ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿರುವ ಲಿಂಗಾಯತ ಪಂಚಮಸಾಲಿ ಪೀಠ ಇದೀಗ ಮತ್ತೆ ವಿವಾದದ ಕೇಂದ್ರಬಿಂದುವಾಗಿದೆ. ಪಂಚಮಸಾಲಿ ಪೀಠಕ್ಕೆ ಬೀಗ ಜಡಿಯಲಾಗಿದೆ. ಈ ಮೂಲಕ ಹಳೆಯದಾಗುತ್ತಿರುವ ಪೀಠಾಧಿಪತಿ ವಿವಾದ ಮತ್ತೊಮ್ಮೆ ಭುಗಿಲೆದ್ದಿದೆ.
ಕೂಡಲಸಂಗಮದಲ್ಲಿ ಇರುವ ಲಿಂಗಾಯತ ಪಂಚಮಸಾಲಿ ಪೀಠಕ್ಕೆ ಬೀಗ ಜಡಿಯಲಾಗಿದ್ದು, ಪೀಠದ ಒಳಾಂಗಣಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಈ ಬಗ್ಗೆ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ ಮತ್ತು ಶಾಸಕ ವಿಜಯಾನಂದ ಕಾಶಪ್ಪನವರ ಸ್ಪಷ್ಟಪಡಿಸಿದ್ದು, ಪೀಠದ ಭದ್ರತೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಆದರೆ ಈ ಕ್ರಮದ ಹಿಂದೆ ಮತ್ತೊಂದು ಅಂತರ್ಹಿತ ರಾಜಕೀಯ ಸಂಕೇತವಿದೆ ಎಂಬ ಮಾತುಗಳು ಹರಿದಾಡುತ್ತಿವೆ. ಸದ್ಯಕ್ಕೆ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಪ್ರವಾಸದಲ್ಲಿದ್ದಾರೆ. ಅವರು ವಾಪಸ್ಸಾದ ಮೇಲೆ ಈ ಬೀಗದ ಹಿಂದೆ ಯಾರು? ಯಾಕೆ? ಎಂಬುದರ ಬಗ್ಗೆ ಸ್ಪಷ್ಟತೆ ಬರುವ ನಿರೀಕ್ಷೆಯಿದೆ.
ಸ್ಥಳದಲ್ಲಿ ಈಗ ಪೊಲೀಸರ ಭದ್ರತೆ ಒದಗಿಸಲಾಗಿದೆ. ಡಿಆರ್ ವ್ಯಾನ್, ಎಎಸ್‌ಐ ನೇತೃತ್ವದ ಪೊಲೀಸರು ಈಗ ಪೀಠದ ಗೇಟ್ ಬಳಿ ನೆರೆದಿದ್ದಾರೆ. ಈ ಬೀಗ ಜಡಿಯುವ ವಿಚಾರಕ್ಕೆ ಸಂಬಂಧಿಸಿ ಈಗಾಗಲೇ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬೀಗವನ್ನು ಮುರಿದವರ ವಿರುದ್ಧ ಕಾನೂನು ಕ್ರಮ ಆರಂಭಿಸಲಾಗಿದೆ.
ಇತ್ತ ಮಾಜಿ ಸಚಿವ ಸಿ.ಸಿ. ಪಾಟೀಲ, ಇತ್ತೀಚೆಗೆ ಗದಗದಲ್ಲಿ ಹೊಸ ಪಂಚಮಸಾಲಿ ಪೀಠ ಸ್ಥಾಪನೆ ಬಗ್ಗೆ ಘೋಷಣೆ ನೀಡಿದ್ದರು. ಅವರು ಹೇಳಿದ್ದು ಏನಂದರೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೊಸ ಪೀಠಾಧಿಪತಿ ಆಗಲಿದ್ದಾರೆ ಅನ್ನೋದು. ಇದು ಈಗಿರುವ ಪೀಠ ಹಾಗೂ ಟ್ರಸ್ಟ್ ನಡುವೆ ಭಿನ್ನಾಭಿಪ್ರಾಯದಿಂದ ಹೊಸ ವಿವಾದ ಸೃಷ್ಟಿಯಾಗುವ ಸಾಧ್ಯತೆಯಿದೆ.
ಈ ಪೀಠದಲ್ಲಿ ಯಾರಿಗೆ ಏನು ಅಧಿಕಾರ? ಯಾವ ಹುದ್ದೆ ಅಧಿಕೃತ? ಎಂಬ ಪ್ರಶ್ನೆಗಳು ಈಗ ಸಮಾಜದ ಒಳಗೂ ಚರ್ಚೆಯಾಗುತ್ತಿವೆ. ಟ್ರಸ್ಟ್, ಸ್ವಾಮೀಜಿ, ಮತ್ತು ಅಖಿಲ ಭಾರತ ಪಂಚಮಸಾಲಿ ಮಹಾಸಭೆ ನಡುವೆ ಅಧಿಕಾರದ ಸ್ಪರ್ಧೆ ಮುಂದುವರೆದಿದೆ.

