ದಸರಾ ಹಬ್ಬದ ಸಂಭ್ರಮದಲ್ಲಿರುವ ದೇಶದ ಜನರಿಗೆ ಬೆಲೆ ಏರಿಕೆಯ ಶಾಕ್ ಸಿಕ್ಕಿದೆ. ತೈಲ ಕಂಪನಿಗಳು ದೇಶಾದ್ಯಂತ ಎಲ್‌ಪಿಜಿ ದರವನ್ನು ಪರಿಷ್ಕರಿಸಿ, ನೂತನ ಪಟ್ಟಿ ಘೋಷಣೆ ಮಾಡಿದೆ. ಚಿನ್ನದ ಬೆಲೆ ಏರಿಕೆಯಿಂದ ಸುಸ್ತಾಗಿರುವ ಜನರಿಗೆ ಈಗ ಎಲ್‌ಪಿಜಿ ದರ ಏರಿಕೆಯ ಬಿಸಿ ಕೂಡ ತಟ್ಟಲಿದೆ.
ದಸರಾ ಹಬ್ಬದ ಜೋಶ್‌ಗೆ ಸರಿಯಾಗಿ ಬೆಲೆ ಏರಿಕೆ ಮಾಡುವ ಮೂಲಕ ಪೆಟ್ರೋಲಿಯಂ ಕಂಪನಿಗಳು ಗ್ರಾಹಕರಿಗೆ ಹೊಸ ಶಾಕ್ ನೀಡಿವೆ. ಅಕ್ಟೋಬರ್ 1 ರಿಂದ ದೇಶದ ಪ್ರಮುಖ ನಗರಗಳಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಹೆಚ್ಚಾಗಿದೆ. ಗೃಹಬಳಕೆಗೆ ಬಳಸುವ 14.2 ಕೆಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಇಂಡಿಯನ್ ಆಯಿಲ್ ಕಂಪನಿ ವಾಣಿಜ್ಯ ಸಿಲಿಂಡರ್‌ಗಳ ಹೊಸ ಬೆಲೆಗಳನ್ನು ನಿಗಧಿ ಮಾಡಿದೆ. ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಈಗ ₹1595.50ಗೆ ಲಭ್ಯವಿದೆ. ನಿನ್ನೆಗೆ ಇದು ₹1580 ರಷ್ಟಿತ್ತು. ಇಂದಿಗೆ ₹15.50 ರಷ್ಟು ಹೆಚ್ಚಾಗಿದೆ. ಅದೇ ರೀತಿ, ಹೈದರಾಬಾದ್, ಕೋಲ್ಕತ್ತಾ, ಮುಂಬೈ ಮತ್ತು ಚೆನ್ನೈನಂತಹ ನಗರಗಳಲ್ಲಿಯೂ ಸಹ ಸರಾಸರಿ ₹15–₹16 ರಷ್ಟು ಬೆಲೆಗಳು ಹೆಚ್ಚಾಗಿದೆ. ಇದು ವಾಣಿಜ್ಯ ಸಮುದಾಯಕ್ಕೆ, ವಿಶೇಷವಾಗಿ ಹೋಟೆಲ್ ಮತ್ತು ರೆಸ್ಟೋರೆಂಟ್ ವಲಯಗಳಿಗೆ ಹೆಚ್ಚುವರಿ ಹೊರೆಯಾಗಲಿದೆ.
ಗೃಹಬಳಕೆಯ ಸಿಲಿಂಡರ್ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದೇಶೀಯ ಸಿಲಿಂಡರ್ ಬೆಲೆಗಳು ಬದಲಾಗದೆ ಹಾಗೇ ಉಳಿದಿವೆ. ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್ ₹853, ಬೆಂಗಳೂರಿನಲ್ಲಿ ₹855.5 ಇದೆ. 19 ಕೆಜಿ ಸಿಲಿಂಡರ್ ಬೆಲೆ ಬೆಂಗಳೂರಲ್ಲಿ 1,699 ರೂಪಾಯಿ ಆಗಿದೆ. ಬೆಂಗಳೂರಿನಲ್ಲಿಯೂ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 51 ರೂಪಾಯಿ ಏರಿಕೆಯಾಗಿದೆ.
ಭಾರತದಲ್ಲಿ LPG ಬೆಲೆಗಳ ಮೇಲೆ ಹಲವಾರು ಅಂಶಗಳು ಪ್ರಭಾವ ಬೀರುತ್ತೆ. ಅಂತರರಾಷ್ಟ್ರೀಯ LPG ಬೆಲೆಗಳು, ಕಚ್ಚಾ ತೈಲ ಬೆಲೆಗಳಲ್ಲಿನ ಬದಲಾವಣೆಗಳು, ರೂಪಾಯಿ-ಡಾಲರ್ ವಿನಿಮಯ ದರ, ಕಸ್ಟಮ್ಸ್ ಸುಂಕಗಳು, ಡೀಲರ್ ಕಮಿಷನ್ ಗಳು ಮತ್ತು ಬಂದರು ಶುಲ್ಕಗಳು ಪ್ರಮುಖ ಅಂಶಗಳಾಗಿವೆ. ಜಾಗತೀಕ ಮಾರುಕಟ್ಟೆಯಲ್ಲಿ ಇಂಧನ ಬೆಲೆ ಏರಿಳಿತ ಮತ್ತು ವಿದೇಶಿ ವಿನಿಮಯ ದರಗಳಲ್ಲಿನ ಏರಿಳಿತಗಳು ದರ ವ್ಯತ್ಯಾಸದ ಮೇಲೆ ಪರಿಣಾಮ ಬೀರುತ್ತದೆ. ಈ ಮಾರುಕಟ್ಟೆ ವ್ಯತ್ಯಾಸಗಳನ್ನು ಗಮನದಲ್ಲಿಟ್ಟುಕೊಂಡು ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನ ಬೆಲೆಗಳನ್ನು ಪರಿಷ್ಕರಿಸುತ್ತವೆ.