Friday, November 21, 2025

Latest Posts

ಸ್ವಾಮಿಯೇ ಅಯ್ಯಪ್ಪ ಕಾಪಡಪ್ಪ! ಶಬರಿಮಲೆ ಯಾತ್ರೆಗೆ ಕೋರ್ಟ್ ಬ್ರೇಕ್

- Advertisement -

ಶಬರಿಮಲೆ ದೇಗುಲದಲ್ಲಿ ಮಂಡಲ–ಮಕರವಿಳಕ್ಕು ಯಾತ್ರೆ ಆರಂಭಗೊಂಡ ಹಿನ್ನೆಲೆಯಲ್ಲಿ ಭಕ್ತರ ಭಾರೀ ಒಳಹರಿವು ಕಂಡುಬಂದಿದೆ. ಯಾತ್ರಿಕರ ಕಾಲ್ತುಳಿತ ಮತ್ತು ಹೆಚ್ಚುತ್ತಿರುವ ಜನಸಂದಣಿಯನ್ನು ನಿಭಾಯಿಸುವ ಸಲುವಾಗಿ, ಕೇರಳ ಹೈಕೋರ್ಟ್ ಮಹತ್ವದ ನಿರ್ದೇಶನಗಳನ್ನು ನೀಡಿದೆ. ಸ್ಪಾಟ್‌ ಬುಕ್ಕಿಂಗ್‌ಗಳನ್ನು ದಿನಕ್ಕೆ ಗರಿಷ್ಠ ಐದು ಸಾವಿರಕ್ಕೆ ಸೀಮಿತಗೊಳಿಸಲಾಗಿದ್ದು, ದೈನಂದಿನ ದರ್ಶನ ಮಿತಿಯನ್ನು 75 ಸಾವಿರಕ್ಕೆ ಇಳಿಕೆ ಮಾಡಲಾಗಿದೆ.

ಬುಧವಾರ ನಡೆದ ವಿಚಾರಣೆಯಲ್ಲಿ, ನ್ಯಾಯಮೂರ್ತಿಗಳು ರಾಜಾ ವಿಜಯರಾಘವನ್ ಮತ್ತು ಕೆ.ವಿ. ಜಯಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಸ್ಪಾಟ್ ಬುಕಿಂಗ್ ಮೂಲಕ ಯಾತ್ರೆಗೆ ಆಗಮಿಸುವವರ ಸಂಖ್ಯೆ ದಿನಕ್ಕೆ 30 ಸಾವಿರದ ಮೀರಿರುವುದನ್ನು ಗಮನಿಸಿ, ಇದು ಹಿಂದಿನ 20 ಸಾವಿರ ಮಿತಿಯನ್ನು ತುಂಬಾ ಮೀರಿದೆ ಎಂದು ಅಭಿಪ್ರಾಯಪಟ್ಟಿತು. ಸಲ್ಲಿಕೆಯಾಗಿದ ವರದಿಯ ಪ್ರಕಾರ, ಆ ದಿನ ಒಟ್ಟು ಒಂದು ಲಕ್ಷಕ್ಕೂ ಹೆಚ್ಚು ಯಾತ್ರಿಕರ ಆಗಮನ ದಾಖಲಾಗಿದೆ, ಅವರಲ್ಲಿ ಅನೇಕರು ನಿಗದಿತ ದರ್ಶನ ಸಮಯಕ್ಕಿಂತ ಮೊದಲು ತಲುಪಿದ್ದರು.

ಈ ಹಿನ್ನೆಲೆಯಲ್ಲಿ, ಎರುಮೇಲಿ, ನೀಲಕ್ಕಲ್, ಪಂಬಾ, ವಂಡಿಪೆರಿಯಾರ್ ಮತ್ತು ಚೆಂಗನ್ನೂರ್ ರೈಲು ನಿಲ್ದಾಣಗಳಲ್ಲಿ ನಡೆಯುವ ಸ್ಪಾಟ್ ಬುಕ್ಕಿಂಗ್‌ಗಳ ಸಂಖ್ಯೆ ಮೇಲ್ಕಂಡ ಮಿತಿಯನ್ನು ಮೀರಬಾರದು ಎಂದು ತಿರುವಾಂಕೂರು ದೇವಸ್ವಂ ಮಂಡಳಿಗೆ (ಟಿಡಿಬಿ) ನ್ಯಾಯಾಲಯ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಪವಿತ್ರ ಮೆಟ್ಟಿಲುಗಳಲ್ಲಿ ಯಾತ್ರಿಕರ ಚಲನವಲನವನ್ನು ನಿಯಂತ್ರಿಸಲು ಭಾರತೀಯ ಮೀಸಲು ಬೆಟಾಲಿಯನ್ (IRB) ಅಧಿಕಾರಿಗಳನ್ನು ನಿಯೋಜಿಸಲಾಗುವುದೆಂಬ ಸರ್ಕಾರಿ ವಕೀಲರ ಭರವಸೆಯನ್ನೂ ಪೀಠ ದಾಖಲಿಸಿಕೊಂಡಿದೆ.

ಯಾತ್ರಿಕರಿಗೆ ಕುಡಿಯುವ ನೀರು, ಉಪಾಹಾರ ಮತ್ತು ಇತರ ಮೂಲಭುತ ಸೌಲಭ್ಯಗಳನ್ನು ನಿರಂತರವಾಗಿ ಒದಗಿಸಲು ಟಿಡಿಬಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದ್ದು, ಇತ್ತೀಚಿನ ವಿಚಾರಣೆಯಲ್ಲಿ ಜನಸಂದಣಿ ನಿರ್ವಹಣೆಯಲ್ಲಿ ಕಂಡುಬಂದ ಲೋಪಗಳಿಗಾಗಿ ನ್ಯಾಯಾಲಯ ಟಿಡಿಬಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಸನ್ನಿಧಾನದ ಮೇಲ್ಸೇತುವೆ ಪ್ರದೇಶದಲ್ಲಿ ಗಾತ್ರವಿರುವ ಉದ್ದನೆಯ ಸಾಲುಗಳು, ನೈರ್ಮಲ್ಯಕ್ಕೆ ಸಂಬಂಧಿಸಿದ ಮೂಲಸೌಕರ್ಯಗಳ ಕೊರತೆ, ಕುಡಿಯುವ ನೀರಿನ ಅಭಾವ — ಇವೆಲ್ಲವು ಯಾತ್ರಿಕರ ಜೀವಕ್ಕೆ ಅಪಾಯ ಉಂಟುಮಾಡುವಂತಹ ಪರಿಸ್ಥಿತಿಯಾಗಿದೆ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.

ಟಿಡಿಬಿ ಪ್ರತಿ ದಿನ 90 ಸಾವಿರ ಯಾತ್ರಾರ್ಥಿಗಳಿಗೆ ಅವಕಾಶ ಕಲ್ಪಿಸುವ ಯೋಜನೆಯಲ್ಲಿತ್ತು, ಇದರಲ್ಲಿ 20 ಸಾವಿರ ಸ್ಪಾಟ್‌ ಬುಕ್ಕಿಂಗ್‌ಗಳನ್ನು ಒಳಗೊಂಡಿತ್ತು. ಆದರೆ ಮಂಡಲ–ಮಕರವಿಳಕ್ಕು ಅವಧಿಯ ಭಾರಿ ಜನಸಂದಣಿ ಮತ್ತು ಮೂಲಸೌಕರ್ಯದ ಅಭಾವವನ್ನು ಪರಿಗಣಿಸಿದಾಗ, ಕಠಿಣ ಮಿತಿ ಜಾರಿಗೆ ತರಬೇಕೆಂಬ ತೀರ್ಮಾನ ಸುಸಂಗತ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss