ದಕ್ಷಿಣ ಆಸ್ಟ್ರೇಲಿಯಾದ 25 ವರ್ಷದ ಅನ್ನಾಲೀಸ್ ಹಾಲೆಂಡ್ ಅಪರೂಪದ ಆಟೋಇಮ್ಯೂನ್ ಆಟೋನೊಮಿಕ್ ಗ್ಯಾಂಗ್ಲಿಯೊಪತಿ (AAG) ರೋಗದಿಂದ ಹಲವು ವರ್ಷಗಳಿಂದ ನರಳುತ್ತಿದ್ದು, ಈಗ ಸ್ವಯಂಪ್ರೇರಿತ ದಯಾಮರಣಕ್ಕೆ ಮುಂದಾಗಿದ್ದಾರೆ. 18ನೇ ವಯಸ್ಸಿನಲ್ಲಿ ಪತ್ತೆಯಾದ ಈ ಕಾಯಿಲೆಯಲ್ಲಿ ರೋಗನಿರೋಧಕ ವ್ಯವಸ್ಥೆಯೇ ನರಕೋಶಗಳ ಮೇಲೆ ದಾಳಿ ನಡೆಸಿ, ಹೃದಯ ಬಡಿತ, ರಕ್ತದೊತ್ತಡ, ಜೀರ್ಣಕ್ರಿಯೆ ಸೇರಿದಂತೆ ದೇಹದ ಸ್ವಯಂಚಾಲಿತ ಕಾರ್ಯಗಳನ್ನು ಗಂಭೀರವಾಗಿ ಹಾನಿಗೊಳಿಸುತ್ತದೆ.
ಕಳೆದ ಒಂದು ದಶಕದಿಂದ ಅನ್ನಾಲೀಸ್ ಟೋಟಲ್ ಪ್ಯಾರೆನ್ಟೆರಲ್ ನ್ಯುಟ್ರಿಷನ್ (TPN) ಮೇಲೆ ಸಂಪೂರ್ಣ ಅವಲಂಬಿತರಾಗಿದ್ದು, ಸಾಮಾನ್ಯ ಆಹಾರ ತೆಗೆದುಕೊಳ್ಳುವ ಸಾಧ್ಯತೆ ಇಲ್ಲ. IV ಪೌಷ್ಠಿಕಾಂಶದ ಅವಲಂಬನೆಯಿಂದ ಬಹು ಅಂಗಾಂಗ ವೈಫಲ್ಯ, ಬೆನ್ನಿನ ಮೂಳೆ ಮುರಿತ, ಎದೆಮೂಳೆ ಸೀಳು, ನಿರಂತರ ನೋವು, ವಾಕರಿಕೆ ಮತ್ತು ದಿನನಿತ್ಯ ವಾಂತಿ ಸೇರಿದಂತೆ ಅನೇಕ ತೀವ್ರ ಸಮಸ್ಯೆಗಳು ಎದುರಾಗಿದೆ.
ತಮ್ಮ ಜೀವನದ ತೊಂದರೆಗಳನ್ನು ವಿವರಿಸುವಾಗ, ಅನ್ನಾಲೀಸ್ ಇನ್‌ಸ್ಟಾಗ್ರಾಮ್‌ನಲ್ಲಿ ನನ್ನ ವಯಸ್ಸಿನ ಜನರು ಜೀವನ ಕಟ್ಟಿಕೊಳ್ಳುತ್ತಿದ್ದರೆ, ನಾನು ಪ್ರತಿದಿನ ಬದುಕುಳಿಯಲು ಹೋರಾಡುತ್ತಿದ್ದೇನೆ. ನನ್ನ ದೇಹ ಕಾರ್ಯನಿರ್ವಹಿಸುವುದೇ ನಿಂತಿದೆ. ನೋವು ಮತ್ತು ಆಸ್ಪತ್ರೆಗಳ ನಡುವೆ ನನ್ನ ಬಾಲ್ಯವೇ ಕಳೆದುಹೋಯಿತು ಎಂದು ಭಾವನಾತ್ಮಕವಾಗಿ ತಿಳಿಸಿದ್ದಾರೆ.
ಮನಶ್ಶಾಸ್ತ್ರಜ್ಞರೊಂದಿಗೆ ಸಮಾಲೋಚನೆ ಮತ್ತು ಅಗತ್ಯ ವೈದ್ಯಕೀಯ ಮೌಲ್ಯಮಾಪನಗಳ ನಂತರ, ಅವರಿಗೆ ಸ್ವಯಂಪ್ರೇರಿತ ದಯಾಮರಣಕ್ಕೆ ಅನುಮೋದನೆ ದೊರಕಿದೆ. ಆಸ್ಟ್ರೇಲಿಯಾದಲ್ಲಿ ಮೆಡಿಕಲ್ ಏಡ್ ಇನ್ ಡೈಯಿಂಗ್ (MAID) ಕಾನೂನುಬದ್ಧವಾಗಿದ್ದು, ಜೀವಾಪಾಯಕರ ಮತ್ತು ಗುಣಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿರುವ ವಯಸ್ಕರು, ಗಂಭೀರ ಪರಿಶೀಲನೆಯ ನಂತರ ಮಾತ್ರ ಈ ಆಯ್ಕೆ ಮಾಡಲು ಅರ್ಹರಾಗುತ್ತಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

