಲ್ಲಿ ಭಾಗವಹಿಸುತ್ತಿದ್ದಾರೆ. ಈ ಜನಪ್ರಿಯತೆ ಸಹಿಸಲು ಅವರಿಗೆ ಆಗುತ್ತಿಲ್ಲ, ಆದ್ದರಿಂದ ಅದನ್ನು ತಡೆಯಲು ಪ್ರಯತ್ನ ಮಾಡಿದರು. ಧ್ವಜಗಳನ್ನು ಕಿತ್ತುಹಾಕಿದರು. ಆದರೆ ಹೈಕೋರ್ಟ್‌ ಪಥಸಂಚಲನಕ್ಕೆ ಅನುಮತಿ ನೀಡಿದೆ. ಅದು ಕಾನೂನುಬಾಹಿರವಾಗಿದ್ದರೆ ಅನುಮತಿ ಸಿಗುತ್ತಿರಲಿಲ್ಲ ಎಂದು ಹೇಳಿದರು.

ಪ್ರಿಯಾಂಕ ಖರ್ಗೆಯವರ ಅಹಂಕಾರವೇ ಅಶಾಂತಿಯ ಮೂಲ. ಸಿದ್ದರಾಮಯ್ಯ ಸರ್ಕಾರದ ಉದ್ದೇಶ ಹಿಂದೂ ಮತ್ತು ಲಿಂಗಾಯತ ಸಮಾಜವನ್ನು ವಿಭಜಿಸುವುದು. ಅಲ್ಪಸಂಖ್ಯಾತರ ತುಷ್ಟೀಕರಣವೇ ಅವರ ರಾಜಕೀಯ ಧೋರಣೆ. ಇಂಥ ನೀತಿಗಳು ರಾಜ್ಯವನ್ನು ಹಾಳು ಮಾಡುತ್ತಿವೆ ಎಂದು ಶೆಟ್ಟರ್‌ ಆರೋಪಿಸಿದರು.

ಆರ್‌ಎಸ್‌ಎಸ್‌ ನಂತಹ ಸಂಘಟನೆಗಳ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸುವುದಕ್ಕೆ ತೊಂದರೆಯಿಲ್ಲ ಎಂಬುದಾಗಿ ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಹೀಗಿರುವಾಗ ರಾಜ್ಯ ಸರ್ಕಾರ ವ್ಯತಿರಿಕ್ತವಾಗಿ ಆದೇಶಿಸಲು ಅಧಿಕಾರವಿಲ್ಲ. ಆದ್ದರಿಂದ ಲಿಂಗಸೂರಿನಲ್ಲಿ ಪಿಡಿಒ ಅಮಾನತೂ ಕಾನೂನುಬಾಹಿರ ಎಂದು ಶೆಟ್ಟರ್‌ ಹೇಳಿದರು. ಆರ್‌ಎಸ್‌ಎಸ್‌ ವಿರುದ್ಧ ಹೋದವರು ಯಾವಾಗಲೂ ಭಸ್ಮರಾಗಿದ್ದಾರೆ. ದೀಪ ಆರುವ ಮುನ್ನ ಹೆಚ್ಚು ಜೋರಾಗಿ ಉರಿಯುತ್ತದೆ ಎಂಬಂತೆ  ಸಿದ್ದರಾಮಯ್ಯ ಸರ್ಕಾರದ ಅಂತ್ಯ ಸಮೀಪಿಸಿದೆ ಎಂದು ಶೆಟ್ಟರ್‌ ಎಚ್ಚರಿಕೆ ನೀಡಿದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss