ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಅತಿಹೆಚ್ಚು ಮೊತ್ತದ ಹೂಡಿಕೆ ಮಾಡಿರುವುದು ಟಾಟಾ ಸಮೂಹದ ಕಂಪನಿಗಳಲ್ಲಿ ಎಂಬ ಮಾಹಿತಿ ಬಹಿರಂಗವಾಗಿದೆ. LIC ಯಿಂದ ಹೂಡಿಕೆ ಆಕರ್ಷಿಸಿರುವ ಕಂಪನಿಗಳ ಪಟ್ಟಿಯಲ್ಲಿ HDFC ಬ್ಯಾಂಕ್ ಎರಡನೇ ಸ್ಥಾನದಲ್ಲಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮೂರನೇ ಸ್ಥಾನದಲ್ಲಿದೆ.
ಈ ಕುರಿತು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಮಂಗಳವಾರ ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ವಿವರ ನೀಡಿದ್ದಾರೆ. ಅದಾನಿ ಸಮೂಹದ ಕಂಪನಿಗಳಲ್ಲಿ LIC ಒಟ್ಟು ₹47,633 ಕೋಟಿ ಹೂಡಿಕೆ ಮಾಡಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಸದ್ಯ LIC ಯು 35 ಕಂಪನಿಗಳಲ್ಲಿ ತಲಾ ₹5,000 ಕೋಟಿಗಿಂತ ಹೆಚ್ಚು ಹೂಡಿಕೆ ಮಾಡಿದೆ. ಈ 35 ಕಂಪನಿಗಳಲ್ಲಿನ ಒಟ್ಟು ಹೂಡಿಕೆ ಮೌಲ್ಯ ₹7.87 ಲಕ್ಷ ಕೋಟಿ ಆಗಿದ್ದು, ಇದರ ಪೈಕಿ ಮೊದಲ ಐದು ಕಂಪನಿಗಳಲ್ಲಿನ ಹೂಡಿಕೆಯ ಮೌಲ್ಯವೇ ₹3.23 ಲಕ್ಷ ಕೋಟಿ ಆಗಿದೆ.
LIC ಯ ಹೂಡಿಕೆಗಳು ಆಡಳಿತ ಮಂಡಳಿಯಿಂದ ಅನುಮೋದಿತವಾದ ಹೂಡಿಕೆ ನೀತಿಯ ಅನ್ವಯ ನಡೆಯುತ್ತಿವೆ ಎಂದು ಸಚಿವರು ತಿಳಿಸಿದ್ದಾರೆ. ಕಂಪನಿಗಳ ಷೇರುಗಳು ಮತ್ತು ಸಾಲಪತ್ರಗಳಲ್ಲಿ ಹೂಡಿಕೆ ಮಾಡುವ ಕುರಿತು ನಿರ್ಧಾರಗಳನ್ನು CEO ಹಾಗೂ MD., ವಿವಿಧ MD ಗಳು ಮತ್ತು ಸ್ವತಂತ್ರ ನಿರ್ದೇಶಕರು ಒಳಗೊಂಡ ಉಪ ಸಮಿತಿ ತೆಗೆದುಕೊಳ್ಳುತ್ತದೆ ಎಂದು ಅವರು ವಿವರಿಸಿದ್ದಾರೆ.
ಇನ್ನು, ಪ್ರಮಾಣಿತ ಕಾರ್ಯ ವಿಧಾನ ಅನುಸರಿಸಿ ಎಲ್ಲ ಹೂಡಿಕೆ ಪ್ರಕ್ರಿಯೆಗಳು ನಡೆಯುತ್ತಿದ್ದು, ಈ SOP ಯನ್ನು ಪ್ರತಿವರ್ಷ ಪರಿಶೀಲಿಸಿ ಅಗತ್ಯವಿದ್ದಲ್ಲಿ ಪರಿಷ್ಕರಿಸಲಾಗುತ್ತದೆ ಎಂದು ಸಚಿವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ



