Friday, November 28, 2025

Latest Posts

ಭ್ರಷ್ಟರ ಬೆವರಿಳಿಸಿದ ಲೋಕಾಯುಕ್ತ ಕೋಟಿ ಕೋಟಿ ಆಸ್ತಿ, ಚಿನ್ನ ಪತ್ತೆ!

- Advertisement -

ರಾಜ್ಯದ ವ್ಯಾಪ್ತಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಪೊಲೀಸರು ದೊಡ್ಡ ಮಟ್ಟದ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಮೈಸೂರು, ಬೆಂಗಳೂರು ಸೇರಿದಂತೆ ಒಟ್ಟು ಹತ್ತು ಜಿಲ್ಲೆಗಳಲ್ಲಿ ಇಂದು ಬೆಳಿಗ್ಗೆಯಿಂದಲೇ ಅಧಿಕಾರಿಗಳ ಮನೆ–ಕಚೇರಿಗಳ ಮೇಲೆ ದಾಳಿ ನಡೆದಿದೆ. ಹಲವು ಅಧಿಕಾರಿಗಳ ವಸತಿ ಮತ್ತು ಕಚೇರಿಗಳಲ್ಲಿ ಬೃಹತ್ ಪ್ರಮಾಣದ ನಗದು, ಚಿನ್ನ–ಬೆಳ್ಳಿ ಹಾಗೂ ಆಸ್ತಿ ದಾಖಲೆಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

ಲೋಕಾಯುಕ್ತ ದಾಳಿಯ ರೇಡಾರ್‌ನಲ್ಲಿ ವಿವಿಧ ಇಲಾಖೆ ಅಧಿಕಾರಿಗಳಿದ್ದಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ RTO ಸೂಪರಿಂಟೆಂಡೆಂಟ್ ಕುಮಾರಸ್ವಾಮಿ, ಮಂಡ್ಯ ನಗರಪಾಲಿಕೆ CAO ಪುಟ್ಟಸ್ವಾಮಿ, ಬೀದರ್ ಕೃಷ್ಣಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ಪ್ರೇಮ್ ಸಿಂಗ್, ಮೈಸೂರಿನ ಹೂಟಗಳ್ಳಿ ಪಾಲಿಕೆಯ ರೆವಿನ್ಯೂ ಇನ್ಸ್‌ಪೆಕ್ಟರ್ ರಾಮಸ್ವಾಮಿ, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಸುಭಾಶ್ ಚಂದ್ರ, ಪಶು ಕ್ಲಿನಿಕ್ ಹುಲಿಗೋಲ್ ಹಿರಿಯ ಪರೀಕ್ಷಕ ಸತೀಶ್, ಶಿವಮೊಗ್ಗ SIMS ಮೆಡಿಕಲ್ ಕಾಲೇಜಿನ FDA ಲಕ್ಷ್ಮೀಪತಿ, ದಾವಣಗೆರೆ APMC ಸಹ ನಿರ್ದೇಶಕ ಪ್ರಭು ಜೆ. ಮತ್ತು ಮಡಿಕೇರಿ PWD ಸಹಾಯಕ ಇಂಜಿನಿಯರ್ ಗಿರೀಶ್ ಡಿ.ಎಂ. ಅವರ ಮನೆ–ಕಚೇರಿಗಳಲ್ಲಿಯೂ ಸರ್ಚ್ ನಡೆದಿದೆ.

ಬೆಂಗಳೂರು ಸೂಪರಿಂಟೆಂಡೆಂಟ್ ಕುಮಾರಸ್ವಾಮಿ ಅವರಿಗೆ ಸಂಬಂಧಿಸಿದ ಒಟ್ಟು ಏಳು ಸ್ಥಳಗಳಲ್ಲಿ ನಡೆದ ದಾಳಿಯಲ್ಲಿ ಸುಮಾರು ₹3 ಕೋಟಿ 34 ಲಕ್ಷ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಇದರಲ್ಲೂ ₹1 ಕೋಟಿ 84 ಲಕ್ಷ ಮೌಲ್ಯದ ಏಳು ಸೈಟುಗಳ ದಾಖಲೆ, ₹1 ಕೋಟಿ 30 ಲಕ್ಷ ಮೌಲ್ಯದ ನಾಲ್ಕು ಮನೆಗಳ ದಾಖಲೆ, ಐದು ಎಕರೆ 30 ಗುಂಟೆ ಕೃಷಿ ಜಮೀನಿನ ದಾಖಲೆ, ₹22 ಲಕ್ಷ ನಗದು, ₹32 ಲಕ್ಷ ಮೌಲ್ಯದ ಚಿನ್ನಾಭರಣ, ₹22 ಲಕ್ಷ ಮೌಲ್ಯದ ವಾಹನಗಳು ಮತ್ತು ₹16 ಲಕ್ಷ ಮೌಲ್ಯದ ಬೆಲೆಬಾಳುವ ವಸ್ತುಗಳು ಸೇರಿವೆ.

ಮೈಸೂರಿನ ರೆವಿನ್ಯೂ ಇನ್ಸ್‌ಪೆಕ್ಟರ್ ರಾಮಸ್ವಾಮಿ ಅವರ ಮನೆಯಲ್ಲಿ 650 ಗ್ರಾಂ ಚಿನ್ನ, 5 ಕೆಜಿ ಬೆಳ್ಳಿ, ₹2.50 ಲಕ್ಷ ನಗದು ಜೊತೆಗೆ ಹಲವು ಆಸ್ತಿ ದಾಖಲೆಗಳು ಸಿಕ್ಕಿವೆ. ಐಷಾರಾಮಿ ಫಾರ್ಮ್‌ಹೌಸ್ ನಿರ್ಮಿಸಿರುವ ಮಾಹಿತಿ ಕೂಡ ಅಧಿಕಾರಿಗಳಿಗೆ ಪತ್ತೆಯಾಗಿದೆ. ಇವರ ಜೊತೆಗೆ, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಸುಭಾಶ್ ಚಂದ್ರರ ಮನೆಯಲ್ಲಿ ₹1 ಲಕ್ಷ ನಗದು, 30 ಗ್ರಾಂ ಚಿನ್ನ, 18 ಎಕರೆ ಜಮೀನಿನ ದಾಖಲಾತಿ ಹಾಗೂ ಐದು ಸೈಟುಗಳ ಮಾಹಿತಿ ದೊರೆತಿದೆ. ಇವರ ಬ್ಯಾಂಕ್ ಲಾಕರ್‌ಗಳನ್ನು ಇನ್ನೂ ತೆರೆಯಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss