ನಾಯಿಗಳಿಗೂ ಜೀವಾವಧಿ ಶಿಕ್ಷೆ ವಿಧಿಸಲಾಗತ್ತಂತೆ. ಹೀಗಂತ ಉತ್ತರ ಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ. ಯಾವುದೇ ಪ್ರಚೋದನೆಯಿಲ್ಲದೆ ಮನುಷ್ಯರನ್ನು ಒಂದಕ್ಕಿಂತ ಹೆಚ್ಚು ಬಾರಿ ಕಚ್ಚುವ ನಾಯಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸುವಂತೆ ಸೂಚನೆ ನೀಡಲಾಗಿದೆ. ಈ ಕ್ರಮವು ಬೀದಿ ನಾಯಿಗಳ ಹೆಚ್ಚುತ್ತಿರುವ ಹಾವಳಿ ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಕಾಪಾಡುವ ಉದ್ದೇಶದಿಂದ ಕೈಗೊಳ್ಳಲಾಗಿದೆ.
ನಾಯಿಗಳು ಮೊದಲ ಬಾರಿಗೆ ಪ್ರಚೋದನೆಯಿಲ್ಲದೆ ಯಾರನ್ನಾದರೂ ಕಚ್ಚಿದರೆ ಅವುಗಳನ್ನು 10 ದಿನಗಳ ಕಾಲ ಪ್ರಾಣಿ ಆಶ್ರಯ ಕೇಂದ್ರದಲ್ಲಿ ವೀಕ್ಷಣೆಗೆ ಒಳಪಡಿಸಲಾಗುತ್ತದೆ. ಆದರೆ ಇದೇ ಕೃತ್ಯವನ್ನು ಮತ್ತೆ ಪುನರಾವರ್ತಿಸಿದರೆ ಅಂಥ ನಾಯಿಗಳನ್ನು ಜೀವಮಾನಪೂರ್ತಿ ಕೇಂದ್ರದಲ್ಲೇ ಇರಿಸಲಾಗುವುದು. ಇದನ್ನೇ ‘ಜೀವಾವಧಿ ಶಿಕ್ಷೆ’ ಎಂದು ಸರ್ಕಾರ ವಿವರಣೆ ನೀಡಿದೆ.
ನಾಯಿಯನ್ನು ಕೇಂದ್ರಕ್ಕೆ ಸೇರಿಸಿದ ನಂತರ, ಅದು ರೇಬೀಸ್ ರಹಿತವಾಗಿದೆಯೆಂದು ಖಚಿತಪಡಿಸಿಕೊಳ್ಳಲು ಲಸಿಕೆ ನೀಡಲಾಗುವುದು. ಸಂತಾನಹರಣ ಚಿಕಿತ್ಸೆಯೂ ಕೂಡ ಕಡ್ಡಾಯವಾಗಿದೆ. ಮೇಲ್ದರ್ಜೆಯ ಮಾಲೀಕತ್ವ ಖಚಿತಪಡಿಸಲು, ನಾಯಿಗೆ ಮೈಕ್ರೋಚಿಪ್ ಅಳವಡಿಸಲಾಗುತ್ತದೆ.
ನಾಯಿ ಯಾವುದೇ ಪ್ರಚೋದನೆಯಿಲ್ಲದೆ ಕಚ್ಚಿತ್ತಾ ಅನ್ನೋದನ್ನ ನಿರ್ಧರಿಸೋಕೆ ತಜ್ಞರ ಸಮಿತಿ ರಚಿಸಲಾಗುವುದು. ಈ ಸಮಿತಿಯಲ್ಲಿ ಸ್ಥಳೀಯ ಪಶುವೈದ್ಯ, ಪ್ರಾಣಿಗಳ ನಡವಳಿಕೆಯನ್ನು ತಿಳಿದಿರುವ ಅನುಭವಿ ವ್ಯಕ್ತಿಗಳು ಇರುತ್ತಾರೆ. ಉದಾಹರಣೆಗೆ, ಯಾರಾದರೂ ಕಲ್ಲು ಎಸೆದ ಬಳಿಕ ನಾಯಿ ಕಚ್ಚಿದರೆ, ಅದನ್ನು ಪ್ರಚೋದಿತ ದಾಳಿ ಎಂದು ಪರಿಗಣಿಸಲಾಗುತ್ತದೆ.
ಅಂತಹ ನಾಯಿಗಳನ್ನು ದತ್ತು ಪಡೆಯಬಹುದು ಎಂದು ಆದೇಶದಲ್ಲಿ ಹೇಳಲಾಗಿದೆ. ಆದರೆ, ನಾಯಿಯನ್ನು ಮತ್ತೆ ಬೀದಿಗೆ ಬಿಡದೆ ಪ್ರತ್ಯೇಕ ಸ್ಥಳದಲ್ಲಿ ಇರಿಸುವುದಾಗಿ ಅಫಿಡವಿಟ್ ಸಲ್ಲಿಸಬೇಕು. ದತ್ತು ಪಡೆಯುವ ವ್ಯಕ್ತಿಯ ಹೆಸರು, ವಿಳಾಸ, ಹಾಗೂ ಸಂಪರ್ಕ ವಿವರಗಳನ್ನು ಸರ್ಕಾರಕ್ಕೆ ಒದಗಿಸಬೇಕಾಗುತ್ತದೆ.
ವರದಿ : ಲಾವಣ್ಯ ಅನಿಗೋಳ

