ಶೃಂಗೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ ಅವರ ಮೇಲೆ ಅಕ್ರಮ ಆಸ್ತಿ ಪ್ರಕರಣದ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಾಸನ ಲೋಕಾಯುಕ್ತ ಎಸ್‌ಪಿ ಸ್ನೇಹಾ ಅವರ ನೇತೃತ್ವದಲ್ಲಿ ಮಂಗಳವಾರ ಬೆಳಿಗ್ಗೆ ನಾಲ್ಕು ವಾಹನಗಳಲ್ಲಿ ಬಂದ ತಂಡವು ಬೆಂಗಳೂರಿನ ಹೊಸಮನೆ, ಚಿಕ್ಕಮಗಳೂರಿನ ಬಸಾಪುರ ಮತ್ತು ಹಲಸೂರ ತೋಟದ ನಿವಾಸ ಸೇರಿದಂತೆ ಹಲವು ಕಡೆಗಳಲ್ಲಿ ಏಕಕಾಲದಲ್ಲಿ ಶೋಧ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಾಸಕ ರಾಜೇಗೌಡ, ಪತ್ನಿ ಪುಷ್ಪಾ ಮತ್ತು ವಿದೇಶದಲ್ಲಿರುವ ಪುತ್ರನ ವಿರುದ್ಧ ಪ್ರಕರಣ ದಾಖಲಾಗಿದ್ದು, ಮೂವರ ಮೇಲೂ ತನಿಖೆ ನಡೆಯುತ್ತಿದೆ. ರಾಜೇಗೌಡ ಅವರು ಬಾಳೆಹೊನ್ನೂರು ಸಮೀಪ 266 ಎಕರೆ ಹಲಸೂರು ತೋಟವನ್ನು ಖರೀದಿಸಿದ್ದ ವಿಚಾರ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ತೋಟ ಮೊದಲು ಉದ್ಯಮಿ, ದಿವಂಗತ ಸಿದ್ಧಾರ್ಥ ಅವರಿಗೆ ಸೇರಿದ್ದು, ಅದನ್ನು ಅಕ್ರಮವಾಗಿ ಹಾಗೂ ಕಡಿಮೆ ಬೆಲೆಗೆ ಖರೀದಿಸಲಾಗಿದೆ ಎಂಬ ದೂರು ದಾಖಲಾಗಿದೆ.
ಸ್ಥಳೀಯ ಬಿಜೆಪಿ ಮುಖಂಡ ದಿನೇಶ್ ನೀಡಿದ ದೂರು ಆಧಾರವಾಗಿ ತನಿಖೆ ಆರಂಭವಾಗಿದ್ದು, ರಾಜೇಗೌಡ ಸಲ್ಲಿಸಿದ ಚುನಾವಣೆ ಅಫಿಡವಿಟ್ ಹಾಗೂ ಭೂಮಿ ಖರೀದಿ ವಹಿವಾಟುಗಳಲ್ಲಿ ತಾಳೇ ಇರುವುದಿಲ್ಲವೆಂಬ ಅನುಮಾನ ವ್ಯಕ್ತವಾಗಿದೆ. ಶಾಸಕರ ವಾರ್ಷಿಕ ಆದಾಯ ಕೇವಲ 38 ಲಕ್ಷ ರೂ. ಎಂದು ದಾಖಲೆಗಳಲ್ಲಿ ಉಲ್ಲೇಖವಾಗಿದ್ದರೂ, ನೂರಾರು ಕೋಟಿ ರೂ. ಮೌಲ್ಯದ ಆಸ್ತಿ ಹೇಗೆ ಖರೀದಿ ಸಾಧ್ಯವಾಯಿತು ಎಂಬ ಪ್ರಶ್ನೆ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ, ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶದಂತೆ ಎಫ್‌ಐಆರ್ ದಾಖಲಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ವಿವರಗಳು ಶೀಘ್ರದಲ್ಲೇ ಬಹಿರಂಗವಾಗುವ ಸಾಧ್ಯತೆ ಇದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

