ಹುಚ್ಚು ನಾಯಿಯ ಅಟ್ಟಹಾಸ, ಬೀದರ್ ಜಿಲ್ಲೆಯಲ್ಲಿ ಆತಂಕ!

ಬೀದರ್ ನ ಭಾಲ್ಕಿ ತಾಲ್ಲೂಕಿನ ಕಣಜಿ ಗ್ರಾಮದಲ್ಲಿ ಸೋಮವಾರ ಮಗು ಸೇರಿದಂತೆ ಸುಮಾರು 12 ಜನರಿಗೆ ಹುಚ್ಚು ನಾಯಿ ಕಡಿದ ಘಟನೆ ನಡೆದಿದ್ದು, ಗ್ರಾಮದ ಜನರಲ್ಲಿ ಭೀತಿ ಮನೆ ಮಾಡಿದೆ. ಮನೆ ಮುಂಭಾಗದಲ್ಲಿ ಕುಳಿತಿದ್ದವರು, ರಸ್ತೆ ಮೂಲಕ ನಡೆದುಕೊಂಡು ಹೋಗುತ್ತಿದ್ದವರು ಹಾಗೂ ಆಟವಾಡುತ್ತಿದ್ದ ಮಕ್ಕಳ ಮೇಲೆ ನಾಯಿ ಅಕಸ್ಮಿಕವಾಗಿ ದಾಳಿ ಮಾಡಿದೆ.

ಇದರಿಂದ ಕೆಲವರಿಗೆ ಕೈ, ತೋಳು, ಕಾಲು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಗಾಯಗಳಾಗಿವೆ. ಗಾಯಗೊಂಡ ಕೆಲವರು ಸರ್ಕಾರಿ ಆಸ್ಪತ್ರೆಯಲ್ಲಿ, ಇನ್ನು ಕೆಲವರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಘಟನೆಯ ನಂತರ ಕೆಲವು ಯುವಕರು ನಾಯಿಯನ್ನು ಹಿಡಿಯಲು ಪ್ರಯತ್ನಿಸಿದರೂ, ಅದು ಕೈಗೆ ಸಿಗದೇ ಹೊಲದೊಳಗೆ ಓಡಿ ಹೋಗಿದೆ. ಈ ಹಿನ್ನೆಲೆ ಗ್ರಾಮದಲ್ಲಿ ನಾಯಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣ ಕ್ರಮ ಕೈಗೊಳ್ಳಬೇಕೆಂದು ಪಂಚಾಯಿತಿ ಅಧಿಕಾರಿಗಳಿಗೆ ನಿವಾಸಿಗಳು ಮನವಿ ಮಾಡಿದ್ದಾರೆ.

ನಾಯಿ ಕಡಿತಕ್ಕೆ ಒಳಗಾದವರಲ್ಲಿ ಎರಡು ವರ್ಷದ ಮಗು ಹಾಗೂ ನಾಲ್ವರು ವಯೋವೃದ್ಧರು ಸೇರಿ ಒಟ್ಟು ಆರು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಲ್ಲರಿಗೂ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಕೃಷ್ಣಾ ತಿಳಿಸಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author