ನೋಡಿ ಮಾತಾಡಿ, ನಾ ಮೋದಿಗೇ ಹೆದ್ರಿಲ್ಲ… – DK

ಕರ್ನಾಟಕ ಅಪಾರ್ಟ್‌ಮೆಂಟ್ ವಿಧೇಯಕ–2025 ಕುರಿತು ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳ ಪ್ರತಿನಿಧಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದ ವೇಳೆ, ಕಿರಣ್ ಹೆಬ್ಬಾರ್ ಎಂಬಾತ ತಮಗೆ ಬರೆದಿದ್ದ ಪತ್ರವನ್ನು ಡಿಕೆ.ಶಿವಕುಮಾರ್ ವೇದಿಕೆಯ ಮೇಲೆಯೇ ಓದಿ ಪ್ರತಿಕ್ರಿಯಿಸಿದರು. ಆ ಪತ್ರದಲ್ಲಿ ತಾನು ಅಪಾರ್ಟ್‌ಮೆಂಟ್ ಮಾಲಿಕ ಎಂದು ಹೇಳಿಕೊಂಡಿರುವ ಕಿರಣ್ ಹೆಬ್ಬಾರ್, ಸರ್ಕಾರಕ್ಕೆ ಎಚ್ಚರಿಕೆ ನೀಡುವ ಭಾಷೆಯಲ್ಲಿ ಪತ್ರ ಬರೆದಿದ್ದು, ಆಡಳಿತ ಪಕ್ಷ ಅಪಾರ್ಟ್‌ಮೆಂಟ್ ನಿವಾಸಿಗಳ ಮನವಿಗೆ ಸ್ಪಂದಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿರುವುದಾಗಿ ಡಿಕೆ.ಶಿವಕುಮಾರ್ ಹೇಳಿದರು.

ಈ ಕುರಿತು ಕಿಡಿಕಾರಿದ ಡಿಕೆಶಿ, ಸರ್ಕಾರಕ್ಕೆ ಬೆದರಿಕೆ ಹಾಕುವುದು, ಎಚ್ಚರಿಕೆ ಕೊಡುವುದು ನಡೆಯಲ್ಲ. ದೇಶದ ಪ್ರಧಾನಿ ಹಾಗೂ ಗೃಹ ಸಚಿವರಿಗೂ ಹೆದರದೇ ಜೈಲಿಗೆ ಹೋಗಿ ಬಂದವನು ನಾನು. ಇನ್ನು ಅವನ್ಯಾರೋ ಹೆಬ್ಬಾರ್‌ಗೆ ನಾನು ಹೆದರುವುದಿಲ್ಲ” ಎಂದು ತೀವ್ರವಾಗಿ ಪ್ರತಿಕ್ರಿಯಿಸಿದರು. ಯಾರೇ ಆಗಲಿ, ಯಾರ ಜೊತೆ ಮಾತನಾಡುತ್ತಿದ್ದೇವೆ ಎಂಬ ಕನಿಷ್ಠ ಅರಿವು ಇರಬೇಕು. ಯಾರಿಗೂ ನಾನು ಹೆದರುವುದಿಲ್ಲ, ಜಗ್ಗುವುದಿಲ್ಲ ಎಂದು ಡಿಕೆ.ಶಿವಕುಮಾರ್ ಹೇಳಿದರು.

ಅಪಾರ್ಟ್‌ಮೆಂಟ್ ನಿವಾಸಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ನಿಮ್ಮ ಸೇವೆಗಾಗಿ ಇದೆ. ನಿಮ್ಮ ಅಭಿಪ್ರಾಯ ಪಡೆಯುವ ಕಡ್ಡಾಯವೂ ನಮಗಿರಲಿಲ್ಲ. ಪ್ರೀತಿ ಮತ್ತು ವಿಶ್ವಾಸದ ಮೇರೆಗೆ ನಿಮ್ಮನ್ನು ಆಹ್ವಾನಿಸಿದ್ದೇವೆ. ನಿಮ್ಮ ಸೇವೆ ಮಾಡಿದರೆ ನೀವು ನಮಗೆ ಮತ ಹಾಕುತ್ತೀರಿ ಎಂಬ ನಂಬಿಕೆಯಷ್ಟೇ ನಮ್ಮ ಆಸೆ ಎಂದು ಹೇಳಿದರು.

ಪಂಚ ಗ್ಯಾರಂಟಿ ಯೋಜನೆಗಳನ್ನು ಕೊಟ್ಟ ಮಾತಿನಂತೆ ಜಾರಿಗೆ ತಂದಿದ್ದೇವೆ. ಅಪಾರ್ಟ್‌ಮೆಂಟ್ ನಿವಾಸಿಗಳಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡಲಾಗಿದೆ. ಕಾವೇರಿ ಐದನೇ ಹಂತದ ಕುಡಿಯುವ ನೀರಿನ ಯೋಜನೆ ಜಾರಿಗೆ ತಂದು, ನೀರಿನ ಸಂಪರ್ಕ ಪಡೆದು ಒಂದು ವರ್ಷ ತಡವಾಗಿ ಹಣ ಪಾವತಿಸಲು ಅವಕಾಶ ನೀಡಲಾಗಿದೆ. ಜೊತೆಗೆ ಕಾವೇರಿ ಆರನೇ ಹಂತದ ಯೋಜನೆಯ ರೂಪರೇಖೆಯೂ ಸಿದ್ಧವಾಗಿದೆ ಎಂದು ತಿಳಿಸಿದರು.

ನಾನು ಕೂಡ ಸಾವಿರಾರು ಅಪಾರ್ಟ್‌ಮೆಂಟ್ ಕಟ್ಟಿದ್ದೇನೆ, ಅಪಾರ್ಟ್‌ಮೆಂಟ್‌ಗಳಿಗೆ ಜಾಗ ಒದಗಿಸಿದ್ದೇನೆ. ಚುನಾವಣೆಗಳನ್ನು ಹೇಗೆ ನಡೆಸಬೇಕು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಪ್ರತಿ ಅಪಾರ್ಟ್‌ಮೆಂಟ್‌ನಲ್ಲಿ ಯಾರಿಗೆ ಎಷ್ಟು ಮತ ಬೀಳುತ್ತದೆ ಎಂಬುದೂ ನನಗೆ ತಿಳಿದಿದೆ. ಆದರೂ ನಾವು ಬೆದರಿಕೆ ರಾಜಕಾರಣವಲ್ಲ, ಸೇವೆಯ ಮೂಲಕ ವಿಶ್ವಾಸ ಗೆಲ್ಲಲು ಬಯಸುತ್ತೇವೆ ಎಂದು ಡಿಕೆ.ಶಿವಕುಮಾರ್ ಹೇಳಿದರು. ನಾನು ನೇರವಾಗಿ, ಕಟುವಾಗಿ ಮತ್ತು ದಿಟ್ಟವಾಗಿ ಮಾತನಾಡಿದ್ದೇನೆ. ಇದಕ್ಕೆ ಯಾರೂ ಬೇಸರ ಮಾಡಿಕೊಳ್ಳಬಾರದು. ಬೆದರಿಸಿದರೆ ಕೆಲಸ ಆಗುತ್ತದೆ ಎಂಬ ಭ್ರಮೆಯಲ್ಲಿ ಯಾರೂ ಇರಬಾರದು ಎಂದು ಉಪಮುಖ್ಯಮಂತ್ರಿ ಎಚ್ಚರಿಸಿದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author